ಬೆಂಗಳೂರು: ವೋಟ್ ಚೋರಿ ಆರೋಪ, ನಿರುದ್ಯೋಗ ಸಮಸ್ಯೆ, ಉಚಿತ ಯೋಜನೆಗಳ ಘೋಷಣೆ ಸೇರಿದಂತೆ ತೀವ್ರ ಜಿದ್ದಾಜಿದ್ದಿಯಿಂದ ನಡೆದ ಬಿಹಾರ ವಿಧಾನಸಭಾ ಚುನಾವಣೆ (Bihar election) ನಿನ್ನೆ ಸಂಜೆ 7ಕ್ಕೆ ಎರಡನೇ ಹಂತದ ಮತದಾನ ಅಂತ್ಯಗೊಳ್ಳುವ ಮೂಲಕ ಅಂತ್ಯವಾಗಿದ್ದು ಎಲ್ಲರ ಚಿತ್ತ ಈಗ ಮತ ಎಣಿಕೆಯತ್ತ ನೆಟ್ಟಿದೆ.
ಇದಕ್ಕೂ ಮುನ್ನ ಹಲವು ಸುದ್ದಿ ಸಂಸ್ಥೆಗಳು, ಗೋದಿ ಮೀಡಿಯಾಗಳು ಬಿಹಾರ ವಿಧಾನಸಭೆ ಚುನಾವಣೆಯ ಚುನಾವಣೋತ್ತರ ಮತಗಟ್ಟೆ ಸಮೀಕ್ಷೆಗಳನ್ನು ಬಹಿರಂಗಗೊಳಿಸಿದ್ದು, ಹಲವು ಸಮೀಕ್ಷೆಗಳು ಎನ್‌ಡಿಎಗೆ ಬಹುಮತ ಸಿಗಲಿವೆ ಎಂದು ಅಂದಾಜಿಸಿವೆ.
ದೇಶದ ವಿಶ್ವಾಸಾರ್ಹ ದೈನಿಕ್ ಭಾಸ್ಕರ ಮೀಡಿಯಾ ಸಂಸ್ಥೆ ಬಿಹಾರ ಚುನಾವಣೆಯಲ್ಲಿ ಎನ್‌ಡಿಎಗೆ 145 ರಿಂದ 160 ಹಾಗೂ ಮಹಾಘಟಬಂಧನ್‌ಗೆ 73ರಿಂದ 91 ಸ್ಥಾನಗಳು ಲಭಿಸಲಿವೆ ಎಂದು ಭವಿಷ್ಯ ನುಡಿದಿದೆ.
ಉಳಿದಂತೆ News 24 ಮಹಾಘಟಬಂಧನ್‌ಗೆ 130-144, NDAಗೆ 95-109 ಇತರೆ 0-8 ಸ್ಥಾನ ಸಿಗಬಹುದು ಎಂದಿದೆ.
IANS-Matrize ಸಂಸ್ಥೆಯ ಪ್ರಕಾರ ಎನ್‌ಡಿಎಗೆ 147 ರಿಂದ 167 ಸ್ಥಾನಗಳು ಹಾಗೂ ಮಹಾಘಟಬಂಧನ್‌ಗೆ 70 ರಿಂದ 90 ಸ್ಥಾನಗಳು ಸಿಗಲಿವೆ ಎಂದು ಅಂದಾಜಿಸಿವೆ.
ಡಿವಿ ರಿಸರ್ಚ್ ಪ್ರಕಾರ, ಎನ್‌ಡಿಎ 137-152 ಸ್ಥಾನಗಳೊಂದಿಗೆ ಸರಕಾರ ರಚಿಸುವ ನಿರೀಕ್ಷೆಯಿದೆ. ಮತ್ತೊಂದೆಡೆ, ಮಹಾಘಟಬಂಧನ್ 83-98 ಸ್ಥಾನಗಳನ್ನು ಪಡೆಯುವ ನಿರೀಕ್ಷೆ ಇದೆ. ಜನ್ ಸುರಾಜ್ 2-4 ಸ್ಥಾನಗಳನ್ನು ಮತ್ತು ಇತರರು 1-8 ಸ್ಥಾನಗಳನ್ನು ಪಡೆಯಬಹುದು ಎನ್ನುತ್ತಿದೆ.
ಜೆವಿಸಿಯ ಸಮೀಕ್ಷೆಯ ಪ್ರಕಾರ, ಎನ್‌ಡಿಎ 142 ಸ್ಥಾನಗಳನ್ನು, ಎಂಜಿಬಿ 95 ಮತ್ತು ಜೆಎಸ್‌ಪಿ 1 ಮತ್ತು ಇತರರು 5 ಸ್ಥಾನಗಳನ್ನು ಪಡೆಯಲಿದ್ದಾರೆ ಎಂದು ಊಹಿಸಲಾಗಿದೆ.
ಮ್ಯಾಟ್ರಿಜ್ ಎಕ್ಸಿಟ್ ಪೋಲ್ ಸಮೀಕ್ಷೆಯು ಎನ್‌ಡಿಎಗೆ 147-167 ಸ್ಥಾನಗಳು ಸಿಗುವ ಸುಳಿವು ನೀಡಿದ್ದು, ಇದು ಆರಾಮದಾಯಕ ಬಹುಮತವಾಗಿದೆ. ಮ್ಯಾಟ್ರಿಜ್ ಪ್ರಕಾರ, ಮಹಾಘಟಬಂಧನ್ ಚುನಾವಣೆಯಲ್ಲಿ 70-90 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.