ಬಳ್ಳಾರಿ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನ.13 ರಂದು (ಮೊದಲ ದಿನವಾದ ಗುರುವಾರ) ಅಗ್ನಿವೀರ್ ಸೇನಾ ನೇಮಕಾತಿ (Agniveer Army Recruitment) ರ‍್ಯಾಲಿಯು ಯಶಸ್ವಿಯಾಗಿ ನಡೆದಿದೆ.
ಈ ಸೇನಾ ನೇಮಕಾತಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಬೆಂಗಳೂರು ಆರ್‌ಓ ಕಚೇರಿ ವ್ಯಾಪ್ತಿಯ 13 ಜಿಲ್ಲೆಗಳ ಸುಮಾರು 400 ಯುವಕರು ಉತ್ಸಾಹದಿಂದ ಭಾಗಿಯಾಗಿದ್ದರು.
ರ‍್ಯಾಲಿ ನಡೆಯುವ ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಅಭ್ಯರ್ಥಿಗಳು ವರದಿ ಮಾಡಿಕೊಂಡು ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು.
ಶಾರೀರಿಕ ಪರೀಕ್ಷೆ, ಓಟ, ದೈಹಿಕ ಸಾಮರ್ಥ್ಯ ಪರೀಕ್ಷೆ ಸೇರಿದಂತೆ ವಿವಿಧ ರೀತಿಯ ಪರೀಕ್ಷಾ ಹಂತಗಳನ್ನು ಯಶಸ್ವಿಯಾಗಿ ಪೂರೈಸಿ 200 ಯುವಕರು ಮುಂದಿನ ಹಂತಕ್ಕೆ ಆಯ್ಕೆಯಾದರು.
ಈ ಸೇನಾ ರ‍್ಯಾಲಿ ಪ್ರಕ್ರಿಯೆಯನ್ನು ಮೊದಲನೇ ದಿನ ಸೇನಾ ನೇಮಕಾತಿ ಮಂಡಳಿ ಅಧಿಕಾರಿಗಳು ಶಿಸ್ತುಬದ್ಧವಾಗಿ ಮುನ್ನಡೆಸಿದರು. ಅಗ್ನಿವೀರ್ ಸೇನೆಗಾಗಿ ಮುಂದಿನ ಹಂತಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಲಾಗಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದರು.