ಮುಂಬೈ: ಹರ್ಮನ್ ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ಕ್ರಿಕೆಟ್ ತಂಡ ಇತಿಹಾಸ ನಿರ್ಮಿಸಿದೆ. ನವಿ ಮುಂಬೈನ ಡಿ.ವೈ ಪಾಟೀಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮಹಿಳಾ ಏಕದಿನ ವಿಶ್ವಕಪ್ (Women’s World Cup) ಫೈನಲ್ನಲ್ಲಿ ಭಾರತ ತಂಡ ದ.ಆಫ್ರಿಕಾವನ್ನು 52 ರನ್ಗಳಿಂದ ಮಣಿಸಿದೆ.
ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ದ ಎಲ್ಲಾ ವಿಭಾಗಗಳಲ್ಲೂ ಸರ್ವಾಂಗೀಣ ಪ್ರದರ್ಶನ ತೋರಿಸಿದ ಹರ್ಮನ್ ಪ್ರೀತ್ ಕೌರ್ ಪಡೆಯು ಮೊದಲ ಬಾರಿಗೆ ವಿಶ್ವಚಾಂಪಿಯನ್ ಆಗಿ ಮೂಡಿ ಬಂದಿದೆ.
2005ರಲ್ಲಿ ಆಸ್ಟ್ರೇಲಿಯಾ ಮತ್ತು 2017ರಲ್ಲಿ ಇಂಗ್ಲೆಂಡ್ ವಿರುದ್ಧ ಫೈನಲ್ ಪಂದ್ಯದಲ್ಲಿ ಪರಾಭವ ಅನುಭವಿಸಿದ್ದ ಭಾರತದ ವನಿತೆಯರು ಈ ಬಾರಿ ದಕ್ಷಿಣ ಆಫ್ರಿಕಾ ವಿರುದ್ಧ ಎಡವಲಿಲ್ಲ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡಕ್ಕೆ ಸೋತ ಭಾರತ ತಂಡ 7 ವಿಕೆಟ್ ಕಳೆದುಕೊಂಡು 298 ರನ್ ಗಳಿಸಿತು. ಈ ಮೊತ್ತವನ್ನು ಬೆಂಬತ್ತಿದ ದಕ್ಷಿಣ ಆಫ್ರಿಕಾ ತಂಡ 45.3 ಓವರ್ಗಳಲ್ಲಿ 246 ರನ್ ಗಳಿಸಲಷ್ಟೇ ಶಕ್ತವಾಯಿತು, ಆ ಮೂಲಕ ಭಾರತ ತಂಡ 52 ರನ್ ಗಳ ಭರ್ಜರಿ ವಿಜಯ ದಾಖಲಿಸಿತು.
ಬ್ಯಾಟಿಂಗ್ಗೆ ನೆರವಾಗುತ್ತಿದ್ದ ಪಿಚ್ನಲ್ಲಿ ದಕ್ಷಿಣ ಆಫ್ರಿಕಾ ತಂಡ ಭರ್ಜರಿ ಆರಂಭವನ್ನೇ ಮಾಡಿತ್ತು. ನಾಯಕಿ ಲಾರಾ ವೋಲ್ವಾರ್ಡ್ಸ್ ಮತ್ತು ತಾಜ್ಜಿನ್ ಬ್ರಿಟ್ಸ್ ಅವರು 8.4 ಓವರ್ಗಳಲ್ಲಿ 50 ರನ್ ಸೇರಿಸಿದರು. ಈ ಜೋಡಿ ದೊಡ್ಡ ಜತೆಯಾಟವ ನ್ನಾಡುವ ಸೂಚನೆ ನೀಡಿತ್ತು. ಆದರೆ ತಂಡದ ಮೊತ್ತ 51 ಆಗಿದ್ದಾಗ ಇಲ್ಲದ ರನ್ ತೆಗೆಯಲು ಹೋದ ತಾಜ್ಜಿ ನ್ ಬ್ರಿಟ್ಸ್ (35 ಎಸೆತದಲ್ಲಿ 23 ರನ್) ರನೌಟ್ ಆದರು. ಇದಾಗಿ 11 ರನ್ಗಳಾಗುವಷ್ಟರಲ್ಲೇ ಇನ್ನೂ ಖಾತೆ ತೆರೆಯದ ಅನ್ನೇರ್ ಬಾಶ್ ಅವರನ್ನು ಎಲ್ಬಿಡಬ್ಲ್ಯೂ ಬಲೆಗೆ ಬೀಳಿಸುವಲ್ಲಿ ಶ್ರೀಚರಣಿ ಯಶಸ್ವಿಯಾದರು.
ಇದಾದ ಬಳಿಕ ನಾಯಕಿ ವೊಲ್ವಾರ್ಡ್ಸ್ ಅವರು ಸುನೆ ಲೂಸ್ ಅವರೊಂದಿಗೆ ಸೇರಿ 52 ರನ್ಗಳ ಜೊತೆಯಾಟವಾಡಿದರು. ಈ ಹಂತದಲ್ಲಿ ಬೌಲಿಂಗ್ಗೆ ಇಳಿದ ಶೆಫಾಲಿ ವರ್ಮಾ ಅವರು ನಿರಂತರ 2 ಓವರ್ ಗಳಲ್ಲಿ 2 ವಿಕೆಟ್ ಕಬಳಿಸಿದರು.
ಸುನೆ ಲೂಸ್ (31 ಎಸೆತದಲ್ಲಿ 25 ರನ್) ಅವರು ಶೆಫಾಲಿ ವರ್ಮಾಗೆ ಕಾಟ್ ಆ್ಯಂಡ್ ಬೌಲ್ಡ್ ಆದರೆ, ಮರಿಝಾನೆ ಕಾಪ್ (5 ಎಸೆತದಲ್ಲಿ 4 ರನ್) ಅವರು ಕೀಪರ್ ರಿಚಾ ಘೋಷ್ ಅವರಿಗೆ ಕ್ಯಾಚಿತ್ತು ಮರಳಿದರು. ಆ ವಿಕೆಟ್ ಪತನದ ಬಳಿಕ ಎಚ್ಚರಿಕೆಯಿಂದ ಆಡುತ್ತಿದ್ದ ಸಿನಾಲೊ ಜಾಪ್ಪಾ ಅವರು ದೀಪ್ತಿ ಶರ್ಮಾ ಅವರ ಬೌಲಿಂಗ್ನಲ್ಲಿ ರಾಧಾ ಯಾದವ್ ಅವರಿಗೆ ಕ್ಯಾಚಿತ್ತರು.
ಈ ಸಂದರ್ಭದಲ್ಲಿ ಅನಾರಿ ಡೆರ್ಕ್ಸನ್ ಅವರ ಜೊತೆ ನಾಯಕಿ ವೊಲ್ವಾರ್ಡ್ಸ್ ಅವರು 61 ರನ್ಗಳ ಮಹತ್ವದ ಜತೆಯಾಟವಾಡಿ ತಂಡದ ಮೊತ್ತವನ್ನು 200ರ ಗೆಡಿ ದಾಟಿಸಿದರು. ಈ ಹಂತದಲ್ಲಿ ಪಂದ್ಯ ದಕ್ಷಿಣ ಆಫ್ರಿಕಾ ಕೈಗೆ ಬಂದಿತ್ತು. ಆದರೆ ಅನುಭವಿ ದೀಪ್ತಿ ಶರ್ಮಾ ಅವರ ಸೊಗಸಾದ ಯಾರ್ಕರ್ ಲೆಂಗ್ ಎಸೆತಕ್ಕೆ ಡೆರ್ಕ್ಸನ್ ಔಟಾದರು. ಆದರೂ ನಾಯಕಿ ವೊಲ್ವಾರ್ಡ್ಸ್ ಮಾತ್ರ ಹೋರಾಟ ನಿಲ್ಲಿಸಿರಲಿಲ್ಲ.
96 ಎಸೆತಗಳಲ್ಲಿ ಶತಕ ಪೂರೈಸಿದ ಅವರನ್ನು ಪೆವಿಲಿಯನ್ಗೆ ಕಳುಹಿಸುವಲ್ಲಿ ದೀಪ್ತಿ ಶರ್ಮಾ ಯಶಸ್ವಿಯಾದರು. ಅಮನ್ ಜೋತ್ ಕೌರ್ ಹಿಡಿದ ಅದ್ಭುತ ಕ್ಯಾಚ್ ಗೆ ದಕ್ಷಿಣ ಆಫ್ರಿಕಾ ನಾಯಕಿ ಔಟಾದರು. ಅಲ್ಲಿಂದ ಬಳಿಕ ಪಂದ್ಯದ ಮೇಲೆ ಭಾರತದ ಬೌಲರ್ ಗಳು ಸಂಪೂರ್ಣ ಹಿಡಿತ ಸಾಧಿಸಿದರು.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಟೀಮ್ ಇಂಡಿಯಾ ಭರ್ಜರಿ ಆರಂಭವನ್ನು ಪಡೆದುಕೊಂಡಿತು. ಸೆಮಿಫೈನಲ್ ಪಂದ್ಯದಲ್ಲಿ ವಿಫಲರಾಗಿದ್ದ ಶಫಾಲಿ ವರ್ಮಾ ಭಾನುವಾರ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು.
ಅನುಭವಿ ಸ್ಮೃತಿ ಮಂಧಾನಾ
ಅನುಭವಿ ಸ್ಮೃತಿ ಮಂಧಾನಾ ಜತೆ ಸೇರಿ ಮೊದಲ ವಿಕೆಟ್ಗೆ 104 ರನ್ಗಳ ಜೊತೆಯಾಟ ನೀಡಿದರು. ಮಂಧಾನಾ 58 ಎಸೆತಗಳಲ್ಲಿ 8 ಬೌಂಡರಿಗಳ ನೆರವಿನಿಂದ 45 ರನ್ ಗಳಿಸಿ ಟ್ರಯಾನ್ ಬೌಲಿಂಗ್ನಲ್ಲಿ ಕ್ಯಾಚ್ ಔಟ್ ಆದರು.
ಬಳಿಕ ಸ್ಪೋಟಕ ಬ್ಯಾಟಿಂಗ್ ಮುಂದುವರಿಸಿದ ಶಫಾಲಿ ವರ್ಮಾ 78 ಎಸೆತಗಳಲ್ಲಿ 87 ರನ್ ಗಳಿಸಿದರು. ಅವರ ಇನ್ನಿಂಗ್ಸ್ನಲ್ಲಿ ಏಳು ಬೌಂಡರಿ ಮತ್ತು ಎರಡು ಸಿಕ್ಸರ್ಗಳಿದ್ದವು.
ಕಳೆದ ಪಂದ್ಯದಲ್ಲಿ ಶತಕ ಗಳಿಸಿದ್ದ ಜೆಮಿಮಾ ರೊಡ್ರಿಗಸ್ 37 ಎಸೆತಗಳಲ್ಲಿ ಕೇವಲ 24 ರನ್ ಗಳಿಸಲಷ್ಟೇ ಶಕ್ತರಾದರು. ನಾಯಕಿ ಹರ್ಮನ್ ಪ್ರೀತ್ ಕೌರ್ 29 ಎಸೆತಗಳಲ್ಲಿ 20 ರನ್ ಗಳಿಸಿದರೆ, ಅಮನ್ ಜೋತ್ ಕೌರ್ ಆಟ 12 ರನ್ಗೆ ಸೀಮಿತವಾಯಿತು.
ಆದರೆ 6ನೇ ವಿಕೆಟ್ಗೆ ಜತೆಯಾಟದ ದೀಪ್ತಿ ಶರ್ಮಾ ಹಾಗೂ ರಿಚಾ ಘೋಷ್ ಕೇವಲ 35 ಎಸೆತಗಳಲ್ಲಿ 47 ರನ್ ಸೂರೆಗೈದರು.
ದೀಪ್ತಿ ಶರ್ಮಾ ಫೈನಲ್ನಲ್ಲೂ ತಮ್ಮ ಸ್ಥಿರ ಬ್ಯಾಟಿಂಗ್ ಪ್ರದರ್ಶನ ಮುದುವರಿಸಿ 58 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 58 ರನ್ ಗಳಿಸಿದರೆ, ಸ್ಫೋಟಕ ಬ್ಯಾಟಿಂಗ್ ಮಾಡಿದ ರಿಚಾ ಘೋಷ್ ಕೇವಲ 24 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ಗಳ ಸಹಿತ 34 ರನ್ ಗಳಿಸಿ ತಂಡದ ಮೊತ್ತ 300ರ ಸನಿಹ ಬರಲು ನೆರವಾದರು.
ಭಾರೀ ಮಳೆಯಿಂದಾಗಿ ಭಾನುವಾರದ ಫೈನಲ್ ಪಂದ್ಯ ಸರಿಯಾದ ಸಮಯಕ್ಕೆ ಆರಂಭವಾಗಲಿಲ್ಲ. ಮೈದಾನ ಒದ್ದೆಯಾಗಿದ್ದ ಕಾರಣ ಎರಡು ಗಂಟೆಗಳ ಕಾಲ ಆಟ ವಿಳಂಬವಾಯಿತು. ಎರಡೂ ತಂಡಗಳು ಯಾವುದೇ ಬದಲಾವಣೆಯಿಲ್ಲದೆ ಫೈನಲ್ನಲ್ಲಿ ಕಣಕ್ಕಿಳಿದಿದ್ದವು.
ಫೋಟೋ ಕೃಪೆ: BCCI ‘X’ ಖಾತೆ