
ಬೆಂಗಳೂರು: “ರಸ್ತೆಬದಿ ಕಸ ಎಸೆದರೆ ಮತ್ತೆ ಅದು ಮರಳಿ ನಿಮ್ಮ ಮನೆಗೇ ಬರುತ್ತದೆ ಎನ್ನುವ ಎಚ್ಚರಿಕೆ ನೀಡುವುದರ ಜೊತೆಗೆ, ಇನ್ನೂ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸ್ ಇಲಾಖೆ ಹಾಗೂ ಪಾಲಿಕೆ ನೆರವಿನಿಂದ ಅಳವಡಿಸಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರು ತಿಳಿಸಿದರು.
ವಿಧಾನಸೌಧದ ಬಳಿಯ ಭುವನೇಶ್ವರಿ ಪ್ರತಿಮೆ ಬಳಿ ಮಾಧ್ಯಮಗಳಿಗೆ ಶನಿವಾರ ಪ್ರತಿಕ್ರಿಯೆ ನೀಡಿದರು.
ನಗರದಾದ್ಯಂತ ಎಲ್ಲೆಂದರಲ್ಲಿ ಕಸದ ರಾಶಿ ಇರುವ ಸಮಸ್ಯೆ ಕುರಿತು ಟೀಕೆ ವ್ಯಕ್ತವಾಗುತ್ತಿರುವ ಬಗ್ಗೆ ಕೇಳಿದಾಗ, “ಈಗಾಗಲೇ ಸಾಕಷ್ಟು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದರಿಂದ ಎಲ್ಲೆಂದರಲ್ಲಿ ಕಸ ಎಸೆಯುವವರನ್ನು ಗುರುತಿಸಿ ಅವರ ಮನೆ ಮುಂದೆಯೇ ಅದೇ ಕಸ ಸುರಿದು ಬುದ್ದಿವಾದ ಹೇಳುವ ಕೆಲಸ ಮಾಡಲಾಗುತ್ತಿದೆ. ಕಸ ಎಸೆಯುವವರಿಗೆ ದಂಡ ವಿಧಿಸುವ ಕೆಲಸವೂ ನಡೆಯುತ್ತಿದೆ. ಈಗಾಗಲೇ ಲಕ್ಷಾಂತರ ರೂಪಾಯಿ ದಂಡ ಸಂಗ್ರಹಿಸಲಾಗಿದೆ” ಎಂದರು.
ಮುಂಬೈನಲ್ಲೂ ಮೂಲೆ, ಮೂಲೆಯಲ್ಲಿ ಕಸದ ರಾಶಿ
“ಶುಕ್ರವಾರದಂದು ಮುಂಬೈಗೆ ತೆರಳಿದ್ದೆ. ಅಲ್ಲಿಯೂ ಸಹ ಮೂಲೆ, ಮೂಲೆಯಲ್ಲಿ ಕಸ ರಾಶಿ ಬಿದ್ದಿತ್ತು. ಬೇರೆ, ಬೇರೆ ಕಡೆಯಲ್ಲಿಯೂ ಬಿದ್ದಿರಬಹುದು. ಜನರು ತಮಗೆ ಇರುವ ಅವಕಾಶವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ನಿಲ್ಲಿಸಬೇಕು. ಜನರು ಸ್ವಚ್ಚ ಬೆಂಗಳೂರಿಗೆ ಹೆಚ್ಚು ಸಹಕಾರ ನೀಡಬೇಕು” ಎಂದರು.
“ಮುಂಬೈ ನಗರದಲ್ಲಿ ಪ್ರಮುಖ ರಸ್ತೆಗಳ ಕಾಮಗಾರಿ ಹಾಗೂ ನಿರ್ವಹಣೆ ನಡೆಸಿದವರಿಗೆ ಆ ರಸ್ತೆ ಬದಿಗಳ ಕಸ ವಿಲೇವಾರಿ ಮಾಡುವ ಜವಾಬ್ದಾರಿಯನ್ನು ನೀಡಲಾಗಿದೆ ಎನ್ನುವ ಮಾಹಿತಿಯಿದೆ. ಬೆಂಗಳೂರಿನಲ್ಲೂ ಈ ಮಾದರಿ ಜಾರಿ ಮಾಡುವ ಕುರಿತು ಚರ್ಚೆ ಮತ್ತು ಆಲೋಚನೆ ನಡೆಸಲಾಗುತ್ತಿದೆ” ಎಂದರು.
“ಡಬ್ಬಗಳನ್ನು ಇಟ್ಟುಕೊಂಡು ಮನೆಯ ಕಸವನ್ನು ಅದರಲ್ಲಿ ಸಂಗ್ರಹಿಸಿ. ಅವುಗಳನ್ನು ಕಡ್ಡಾಯವಾಗಿ ಕಸ ಸಂಗ್ರಹ ವಾಹನಗಳಿಗೆ ನೀಡಿ ಎಂದು ಮನವಿ ಮಾಡುತ್ತೇನೆ. ನಮ್ಮ ಅಧಿಕಾರಿಗಳು ಶುಕ್ರವಾರ ತಡರಾತ್ರಿವರೆಗೂ ನನಗೆ ಕಸ ವಿಲೇವಾರಿ ಸೇರಿದಂತೆ ಇದರ ಬಗ್ಗೆ ಮಾಹಿತಿ ನೀಡುತ್ತಿದ್ದರು” ಎಂದರು.
ಕಸ ಸಂಗ್ರಹಣೆಗೆ ಸರಿಯಾದ ವ್ಯವಸ್ಥೆಯಿಲ್ಲ ಎನ್ನುವ ನಾಗರಿಕರ ಆರೋಪದ ಬಗ್ಗೆ ಕೇಳಿದಾಗ, ಇದೆಲ್ಲವೂ ಸುಳ್ಳು. ಪ್ರತಿದಿನವೂ ಮನೆಗಳಲ್ಲಿ ಕಸ ಸಂಗ್ರಹ ನಡೆಯುತ್ತಿದೆ. ಸಮಸ್ಯೆ ಎದುರಾಗಿದ್ದರೆ ಸೂಚಿತ ದೂರವಾಣಿ ಸಂಖ್ಯೆಗೆ ದೂರು ನೀಡಲಿ. ಇಡೀ ದೇಶದಲ್ಲಿಯೇ ಅತ್ಯುತ್ತಮ ವ್ಯವಸ್ಥೆ ರೂಪಿಸಿದ್ದೇವೆ. ಎಲ್ಲಾದರೂ ಕಸ, ರಸ್ತೆಗುಂಡಿ ಕಂಡರೆ ನಮಗೆ ಪೋಟೊ ಹಾಗೂ ಜಾಗ ಕಳಿಸಿ ಎನ್ನುವ ಅವಕಾಶ ನೀಡಿದ್ದೇವೆ.
ಮಾಧ್ಯಮಗಳು ಪ್ರತಿದಿನ ಒಂದೊಂದು ರಸ್ತೆಗುಂಡಿ ಹಾಕುತ್ತಲೇ ಇರುತ್ತಾರೆ. ಎಷ್ಟೇ ಕೆಲಸ ಮಾಡಿದರೂ ರಸ್ತೆಗುಂಡಿ ಇದ್ದೇ ಇರುತ್ತದೆ. ವಾಹನಗಳು ಜರ್ಕ್ ಹೊಡೆದರೆ ರಸ್ತೆಗುಂಡಿ ಉಂಟಾಗುತ್ತದೆ. ಆದ ಕಾರಣಕ್ಕೆ ನಾವು ಈ ಸಮಸ್ಯೆ ನಿವಾರಣೆಗೆ ಏನೇನೊ ಪ್ರಯತ್ನ ಮಾಡುತ್ತಿದ್ದೇವೆ.
ಹತ್ತು ವರ್ಷ ಬಾಳಿಕೆ ಬರುವ ಡಾಂಬರ್ ರಸ್ತೆ ತಂತ್ರಜ್ಞಾನದ ಬಗ್ಗೆ ಆಲೋಚನೆ
“ಕನಿಷ್ಠ ಹತ್ತು ವರ್ಷ ಬಾಳಿಕೆ ಬರುವ ಡಾಂಬರ್ ರಸ್ತೆ ತಂತ್ರಜ್ಞಾನ ಬಳಸಿ ರಸ್ತೆ ನಿರ್ಮಾಣವು ಹೈದರಾಬಾದ್ ಸೇರಿದಂತೆ ಇತರೆಡೆ ಮಾಡಲಾಗುತ್ತಿದೆಯಂತೆ. ಇದರ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಕಾಮಗಾರಿ ನಡೆಸುವ ಯಂತ್ರಗಳು ಸಾಕಷ್ಟು ದುಬಾರಿಯಾದ ಕಾರಣಕ್ಕೆ ಕನಿಷ್ಠ ಹತ್ತು ಕಿಲೋಮೀಟರ್ ಕಾಮಗಾರಿಗೆ ಅವಕಾಶ ನೀಡಬೇಕು ಎಂದು ಈ ತಂತ್ರಜ್ಞಾನ ಹೊಂದಿರುವವರು ತಿಳಿಸಿದ್ದಾರೆ. ಇದರ ಬಗ್ಗೆ ಚಿಂತನೆ ಮಾಡಲಾಗುತ್ತಿದೆ” ಎಂದರು.
ನವೆಂಬರ್ ತಿಂಗಳು ಪೂರ್ತಿ ಸರ್ಕಾರಿ, ಖಾಸಗಿ ಕಚೇರಿಗಳಲ್ಲಿ ಕಡ್ಡಾಯವಾಗಿ ಕನ್ನಡ ಧ್ವಜ ಹಾರಿಸುವ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನ

ಬೆಂಗಳೂರು: “ಇಡೀ ನವೆಂಬರ್ ತಿಂಗಳಲ್ಲಿ ಖಾಸಗಿ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಕನ್ನಡದ ಧ್ವಜ ಹಾರಿಸುವ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಶಾಲಾ ಮಕ್ಕಳ ಪಥಸಂಚಲನದಲ್ಲಿ ವಂದನೆ ಸ್ವೀಕರಿಸಿ ಹಾಗೂ ಇದಕ್ಕೂ ಮೊದಲು ವಿಧಾನಸೌಧದ ಭುವನೇಶ್ವರಿ ಪ್ರತಿಮೆ ಬಳಿ ಮಾಧ್ಯಮಗಳ ಜತೆ ಮಾತನಾಡಿದರು.
“ಕರ್ನಾಟಕ ಕೇವಲ ನಾಡಲ್ಲ, ಸಂಸ್ಕೃತಿಯ ಬೀಡು. ಕನ್ನಡ ಕೇವಲ ನುಡಿಯಲ್ಲ, ನಮ್ಮ ಅಂತರಂಗದ ಮಾತು. ಕಲಿತವರಿಗೆ ಅಮೃತ, ನಡೆದವರಿಗೆ ನೆರಳು, ದಾರಿದೀಪ. ಕನ್ನಡ ಎನ್ನುವುದು ಜೀವನದ ವಿಧಾನ. ಇಂತಹ ಕನ್ನಡವನ್ನು ಇಂಗ್ಲಿಷ್ ಹಾಗೂ ಹಿಂದಿ ಭಾಷೆಯ ದಾಳಿಯಿಂದ ನಾವೆಲ್ಲರೂ ಕಾಪಾಡಿಕೊಳ್ಳಬೇಕು” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಬನ್ನಿ ನಮ್ಮ ಸಂಗಡ ಎಂದು ಕವಿ ಅಡಿಗರ ಕವನ ವಾಚಿಸಿದ ಡಿಸಿಎಂ
“ನಮ್ಮ ಉಸಿರು ಕನ್ನಡ, ನಮ್ಮ ಕಸುವು ಕನ್ನಡ, ನಮ್ಮ ಹೆಸರು ಕನ್ನಡ, ನಮ್ಮ ಕಸುಬು ಕನ್ನಡ, ಕನ್ನಡವಿದು ಕನ್ನಡ, ಬನ್ನಿ ನಮ್ಮ ಸಂಗಡ” ಎಂದು ಗೋಪಾಲಕೃಷ್ಣ ಅಡಿಗರ ಕವನವನ್ನು ವಾಚಿಸಿದರು. ಆದಿಕವಿ ಪಂಪನಿಂದ ಹಿಡಿದು ಬಸವಣ್ಣ, ಅಲ್ಲಮಪ್ರಭು, ಕನಕದಾಸರು, ಪುರಂದರದಾಸರು, ಕುವೆಂಪು, ಬೇಂದ್ರೆ, ಮಾಸ್ತಿ ಹೀಗೆ ಸಾಹಿತ್ಯದ ದೊಡ್ಡ ಪರಂಪರೆಯನ್ನು ನಾವು ಹೊಂದಿದ್ದೇವೆ. ಈ ಎಲ್ಲಾ ಸಾಹಿತ್ಯ ಭಂಡಾರವನ್ನು ಮಕ್ಕಳು ಬಾಚಿಕೊಳ್ಳಬೇಕು” ಎಂದು ಕರೆ ನೀಡಿದರು.
“ಕನ್ನಡಕ್ಕೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಈ ನೆಲದಲ್ಲಿ ಏನೋ ವೈಶಿಷ್ಟ್ಯ ಅಡಗಿದೆ. ಇಲ್ಲಿಗೆ ಬಂದವರು ಯಾವುದೇ ಕಾರಣಕ್ಕೂ ಮರಳಿ ಹೋಗುವುದಿಲ್ಲ. ಎಲ್ಲರನ್ನೂ ಒಳಗೊಂಡಿರುವ ನಮ್ಮ ಕರ್ನಾಟಕ ಶಾಂತಿಯಿಂದ ಕೂಡಿದೆ. ಹೊರಗಿನಿಂದ ಬಂದವರು ಸಹ ಊಟ, ವಸತಿ ಗಳಿಸಿಕೊಂಡಿದ್ದಾರೆ. ಇದೇ ನಮ್ಮ ಕನ್ನಡ ತಾಯಿ, ಭೂಮಿಯ ವಿಶೇಷ. ಇಲ್ಲಿ ಇರುವ ಅತ್ಯುತ್ತಮ ವಾತಾವರಣ ದೇಶದ ಯಾವ ಭಾಗದಲ್ಲಿಯೂ ಇಲ್ಲ. ನಮ್ಮ ಸಂಸ್ಕೃತಿ ಹಾಗೂ ನೆಲ, ಜಲಕ್ಕೆ ಎಲ್ಲರನ್ನೂ ಆಕರ್ಷಿಸುವ ಗುಣವಿದೆ” ಎಂದರು.
“ಎಲ್ಲಾ ಕನ್ನಡಿಗರನ್ನು ಒಗ್ಗೂಡಿಸಬೇಕು. ಕನ್ನಡಿಗರ ತ್ಯಾಗ, ಬಲಿದಾನ, ಶ್ರಮವನ್ನು ನಾವುಗಳು ಮರೆಯಬಾರದು. ಅನೇಕ ಹಿರಿಯರು ಈ ಭಾಷೆ, ನೆಲ, ಜಲ, ಬಾವುಟದ ಗೌರವವನ್ನು ಕಾಪಾಡಿದ್ದಾರೆ. ದೇಶದ ಯಾವ ರಾಜ್ಯವೂ ಧ್ವಜ, ನಾಡಗೀತೆ ಹೊಂದಿಲ್ಲ. ಆದರೆ ನಾವು ಇವೆರಡನ್ನೂ ಹೊಂದಿದ್ದೇವೆ. ವಿಧಾನಸೌಧದ ಆವರಣದಲ್ಲಿ ತಾಯಿ ಭುವನೇಶ್ವರಿ ಪ್ರತಿಮೆ ಸ್ಥಾಪಿಸಿದ್ದೇವೆ. ಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಕಡ್ಡಾಯಗೊಳಿಸಿದ್ದೇವೆ. ಬೆಂಗಳೂರಿನಲ್ಲಿರುವ ಉದ್ದಿಮೆಗಳು, ಕಾರ್ಖಾನೆಗಳು, ವಾಣಿಜ್ಯ ಕೇಂದ್ರಗಳಲ್ಲಿ ರಾಜ್ಯೋತ್ಸವ ಆಚರಣೆ ಕಡ್ಡಾಯ ಮಾಡಿದ್ದೇವೆ” ಎಂದರು.
“ಈ ವರ್ಷ ಸಮೃದ್ಧಿಯಿಂದ ಕೂಡಿದೆ. ಮಳೆ ಇಳೆಯನ್ನು ತಂಪುಗೊಳಿಸಿದೆ. ಕೆಆರ್ ಎಸ್ ಒಂದೇ ವರ್ಷದಲ್ಲಿ ಮೂರು ಬಾರಿ ತುಂಬಿದೆ” ಎಂದು ಹೇಳಿದರು.
ಜಾಗತಿಕ ಮಟ್ಟಕ್ಕೆ ಕನ್ನಡ, ಕರ್ನಾಟಕವನ್ನು ಕೊಂಡೊಯ್ಯಬೇಕು
“ಕುವೆಂಪು ಅವರು ಹೇಳಿರುವಂತೆ ಕರ್ನಾಟಕ ಶಾಂತಿಯ ತೋಟ. ನಾವೆಲ್ಲರೂ ಜಾತಿ, ಧರ್ಮಗಳನ್ನು ಬಿಟ್ಟು ಸಹಬಾಳ್ವೆಯಿಂದ ಕರ್ನಾಟಕದ ಏಳಿಗೆಗೆ ದುಡಿಯಬೇಕು. ಜಾಗತಿಕವಾಗಿ ಬೆಂಗಳೂರು ಬೆಳಗುತ್ತಿದೆ. ಪ್ರಪಂಚದ ಜನರು ನಮ್ಮನ್ನು ಗಮನಿಸುತ್ತಿದ್ದಾರೆ. ಕನ್ನಡ, ಕರ್ನಾಟಕವನ್ನು ಜಾಗತಿಕ ಮಟ್ಟಕ್ಕೆ ನಾವೆಲ್ಲರೂ ಕೊಂಡೊಯ್ಯಬೇಕು. ಭುವನೇಶ್ವರಿ ತಾಯಿ ಇಡೀ ಭೂಮಿಗೆ ಒಡತಿ. ಕರ್ನಾಟಕದ ನಾಡದೇವತೆ” ಎಂದರು.
“ಶಾಲಾ ಮಕ್ಕಳ ಪಥಸಂಚಲನ ನೋಡುತ್ತಿದ್ದರೆ ನನಗೂ ಸಹ ನನ್ನ ಬಾಲ್ಯದ ದಿನಗಳು ನೆನಪಾಗುತ್ತದೆ. ನಾನು ಸಹ ಇದೇ ರೀತಿ ಸಮವಸ್ತ್ರ ಧರಿಸಿ ಶಿಸ್ತಿನಿಂದ ನಡೆಯುತ್ತಿದ್ದೆ. ಬೇಸ್ ಡ್ರಮ್ ನುಡಿಸುವವನಾಗಿ ಹೆಜ್ಜೆ ಹಾಕಿದ್ದೆ. ಇದೇ ಕ್ರೀಡಾಂಗಣದಲ್ಲಿ ನಾನು ನಡೆದಾಡಿದ್ದು ನೆನಪಾಯಿತು” ಎಂದು ಶಾಲಾ ದಿನವನ್ನು ಮೆಲುಕು ಹಾಕಿದರು.
“ಸಾಮ್ರಾಟ್ ಅಶೋಕ ಚಕ್ರವರ್ತಿಯ ಕಾಲದಿಂದಲೂ ಕನ್ನಡದ ಹಿರಿಮೆಯಿದೆ. ಕನ್ನಡ ಹಾಗೂ ಕರ್ನಾಟಕದ ಇತಿಹಾಸವನ್ನು ಮಾಧ್ಯಮಗಳು ಅತ್ಯುತ್ತಮವಾಗಿ ವರದಿ ಮಾಡಿವೆ. ಕರ್ನಾಟಕದ ಸಮಸ್ತ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸುತ್ತೇನೆ” ಎಂದರು.