ಬೆಂಗಳೂರು: ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಸರಣಿ ಅತ್ಯಾಚಾರಿ ಹಾಗೂ ಉಗ್ರರಿಗೆ ಮೊಬೈಲ್ ಫೋನ್ ಸೌಲಭ್ಯ ಸೇರಿ ರಾಜಾತಿಥ್ಯ ಕಲ್ಪಿಸಿರುವ ಬಗ್ಗೆ ತೀವ್ರ ಸಿಡಿಮಿಡಿಗೊಂಡಿರುವ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy) ಅವರು, ಕಾರಾಗೃಹದಲ್ಲಿ ಅಷ್ಟೇ ಭಯೋತ್ಪಾದಕರಿಲ್ಲ, ಅದಕ್ಕಿಂತಲೂ ಅಪಾಯಕಾರಿ ಭಯೋತ್ಪಾದಕರು ವಿಧಾನಸೌಧದಲ್ಲಿಯೇ ಇದ್ದಾರೆ ಎಂದು ಟೀಕಿಸಿದರು.
ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಸೋಮವಾರ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯಿಸಿದ ಸಚಿವರು; ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳಿಗೆ ಹಾಗೂ ಶಿಕ್ಷೆಗೆ ಗುರಿಯಾಗಿರುವ ಕುಖ್ಯಾತ ಪಾತಕಿಗಳಿಗೆ ಜೈಲು ಸಿಬ್ಬಂದಿ ರಾಜಾತಿಥ್ಯ ನೀಡುತ್ತಿರುವುದು ನಾಚಿಕೆಗೇಡು ಎಂದರು.
ಭಯೋತ್ಪಾದಕರು ಕೇವಲ ಕಾರಾಗೃಹದಲ್ಲಿ ಮಾತ್ರವಷ್ಟೇ ಇಲ್ಲ, ಅವರಿಗಿಂತ ಅಪಾಯಕಾರಿ ಭಯೋತ್ಪಾದಕರು ವಿಧಾನಸೌಧದಲ್ಲಿಯು ಇದ್ದಾರೆ, ಅವರು ಯಾರು ಎನ್ನುವುದು ನನಗಿಂತ ಹೆಚ್ಚಾಗಿ ನಿಮಗೆ ಗೊತ್ತಿದೆ ಎಂದು ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಸಚಿವರು ಹೇಳಿದರು.
ರಾಜ್ಯದ ಜನ ಈ ಬಗ್ಗೆ ಹಾದಿ ಬೀದಿಯಲ್ಲಿ ಮಾತನಾಡುತ್ತಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ಉಗ್ರರಿಗೆ ರಾಜಾತಿಥ್ಯ ಕೊಡಲಾಗುತ್ತಿದೆ ಎನ್ನುವುದು ಹಳೆಯ ವಿಚಾರವಲ್ಲ. ಹಿಂದೆ ಇದೇ ವಿಷಯದ ಬಗ್ಗೆ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳು ಕಿತ್ತಾಡಿಕೊಂಡಿದ್ದರು. ಆಮೇಲೆ ಇನ್ನೊಂದು ಪ್ರಕರಣದಲ್ಲಿ ಸ್ವತಃ ನ್ಯಾಯಾಲಯಗಳೇ ಇಂಥ ಕೃತ್ಯಗಳಲ್ಲಿ ಭಾಗಿಯಾಗಿದ್ದ ಜೈಲು ಸಿಬ್ಬಂದಿಗೆ ಕಠಿಣ ಎಚ್ಚರಿಕೆ ನೀಡಿತ್ತು. ಅದಾದ ನಂತರ ಮತ್ತೆ ಅಂಥವೇ ಪ್ರಕರಣಗಳು ಜೈಲಿನಲ್ಲಿ ಮರುಕಳಿಸುತ್ತಿವೆ ಎಂದು ಕೇಂದ್ರ ಸಚಿವರು ಕಳವಳ ವ್ಯಕ್ತಪಡಿಸಿದರು.
ಗುರುತರ ಅಪರಾಧ ಮಾಡಿದವರಿಗೆ ಎಲ್ಲಾ ರೀತಿಯ ಸೌಲಭ್ಯ ಕೊಟ್ಟಿರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಇದು ಹೊಸದಾಗಿ ಶುರುವಾದುದಲ್ಲ. ವಿಧಾನಸೌಧದಲ್ಲಿ ಉಗ್ರರನ್ನು ಇಟ್ಟುಕೊಂಡು ಪರಪ್ಪನ ಅಗ್ರಹಾರ ಜೈಲಿನ ಉಗ್ರರ ಬಗ್ಗೆ ಏನು ಚರ್ಚೆ ಮಾಡೋದು? ನೀವು ಯಾರ ಬಗ್ಗೆ ತನಿಖೆ ಮಾಡ್ತೀರಿ? ಇವೆಲ್ಲಾ ಕಾಲಹರಣ, ಸಮಯ ವ್ಯರ್ಥ ಮಾಡುವುದಕ್ಕೆ ನಡೆಯುತ್ತಿರುವ ತನಿಖೆಯಷ್ಟೇ ಎಂದು ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದರು.
ಸಿಎಂ, ಗೃಹ ಸಚಿವರನ್ನು ಪ್ರಶ್ನಿಸಿ
ಜೈಲು ನಿರ್ವಹಣೆಯಲ್ಲಿ ಪದೆ ಪದೇ ನಡೆಯುತ್ತಿರುವ ವೈಫಲ್ಯಗಳ ಬಗ್ಗೆ ಮಾಧ್ಯಮಗಳು ಹಾಗೂ ಜನರು ಮುಖ್ಯಮಂತ್ರಿ, ಗೃಹ ಸಚಿವರನ್ನು ಕೇಳಬೇಕು, ಪ್ರಶ್ನಿಸಬೇಕು. ಪ್ರತಿ ದಿನವೂ ಈ ಸರ್ಕಾರದ ವೈಪಲ್ಯ ಎದ್ದು ಕಾಣಿಸುತ್ತಿದೆ. ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ ಎಂದು ಸಿಎಂ ಹಾಕುತ್ತಾರೆ. ಆದರೆ ಇವರಿಗೇನಿದೆ ಎಂಬುದನ್ನು ಪ್ರಶ್ನೆ ಮಾಡಿಕೊಳ್ಳಬೇಕಿದೆ ಎಂದು ಕೇಂದ್ರ ಸಚಿವರು ಪ್ರಶ್ನಿಸಿದರು.
ಸಿಎಂ ಅವರಿಗೆ ದೀರ್ಘ ಅನುಭವ ಇದೆ. ಇಷ್ಟು ಅನುಭವ ಇಟ್ಟುಕೊಂಡು ಇಷ್ಟೆಲ್ಲಾ ಲಘುವಾಗಿ ತೆಗೆದುಕೊಳ್ಳುವುದು ಎಷ್ಟು ಸರಿ? ಮುಖ್ಯಮಂತ್ರಿಗಳಿಗೆ ಗುಪ್ತದಳ ಎನ್ನುವುದು ಇರುವುದಿಲ್ಲವೇ? ಇವರೇ ಕೆಟ್ಟ ಶಕ್ತಿಗಳಿಗೆ ಬೆಂಬಲ ಕೊಡುತ್ತಿದ್ದಾರೆ ಎಂದು ಸಚಿವರು ಹೇಳಿದರು.
ಗೃಹ ಸಚಿವರ ರಾಜಿನಾಮೆಗೆ ಒತ್ತಾಯಿಸ್ತೀರಾ? ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು; ಒತ್ತಾಯ ಮಾಡಿದಾಕ್ಷಣ ರಾಜಿನಾಮೆ ಕೊಡುವ ಕಾಲವೇ ಇದು? ಅಷ್ಟೊಂದು ನೈತಿಕತೆ ಯಾವ ರಾಜಕಾರಣಿಗಿದೆ? ಎಂದು ಉತ್ತರಿಸಿದರು.
ಏರ್ಪೋರ್ಟ್ ನಲ್ಲಿ ನಮಾಜ್ ಮಾಡಲು ಪ್ರತ್ಯೇಕ ವ್ಯವಸ್ಥೆ ಮಾಡಿ
ಏರ್ಪೋರ್ಟ್ ನಲ್ಲಿ ನಮಾಜ್ ಮಾಡಿರುವ ವಿಚಾರದ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು; ಬೆಂಗಳೂರು ನಗರ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದಿದೆ. ಅನೇಕ ಜನ ಇಲ್ಲಿಗೆ ಬರುತ್ತಾರೆ. ಅನೇಕ ಬೇರೆ ಬೇರೆ ಧರ್ಮದವರು ಪ್ರಾರ್ಥನೆ ಮಾಡುವುದಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿರುತ್ತದೆ.
ನಾವು ಸಣ್ಣತನ ತೋರುವ ಅಗತ್ಯ ಇಲ್ಲ. ಅವರಿಗೊಂದು ಪ್ರತ್ಯೇಕ ಕೊಠಡಿ ಮಾಡಿಕೊಡುವ ಮಾಡಿಕೊಡಬೇಕು. ಆಗ ಬಹಿರಂಗವಾಗಿ ಇಂಥ ದೃಶ್ಯಗಳನ್ನು ನೋಡುವುದು ತಪ್ಪುತ್ತದೆ ಎಂದು ಅಭಿಪ್ರಾಯಪಟ್ಟರು.