ರಾಯಚೂರು: ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ದೇವದುರ್ಗ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕಿ (JDS MLA) ಕರೆಮ್ಮ ಜಿ. ನಾಯಕ್ (Karemma G. Naik) ಅವರು ತೆರಳುತ್ತಿದ್ದ ಕಾರು ಅಪಘಾತಕ್ಕೀಡಾಗಿರುವ ಘಟನೆ (Car Accident) ಲಿಂಗಸೂರು ತಾಲೂಕಿನ ಗುರುಗುಂಟಾ ಬಳಿ ಸಂಭವಿಸಿದೆ.
ಈ ವೇಳೆ ಕಾರಿನಲ್ಲಿದ್ದ ಶಾಸಕಿ ಕರೆಮ್ಮ ಅವರಿಗೆ ಗಂಭೀರವಾದ ಪೆಟ್ಟು ಬಿದ್ದಿದ್ದು ತಕ್ಷಣವೇ ಲಿಂಗಸೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಲಿಂಗಸೂರು ಸರ್ಕಾರಿ ಆಸ್ಪತ್ರೆಗೆ ಶಾಸಕಿ ಕರೆಮ್ಮಜಿ. ನಾಯಕ್ ದಾಖಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಘಟನೆಯಲ್ಲಿ ಶಾಸಕಿಯ ಕಾರು ಒವರ್‌ಟೇಕ್ ಮಾಡುತ್ತಿರುವಾಗ ಚಾಲಕನ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾಗಿದೆ.
ತಲೆಗೆ ಪೆಟ್ಟು
ಶಾಸಕಿ ಕರೆಮ್ಮ ಜಿ. ನಾಯಕ್ ಕಾರಿನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಅವರೊಂದಿಗೆ ಕೆಲವು ಸಹಾಯಕರು ಮತ್ತು ಚಾಲಕರೂ ಇದ್ದರು ಎನ್ನಲಾಗಿದೆ.
ಲಿಂಗಸೂರು ತಾಲೂಕಿನ ಗುರುಗುಂಟಾ ಗ್ರಾಮದ ಬಳಿ, ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಮತ್ತೊಂದು ವಾಹನವನ್ನು ಒವರ್‌ಟೇಕ್ ಮಾಡುವ ಪ್ರಯತ್ನದಲ್ಲಿ ಕಾರು ವೇಗವಾಗಿ ಮುಂದೆ ಸಾಗಿತ್ತು. ಆದರೆ, ಮುಂದೆ ಬೇರೆ ವಾಹನ ಇದ್ದಿದ್ದರಿಂದ ತಕ್ಷಣ ಬ್ರೇಕ್ ಹಾಕಿದ್ದಕ್ಕೆ ಚಾಲಕ ನಿಯಂತ್ರಣ ಕಳೆದುಕೊಂಡು ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.
ಈ ವೇಳೆ ಶಾಸಕಿ ತಲೆಗೆ ಗಂಭೀರ ಗಾಯವಾಗಿದೆ. ಸ್ಥಳೀಯರು ತಕ್ಷಣವೇ ಶಾಸಕಿಯನ್ನು ತಕ್ಷಣ ಲಿಂಗಸೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಚಾಲಕನಿಗೂ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಘಟನೆಯ ಸ್ಥಳಕ್ಕೆ ಲಿಂಗಸೂರು ಪೊಲೀಸ್ ಇನ್‌ಸ್ಪೆಕ್ಟರ್ ಮತ್ತು ಸ್ಥಳೀಯ ತಹಶೀಲ್ದಾರ್ ಆಗಮಿಸಿ, ತನಿಖೆ ಪ್ರಾರಂಭಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಚಾಲಕನ ವೇಗ ಮಿತಿ ಮೀರಿದ್ದು ಮುಖ್ಯ ಕಾರಣವಾಗಿದೆ. ಇಲ್ಲಿ ಆಗಾಗ ಅಪಘಾತಗಳು ನಡೆಯುತ್ತಿವೆ ಎಂದು ಸ್ಥಳೀಯರು ಆಕ್ಷೇಪಿಸುತ್ತಾರೆ.
ಸದ್ಯ ಕರೆಮ್ಮ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಶಾಸಕಿ ಕರೆಮ್ಮ ಬೆಂಬಲಿಗರು ಅವರ ಆರೋಗ್ಯ ಸುಧಾರಣೆಗಾಗಿ ಪ್ರಾರ್ಥಿಸುತ್ತಿದ್ದಾರೆ. (ಸಂಗ್ರಹ ಚಿತ್ರ ಬಳಸಲಾಗಿದೆ)