ಬೆಂ.ಗ್ರಾ.ಜಿಲ್ಲೆ: ಕೇಂದ್ರದಲ್ಲಿ ನಾನು ಎಂಎಸ್ಎಂಇ ಮಂತ್ರಿಯಾಗಿದ್ದಾಗ ಎಂಪ್ಲಾಯ್ಮೆಂಟ್ ಜನರೇಷನ್ ಪ್ರೋಗ್ರಾಮ್ ಅಡಿಯಲ್ಲಿ ಒಂದು ಲಕ್ಷ ಉದ್ದಿಮೆಗಳನ್ನು ಸ್ಥಾಪಿಸಲು ಅವಕಾಶ ಕಲ್ಪಿಸಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ (K.H. Muniyappa) ಹೇಳಿದರು.
ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಎಂ.ಎಸ್.ಎಂ.ಇ ಅಭಿವೃದ್ಧಿ ಕಚೇರಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದಲ್ಲಿ ನಡೆದ ಪ್ರಧಾನ ಮಂತ್ರಿ ವಿಶ್ವಕರ್ಮ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗಾಂಧೀಜಿಯವರ ಆಶಯದಂತೆ ಸ್ವದೇಶಿ ಉತ್ಪನ್ನಗಳನ್ನು ಹೆಚ್ಚು ಬಳಸಬೇಕು, ಪ್ರೊತ್ಸಾಹಿಸಬೇಕು. ಕೇಂದ್ರದಲ್ಲಿ ಎಂಎಸ್ಎಂಇ ಮಂತ್ರಿ ಆಗಿದ್ದಾಗ ದೇಶದಾದ್ಯಂತ ಒಂದು ಲಕ್ಷ ಕುಟುಂಬಗಳಿಗೆ 5 ರಿಂದ 25 ಲಕ್ಷದವರೆಗೆ ಸಬ್ಸಿಡಿ ನೀಡಿದ್ದೆವು. ಇದರಿಂದ ಒಂದು ಲಕ್ಷ ಉದ್ದಿಮೆಗಳು ಸ್ಥಾಪನೆಯಾಗಿ ಸುಮಾರು 8 ಲಕ್ಷ ಜನರು ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಇದರ ಉದ್ದೇಶ ವಿದ್ಯಾಭ್ಯಾಸ ಮುಗಿಸಿದ ವಿದ್ಯಾರ್ಥಿಗಳು ಉದ್ಯೋಗದಿಂದ ವಂಚಿತರಾಗುವುದನ್ನು ತಪ್ಪಿಸಲು, ಸ್ವತಃ ದುಡಿಮೆ ಮಾಡಲು ಸಾಕಾರ ಆಗುವಂತೆ ಪ್ರೋತ್ಸಾಹಿಸುವುದು.
ಕರಕುಶಲ, ಗುಡಿ ಕೈಗಾರಿಕೆಗಳು ಬಹಳ ಹಳೆಯ ಕಾಲದ ಸಾಂಪ್ರದಾಯಿಕ, ಪಾರಂಪರಿಕ ಕೈಗಾರಿಕೆಗಳಾಗಿವೆ. ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಡಲು ಗುಡಿ ಕೈಗಾರಿಕೆಗಳು ಸಹಕಾರಿಯಾಗಿದೆ. ಉತ್ಪನ್ನಗಳನ್ನು ತಯಾರಿಸಿ ಅವುಗಳನ್ನು ನಾವೇ ಮಾರಾಟ ಮಾಡಬೇಕು ಇದರಿಂದ ಆರ್ಥಿಕವಾಗಿ ಅಭಿವೃದ್ಧಿ ಕಾಣಲು ಸಾಧ್ಯ ಎಂದರು.
ಹಿಂದಿನ ಕಾಲದಲ್ಲಿ ವಸ್ತುಗಳನ್ನು ಸಂತೆಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಈಗ ಆಧುನಿಕತೆ, ತಂತ್ರಜ್ಞಾನ ಬೆಳೆದಂತೆ ಆನ್ಲೈನ್ ಮೂಲಕ ಮಾರಾಟ ಮತ್ತು ಕೊಳ್ಳುವಿಕೆ ಪ್ರಕ್ರಿಯೆ ನಡೆಯುತ್ತಿದೆ. ನಾವೇ ಉತ್ಪನ್ನಗಳನ್ನು ತಯಾರಿಸಿ ನಾವೇ ಮಾರಾಟ ಮಾಡುವ ಪ್ರವೃತ್ತಿ ಬೆಳೆಯಬೇಕು. ಸ್ವದೇಶಿ ಉತ್ಪನ್ನಗಳನ್ನು ಪ್ರೋತ್ಸಾಹಿಸಬೇಕು ಎಂದರು.
ಈ ತರಬೇತಿ ಕಾರ್ಯಕ್ರಮವು ಸಣ್ಣ ಕೈಗಾರಿಕೆ ಗುಡಿ ಕೈಗಾರಿಕೆ ಸ್ವಂತ ಉದ್ಯಮಗಳನ್ನು ಮಾಡುವ ಆಸಕ್ತರಿಗೆ, ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಸಹಕಾರಿಯಾಗಲಿದೆ. ಉತ್ಪನ್ನಗಳ ತಯಾರಿಕೆ , ಮಾರುಕಟ್ಟೆ ಸೌಲಭ್ಯ, ಸಾಲ ಸೌಲಭ್ಯ ಮುಂತಾದ ವಿಷಯಗಳ ಬಗ್ಗೆ ಈ ತರಬೇತಿಯಲ್ಲಿ ಮಾಹಿತಿ ಪಡೆದುಕೊಂಡು ಸದುಪಯೋಗ ಪಡಿಸಿಕೊಳ್ಳಿ ಎಂದರು.
ನೀವು ತಯಾರಿಸುವ ಗುಡಿ ಕೈಗಾರಿಕೆ ಉತ್ಪನ್ನಗಳು ಗುಣಮಟ್ಟದ್ದಾಗಿದ್ದರೆ ಮಾರುಕಟ್ಟೆಯಲ್ಲಿ ಒಳ್ಳೆಯ ಬೇಡಿಕೆ ಬರುತ್ತದೆ ಹಾಗೆ ಒಳ್ಳೆಯ ಲಾಭ ಕೂಡ ಗಳಿಸಬಹುದು ಹಾಗಾಗಿ ಗುಣಮಟ್ಟದ ಉತ್ಪನ್ನಗಳ ತಯಾರಿಕೆಗೆ ಹೆಚ್ಚಿನ ಆದ್ಯತೆ ನೀಡಿ ಎಂದು ಫಲಾನುಭವಿಗಳಿಗೆ ಕಿವಿ ಮಾತು ಹೇಳಿದರು.
ವಿಶ್ವಕರ್ಮ ಯೋಜನೆ
ಕೇಂದ್ರ ಸರ್ಕಾರವು ಸಾಂಪ್ರದಾಯಿಕ
ಉದ್ದಿಮೆಗಳನ್ನು ಉತ್ತೇಜಿಸಲು ವಿಶ್ವಕರ್ಮ ಯೋಜನೆ ಜಾರಿಗೆ ತಂದಿದೆ. ಬಡಗಿ (ಸುತಾರ್), ದೋಣಿ ತಯಾರಕರು, ಶಸ್ತ್ರಾಸ್ತ್ರ ತಯಾರಕರು, ಕಮ್ಮಾರ (ಲೋಹರ್), ಸುತ್ತಿಗೆ ಮತ್ತು ಟೂಲ್ ಕಿಟ್ ತಯಾರಕರು, ಬೀಗ ತಯಾರಕರು, ಚಿನ್ನಾರಿ (ಸೋನಾರ್), ಕುಂಬಾರ (ಕುಮ್ಹಾರ), ಶಿಲ್ಪಿ (ಮೂರ್ತಿಕಾರ, ಕಲ್ಲು ಕೆತ್ತುವವರು), ಕಲ್ಲು ಒಡೆಯುವವರು, ಚಮ್ಮಾರ (ಚರ್ಮಕಾರ)/ಪಾದರಕ್ಷೆ ತಯಾರಕರು, ಕಲ್ಲಿನ ಕೆಲಸಗಾರ (ರಾಜಮಿಸ್ತ್ರಿ), ಬುಟ್ಟಿ/ಚಾಪೆ/ಪೊರಕೆ ತಯಾರಕರು/ನಾರಿನ ಕೆಲಸಗಾರರು ಬೊಂಬೆ ಮತ್ತು ಆಟಿಕೆಗಳ ತಯಾರಕರು (ಸಾಂಪ್ರದಾಯಿಕ) ಕ್ಷೌರಿಕ, ಹೂಮಾಲೆ ತಯಾರಕರು, ಅಗಸ (ಧೋಬಿ), ಟೈಲರ್ (ದರ್ಜಿ) ಇಂತಹ 18 ವೃತ್ತಿ ಕೌಶಲ್ಯಗಳಿಗೆ ಉತ್ತೇಜನ ನೀಡಿ ಪ್ರೋತ್ಸಾಹ ನೀಡಲಾಗುವುದು ಎಂದರು.
ಮುಂದಿನ ದಿನಗಳಲ್ಲಿ ನೀವು ತಯಾರಿಸುವ ಉತ್ಪನ್ನಗಳಿಗೆ ಒಂದು ವಸ್ತು ಪ್ರದರ್ಶನ ಮಳಿಗೆ(ಎಕ್ಸಿಬಿಷನ್ ಸೆಂಟರ್) ಮಾಡಿ ಅಲ್ಲಿ ನಿಮ್ಮ ಉತ್ಪನ್ನಗಳ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗುವುದು ಈ ಬಗ್ಗೆ ಸೂಕ್ತ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಆರ್ಯ ವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ರಾಮ್ ಪ್ರಸಾದ್, ಜಿಲ್ಲಾಧಿಕಾರಿ ಎಬಿ ಬಸವರಾಜು, ಎಂ.ಎಸ್.ಎಂ.ಇ ಯ ಜಂಟಿ ನಿರ್ದೇಶಕರಾದ ದೇವರಾಜು ಕೆ, ಜಿಪಂ ಉಪಕಾರ್ಯದರ್ಶಿ ಶಿವಕುಮಾರ್, ಲೀಡ್ ಡಿಸ್ಟ್ರಿಕ್ ಮ್ಯಾನೇಜರ್ ರಾಮಾಂಜಿ, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಜಗನ್ನಾಥ.
ಎಂ ಎಸ್ ಎಂ ಇ ಕಾರ್ಯಕ್ರಮ ಸಂಯೋಜಕರಾದ ಕಸ್ತೂರಿ ಸಂದೇಶ್ ಸಾವನ್, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕರಾದ ಪುಷ್ಪಲತಾ, ಆಲೂರು ದುದ್ದನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜಯಲಕ್ಷ್ಮಮ್ಮ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕೆ.ಸಿ ಮಂಜುನಾಥ್, ವಿಶ್ವಕರ್ಮ ಯೋಜನೆಯ ಫಲಾನುಭವಿಗಳು, ಇತರರು ಉಪಸಿತರಿದ್ದರು.