ಬೆಂ.ಗ್ರಾ.ಜಿಲ್ಲೆ: ಕಿರು ಆಹಾರ ಸಂಸ್ಕರಣಾ ಘಟಕಗಳು ಸ್ಥಾಪಿಸಲು ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ದಗೊಳಿಸುವಿಕೆ (PMFME) ಯೋಜನೆ ಅನುಷ್ಠಾನಗೊಳಿಸಿದ್ದು ಸಾರ್ವಜನಿಕರಿಗೆ ಯೋಜನೆಯ ಬಗ್ಗೆ ಅರಿವು ಮೂಡಿಸಿ ಎಂದು ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಸೈಯಿದಾ ಅಯಿಷಾ (Syeda Ayesha) ಅವರು ತಿಳಿಸಿದರು.
ಕರ್ನಾಟಕ ರಾಜ್ಯ ಕೃಷಿ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ಇವರ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ದಗೊಳಿಸುವಿಕೆ (ಪಿ.ಎಮ್.ಎಫ್.ಎಮ್.ಇ) ಯೋಜನೆ ಅರಿವು ಮೂಡಿಸುವ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು
ಜಿಲ್ಲೆಯಲ್ಲಿ ಇಲ್ಲಿಯವರೆಗೂ ಪಿಎಂಎಫ್ಎಂಇ ಯೋಜನೆಯಡಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಸ್ಥಾಪನೆಗೆ ಯೋಜನೆ ಅಡಿಯಲ್ಲಿ ಶೇಕಡ 50 ರಷ್ಟು ಅಥವಾ ಗರಿಷ್ಠ ರೂ 15 ಲಕ್ಷ ಸಹಾಯಧನ ನೀಡಲಾಗುವುದು. ಜಿಲ್ಲೆಯಲ್ಲಿ 93 ಅರ್ಜಿಗಳು ಬಂದಿದ್ದು, ಹೊಸ ಉದ್ದಿಮೆ ನಡೆಸಲು ಹಿಚ್ಚಿಸುವವರಿಗೆ ಈ ಯೋಜನೆ ಸೂಕ್ತವಾಗಿದೆ. ವೈಯಕ್ತಿಕ ಉದ್ದಿಮೆದಾರರು, ಪಾಲುದಾರಿಕೆ ಸಂಸ್ಥೆಗಳು, ಖಾಸಗಿ ಕಂಪನಿಗಳು, ರೈತ ಉತ್ಪಾದಕ ಸಂಸ್ಥೆಗಳು, ಸ್ವಸಹಾಯ ಸಂಘಗಳು, ಸಹಕಾರಿ ಸಂಘಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಅರ್ಜಿ ಸಲ್ಲಿಸಬಹುದು. 18 ವರ್ಷ ಮೇಲ್ಪಟ್ಟವರು ಈ ಯೋಜನೆಯನ್ನು ಪಡೆಯಬಹುದು.
ಸಿರಿಧಾನ್ಯ ಸಂಸ್ಕರಣೆ, ಬೆಲ್ಲ ಉತ್ಪಾದನೆ, ಎಣ್ಣೆ ಗಾಣಗಳು, ಬೇಕರಿ ಉತ್ಪನ್ನಗಳು ಮಸಾಲೆಪುಡಿ ಘಟಕಗಳು, ಶುಂಠಿ ಸಂಸ್ಕರಣೆ, ತೆಂಗಿನ ಉತ್ಪನ್ನಗಳು, ವಿವಿಧ ಹಣ್ಣು ಮತ್ತು ತರಕಾರಿ ಉತ್ಪನ್ನಗಳು,ಕುಕ್ಕುಟ ಉತ್ಪನ್ನಗಳು ಮತ್ತು ಸಾಗರೋತ್ಪನ್ನಗಳು ಸೇರಿ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಗೆ ಪಿ.ಎಂ.ಎಫ್ .ಎಂ.ಇ ಯೋಜನೆಯಡಿ ಶೇ.50 ಸಹಾಯಧನವಿದೆ.
ಈ ಯೋಜನೆಯಡಿ ಸಲ್ಲಿಸಿದ ಅರ್ಜಿಗಳನ್ನು ಬ್ಯಾಂಕುಗಳು ಶೀಘ್ರವಾಗಿ ವಿಲೇವಾರಿ ಮಾಡಬೇಕು. ಈ ಬಗ್ಗೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಕ್ರಮ ವಹಿಸಿ. ತಿರಸ್ಕೃತ ಅರ್ಜಿಗಳಿಗೆ ನಿಖರ ಕಾರಣ ನೀಡಿ. ಸಮಸ್ಯೆ ಇದ್ದಲ್ಲಿ ಪರಿಹಾರ ಕಂಡುಕೊಳ್ಳಿ. ಇಲಾಖಾ ಅಧಿಕಾರಿಗಳು ಬ್ಯಾಂಕ್ ಅಧಿಕಾರಿಗಳೊಂದಿಗೆ ಸಮನ್ವಯ ಹೊಂದಿರಬೇಕು. ಆರ್ಥಿಕ ನೆರವು ಪಡೆಯಲು ಸಾರ್ವಜನಿಕರಿಗೆ ಹೆಚ್ಚಿನ ಪ್ರಚಾರ ನೀಡಿ ಅರಿವು ಮೂಡಿಸುವುದರೊಂದಿಗೆ ಯೋಜನೆಯ ಸೌಲಭ್ಯ ಪಡೆದುಕೊಳ್ಳುವಂತಾಗಬೇಕು ಎಂದರು.
ಆಸಕ್ತರು ಅರ್ಜಿ ಸಲ್ಲಿಸಲು ಆಯಾ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳು, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ (ಕೆಪೆಕ್) ಸಂಸ್ಥೆಯ ಯೋಜನಾ ನಿರ್ವಹಣಾ ಘಟಕ ಅಥವಾ ದೂರವಾಣಿ ಸಂಖ್ಯೆ 0802271192/93/96/97 ಸಂಪರ್ಕಿಸಬಹುದಾಗಿದೆ.
ಕಾರ್ಯಕ್ರಮದಲ್ಲಿ ಜಂಟಿ ಕೃಷಿ ನಿರ್ದೇಶಕರಾದ ಕಲಾವತಿ, ಉಪ ನಿರ್ದೇಶಕರಾದ ಗಾಯತ್ರಿ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ವಿಠಲ್ ಕಾವ್ಳೆ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಗುಣವಂತ, ರೇಷ್ಮೆ ಇಲಾಖೆಯ ಉಪ ನಿರ್ದೇಶಕರಾದ ಸತೀಶ್, ಲೀಡ್ ಬ್ಯಾಂಕ್ ಮ್ಯಾನೇಜರ್ ರಾಮಾಂಜಿನಯ್ಯ, ಕೃಷಿ ಇಲಾಖೆ, ಕೆಪೆಕ್ ಸಂಸ್ಥೆಯ ಸಿಬ್ಬಂದಿ, ಕಿರು ಉದ್ದಿಮೆದಾರರು ಉಪಸ್ಥಿತರಿದ್ದರು.