ಅಯೋಧ್ಯೆ: ಉತ್ತರ ಪ್ರದೇಶದಲ್ಲಿರುವ ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ (Ayodhya) 25 ಅಡಿ ಎತ್ತರದ ರಾವಣನ (Ravana) ಪ್ರತಿಮೆ ನಿರ್ಮಾಣವಾಗುತ್ತಿದೆ ಎಂದು ಉತ್ತರ ಪ್ರದೇಶ ಸರಕಾರವೇ ತಿಳಿಸಿದೆ.
ಧಾರ್ಮಿಕ ಪ್ರವಾಸೋದ್ಯಮ ಉತ್ತೇಜಿ ಸಲೆಂದೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರಕಾರ ಅಯೋಧ್ಯೆಯ ಗುಪ್ತಾರ್ ಘಾಟ್ ಬಳಿ ಅಭಿವೃದ್ಧಿ ಪಡಿಸುತ್ತಿರುವ ಭವ್ಯ ರಾಮಾಯಣ ಉದ್ಯಾನದಲ್ಲಿಯೇ ರಾವಣನ ಬೃಹತ್ ಪ್ರತಿಮೆ ಸ್ಥಾಪನೆ ಆಗಲಿದೆ.
ಶ್ರೀರಾಮ ಮತ್ತು ರಾವಣನ ನಡುವಿನ ಯುದ್ಧವನ್ನು ಬಿಂಬಿಸಲೆಂದೇ ಈ ಪ್ರತಿಮೆ ಸ್ಥಾಪನೆ ಆಗುತ್ತಿದೆ ಎಂದು ಅಧಿಕಾರಿಗಳು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಅಯೋಧ್ಯೆಯಲ್ಲಿ ಸಿಂಹಾಸನಾರೋಹಣದ ಬಳಿಕ ಶ್ರೀರಾಮಚಂದ್ರರ ದರ್ಬಾರ್ ಕೂಡಾ ರಚನೆ ಯಾಗಲಿದ್ದು, ಅದರಲ್ಲಿ ಶ್ರೀರಾಮ-ಸೀತೆ ಮತ್ತು ಲಕ್ಷ್ಮಣ, ಹನು ಮಂತರ ಪ್ರತಿಮೆಗಳಿರಲಿವೆ. ಇದು ಈ ಉದ್ಯಾನದ ಮತ್ತೊಂದು ಪ್ರಮುಖ ಆಕರ್ಷಣೆಯಾಗಲಿದೆ.
ರಾಮಾಯಣದ ಪ್ರಮುಖ ಕ್ಷಣಗಳ ಆಧ್ಯಾತ್ಮಿಕ ಅನುಭವವನ್ನು ಜನರಿಗೆ ಒದಗಿಸುವುದೇ ಈ ಉದ್ಯಾನದ ಹಿಂದಿರುವ ರಾಜ್ಯ ಸರಕಾರದ ಉದ್ದೇಶವಾಗಿದೆ ಎಂದಿದ್ದಾರೆ.