ಮೈಸೂರು: ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಅತ್ಯಗತ್ಯವಾದ ಕಾರ್ಯಪರಿಸರ ಅತ್ಯುತ್ತಮವಾಗಿದ್ದು, ಇಲ್ಲಿ ಅತ್ಯುತ್ತಮ ಪ್ರತಿಭಾ ಸಂಪನ್ಮೂಲವಿದೆ. ಜೊತೆಗೆ ಸರಕಾರದ ಕೈಗಾರಿಕಾ ನೀತಿಗಳು ಚೆನ್ನಾಗಿವೆ. ರಾಜ್ಯದಿಂದ ಒಂದೇ ಒಂದು ಕೈಗಾರಿಕೆಯೂ ಇಲ್ಲಿಂದ ಹೊರಹೋಗಿಲ್ಲ. ಈ ವಿಚಾರವಾಗಿ ಹಬ್ಬಿಸುತ್ತಿರುವ ತಪ್ಪು ಕಲ್ಪನೆಯಿಂದ ಎಲ್ಲರೂ ಹೊರಬರಬೇಕಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ (M.B. Patila) ಹೇಳಿದ್ದಾರೆ.
ಬುಧವಾರ ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ್ದ ಅವರು, ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ಕಾಂಗ್ರೆಸ್ ಸರಕಾರ ಬಂದ ಮೇಲೆ ಕಳೆದ ಫೆಬ್ರವರಿಯಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಸಲಾಯಿತು. ಇದರ ಮೂಲಕ 10.27 ಲಕ್ಷ ಕೋಟಿ ರೂ. ಬಂಡವಾಳ ಹರಿದು ಬರುವ ಖಾತ್ರಿ ಸಿಕ್ಕಿತು. ಈ ಪೈಕಿ ಶೇಕಡ 60ಕ್ಕಿಂತ ಹೆಚ್ಚು ಬಂಡವಾಳ ಈಗಾಗಲೇ ನಮ್ಮಲ್ಲಿ ಹೂಡಿಕೆ ಮಾಡಲ್ಪಟ್ಟಿದೆ.
ನಾವು ಬರೀ ಮಾತನಾಡುವುದಿಲ್ಲ. ನುಡಿದಂತೆ ನಡೆಯುತ್ತಿದ್ದೇವೆ. ಈ ಹೂಡಿಕೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಗಳೂ ಸೃಷ್ಟಿಯಾಗುತ್ತಿವೆ ಎಂದು ಅವರು ವಿವರಿಸಿದ್ದಾರೆ.
ನಾನು ಕೈಗಾರಿಕಾ ಸಚಿವನಾದ ಮೇಲೆ ಹಲವು ದೇಶಗಳಿಗೆ ಭೇಟಿ ಕೊಟ್ಟು, ಹೂಡಿಕೆದಾರರನ್ನು ರಾಜ್ಯಕ್ಕೆ ಕರೆತರುತ್ತಿದ್ದೇನೆ.
ಫಾಕ್ಸ್ ಕಾನ್ ತರಹದ ದೈತ್ಯ ಕಂಪನಿಯು ತೈವಾನ್ ನಂತರದ ತನ್ನ ಬೃಹತ್ ಘಟಕವನ್ನು ನಮ್ಮಲ್ಲಿ ಆರಂಭಿಸಿದೆ. ಇಲ್ಲಿಂದ ದುಬಾರಿ ಮೊಬೈಲ್ ಫೋನುಗಳು ರಫ್ತಾಗಿ ಹೋಗುತ್ತವೆ.
ಜಪಾನ್ ತರಹದ ಸಂಪ್ರದಾಯವಾದಿ ದೇಶದಿಂದ ಕಳೆದ ಎರಡು ವರ್ಷಗಳಲ್ಲಿ ರಾಜ್ಯಕ್ಕೆ 10,500 ಕೋಟಿ ರೂ. ಬಂಡವಾಳ ಹೂಡಿಕೆಯ ಖಾತ್ರಿ ಸಿಕ್ಕಿದೆ. ಸಾಮಾನ್ಯವಾಗಿ ಅಲ್ಲಿ ಕುಟುಂಬ ಪರಿವಾರಗಳೇ ಕೈಗಾರಿಕೆ ನಡೆಸುವುದರಿಂದ, ನಿರ್ಧಾರ ತೆಗೆದುಕೊಳ್ಳುವುದು ನಿಧಾನವಾಗುತ್ತದೆ. ಆದರೂ ನಮ್ಮ ವಿಚಾರದಲ್ಲಿ ಎಲ್ಲವೂ ತ್ವರಿತ ಗತಿಯಲ್ಲಿ ಸಂಭವಿಸಿದೆ. ಒಸಾಕಾವಾ ಕಂಪನಿ ಕೂಡ ಹೂಡಿಕೆ ಮಾಡಲು ಬಂದಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ನಮ್ಮಲ್ಲಿ ಸೆಮಿಕಂಡಕ್ಟರ್ ಸೇರಿದಂತೆ ಹಲವು ಕ್ಷೇತ್ರಗಳಿಗೆ ಪ್ರೋತ್ಸಾಹವಿದೆ. ನಮ್ಮ ಕೈಗಾರಿಕಾ ನೀತಿ ಉದ್ಯಮಸ್ನೇಹಿಯಾಗಿದೆ. ಆದರೆ ಕೇಂದ್ರ ಸರಕಾರವು ಸೆಮಿಕಂಡಕ್ಟರ್ ಮಿಷನ್ ಅಡಿಯಲ್ಲಿ ವಿಶೇಷ ಪ್ರೋತ್ಸಾಹನಾ ಕ್ರಮಗಳನ್ನು ಹೊಂದಿದ್ದು, ಈ ಕಂಪನಿಗಳು ಅದು ಬಿಜೆಪಿ ಆಡಳಿತವಿರುವ ಗುಜರಾತ್, ಮಹಾರಾಷ್ಟ್ರ ಮುಂತಾದ ರಾಜ್ಯಗಳಿಗೆ ಕಳಿಸಿ ಕೊಡುತ್ತಿದೆ.
ಇದರಲ್ಲಿ ನಮ್ಮ ತಪ್ಪೇನೂ ಇಲ್ಲ. ಹಿಂದೆ ಒಂದು ಕಂಪನಿ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ರಾಜ್ಯದಲ್ಲೇ ಹೂಡಿಕೆ ಮಾಡಲು ತೀರ್ಮಾನಿಸಿತ್ತು. ಆದರೆ, ದೆಹಲಿಗೆ ಹೋದಮೇಲೆ ಅವರು ಮನಸ್ಸು ಬದಲಿಸಿದರು. ಕೇಂದ್ರ ಸರಕಾರವು ಇಂತಹ ತಾರತಮ್ಯವನ್ನು ಬಿಡಬೇಕು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.