ದೊಡ್ಡಬಳ್ಳಾಪುರ: ಮನೆಯ ಸಮೀಪವೇ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದ್ವಿಚಕ್ರ ಸವಾರ ಯುವಕನೋರ್ವ ಸಾವನಪ್ಪಿದ್ದು, ಹಿಟ್ ಅಂಡ್ ರನ್ ಶಂಕೆ (Hit and run suspected) ವ್ಯಕ್ತವಾಗಿದೆ.

ಮೃತ ದುರ್ದೈವಿಯನ್ನು ತೋಡಲಬಂಡೆ ಗ್ರಾಮದ ನಿವಾಸಿ ನಾರಾಯಣ (25 ವರ್ಷ) ಎಂದು ಗುರುತಿಸಲಾಗಿದೆ.
ಮೃತನು ಭಾನುವಾರ ರಾತ್ರಿ ತೋಡಲಬಂಡೆ ಗ್ರಾಮದಿಂದ ಹೊರವಲಯದಲ್ಲಿರುವ ಮನೆಗೆ ದ್ವಿಚಕ್ರ ವಾಹನದಲ್ಲಿ ತೆರಳುವ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಗಂಭೀರವಾಗಿ ಗಾಯಗೊಂಡ ನಾರಾಯಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಮಾರ್ಗಮಧ್ಯದಲ್ಲಿ ಸಾವನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಇನ್ನೂ ಅಪಘಾತ ಸಂಭವಿಸಿದ ಸ್ಥಳದಲ್ಲಿ ಬೈಕ್ ಒಂದು ಕಡೆ ಇದ್ದರೆ, ಅದರಿಂದ ದೂರದಲ್ಲಿ ನಾರಾಯಣ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಪೋಷಕರಲ್ಲಿ ಅನುಮಾನಕ್ಕೆ ಕಾರಣವಾಗಿದ್ದು, ಯಾವುದಾದರೂ ವಾಹನ ಬೈಕ್‌ಗೆ ಗುದ್ದಿ ಪರಾರಿಯಾಗಿದೆಯೇ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.
ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ವರದಿಯಾಗಿದ್ದು, ದೂರು ನೀಡಲು ಪೋಷಕರು ಮುಂದಾಗಿದ್ದಾರೆ.