ಕೆ.ಎಂ.ಸಂತೋಷ್, ಆರೂಢಿ: ಮಹಿಳೆಯರ ಖಾತೆಗೆ 10 ಸಾವಿರ, ಮನೆಗೊಂದು ಸರ್ಕಾರಿ ನೌಕರಿ ಘೋಷಣೆ, ವೋಟ್ ಚೋರಿ ಆರೋಪ, ನಿರುದ್ಯೋಗ ಸಮಸ್ಯೆ ಆರೋಪ ಸೇರಿದಂತೆ ತೀವ್ರ ಜಿದ್ದಾಜಿದ್ದಿಯಿಂದ ನಡೆದ ಬಿಹಾರ ವಿಧಾನಸಭಾ ಚುನಾವಣೆ (Bihar election)ಯಲ್ಲಿ NDA ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದ್ದು, ಮಹಾಘಟಬಂಧನ್‌ಗೆ ಮುಖಭಂಗವಾಗಿದೆ.
ಗೃಹಸಚಿವ ಅಮಿತ್ ಶಾ ಚುನಾವಣೆ ಪ್ರಚಾರ ಭಾಷಣದಲ್ಲಿ ಹೇಳಿದಂತೆಯೇ ಇಂದು ಬೆಳಗ್ಗೆ ಆರಂಭದಿಂದ ಮತ ಎಣಿಕೆಯಲ್ಲಿ ಪ್ರತಿ ಹಂತದಲ್ಲೂ NDA ಗೆಲುವಿನತ್ತ ಭರ್ಜರಿಯಾಗಿ ಸಾಗಿದ್ದು, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಮಹಾಘಟ ಬಂಧನದ ಮುಖ್ಯಮಂತ್ರಿ ಘೋಷಿತ ಅಭ್ಯರ್ಥಿ ತೇಜಸ್ವಿ ಯಾದವ್ ಬಿಹಾರದ ಚುನಾವಣೆ ಫಲಿತಾಂಶದಲ್ಲಿ ಚಾಪೆ ಸುತ್ತುವಂತೆಯೇ ಮಾಡಿದೆ.
ಸಿಎಂ ಕುರ್ಚಿ ಮೇಲೆ JDU ಟವೆಲ್
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ NDA ಮೈತ್ರಿಕೂಟ ಮುನ್ನಡೆ ಸಾಧಿಸಿ, ಬಿಜೆಪಿ ಮತ್ತು JDU ತಮ್ಮ ಬಲವನ್ನು ಪ್ರದರ್ಶಿಸಿವೆ. ಈ ಹಂತದಲ್ಲಿ, ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಬಗ್ಗೆ ಚರ್ಚೆ ಆರಂಭವಾಗಿದೆ.

ನಿತೀಶ್ ಮತ್ತೆ ಸಿಎಂ ಆಗಲಿದ್ದಾರೆ ಎಂದು ಫಲಿತಾಂಶ ಖಚಿತವಾದ ಬಳಿಕ JDU ಪೋಸ್ಟ್ ಮಾಡಿತ್ತು. ಆದರೆ ಅದನ್ನು ಕೆಲ ಕ್ಷಣಗಳಲ್ಲಿಯೇ ಅಳಿಸಲಾಗಿದೆ. ಇದರೊಂದಿಗೆ, ಮುಂದಿನ ಸಿಎಂ (ಬಿಹಾರ ಮುಖ್ಯಮಂತ್ರಿ) ಯಾರಾಗಲಿದ್ದಾರೆ ಎಂಬ ಪ್ರಶ್ನೆ ಉಂಟು ಮಾಡಿದೆ.
JDU ಮಾಡಿದ್ದ ಟ್ವೀಟ್ನಲ್ಲಿ ನಿತೀಶ್ ಕುಮಾರ್ ಪೋಟೋ ಬಳಸಿ, ಈ ಫಲಿತಾಂಶ ನಾ ಭೂತ್, ನಾ ಭವಿಷ್ಯತಿ, ಬಿಹಾರದ ಜನರ ಪ್ರೀತಿ ನಿತೀಶ್ ಕುಮಾರ್ ಮತ್ತೊಮ್ಮೆ, ನಿತೀಶ್ ಕುಮಾರ್ ಸರ್ಕಾರ ಜೆಡಿಯು ಬರುತ್ತಿದೆ ಮತ್ತು ಬಿಹಾರ ಅದಕ್ಕೆ ಸಿದ್ಧವಾಗಿದೆ ಎಂದಿದ್ದರೆ
ಮತ್ತೊಂದು ಪೋಸ್ಟ್‌ನಲ್ಲಿ “ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಸೇವೆ ಸಲ್ಲಿಸುತ್ತಿದ್ದಾರೆ. ಅವರು ಭವಿಷ್ಯದಲ್ಲಿ ಸೇವೆ ಸಲ್ಲಿಸುತ್ತಾರೆ” ಎಂದು ಅದು ಹೇಳಿದೆ. ಆದರೆ ಈ ಟ್ವೀಟನ್ನು ಕೆಲವೇ ಕ್ಷಣಗಳಲ್ಲಿ ಡಿಲೀಟ್ ಮಾಡಿರುವ ಕಾರಣ ಏನು..? ಎಂಬ ಚರ್ಚೆ ವ್ಯಾಪಕವಾಗಿ ನಡೆಯುತ್ತಿದೆ.
ಬಿಹಾರ ವಿಧಾನಸಭಾ ಚುನಾವಣೆಗೆ ಎನ್‌ಡಿಎ ಮೈತ್ರಿಕೂಟ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿಲ್ಲ. ನಿತೀಶ್ ನೇತೃತ್ವದಲ್ಲಿ ಮುನ್ನಡೆಯುವುದಾಗಿ ಮಾತ್ರ ಹೇಳಿದೆ. ಮತ್ತೊಂದೆಡೆ, ಉಪಮುಖ್ಯಮಂತ್ರಿ ಬಿಜೆಪಿಯ ಸಾಮ್ರಾಟ್ ಚೌಧರಿ ದೊಡ್ಡ ವ್ಯಕ್ತಿಯಾಗುತ್ತಾರೆ ಎಂದು ಗೃಹಸಚಿವ ಅಮಿತ್ ಶಾ ಚುನಾವಣಾ ಪ್ರಚಾರದ ಭಾಗವಾಗಿ ಹೇಳಿಕೆ ನೀಡಿದ್ದರು.
ಜನರು ಸಾಮ್ರಾಟ್‌ಗೆ ಮತ ಹಾಕಿ ಅವರನ್ನು ಗೆಲ್ಲಿಸಬೇಕು ಮತ್ತು ಮುಂದಿನ ದಿನಗಳಲ್ಲಿ ಪ್ರಧಾನಿ ಮೋದಿ ಅವರನ್ನು “ದೊಡ್ಡ ವ್ಯಕ್ತಿ, ಬಹಳ ದೊಡ್ಡ ವ್ಯಕ್ತಿ”ಯನ್ನಾಗಿ ಮಾಡುತ್ತಾರೆ ಎಂದು ಅವರು ಹೇಳಿದರು. ಈ ಹೇಳಿಕೆಗಳನ್ನು ನೀಡುವಲ್ಲಿ ಅಮಿತ್ ಶಾ ಅವರ ಉದ್ದೇಶ ಏನೆಂದು ಕಾದು ನೋಡಬೇಕಾಗಿದೆ.
ಬಿಜೆಪಿ ಭರ್ಜರಿ ಸಾಧನೆ
ಈ ಬಾರಿಯ ಬಿಹಾರ ಚುನಾವಣೆ ಬಿಜೆಪಿ ಪ್ರಸ್ತುತ (8.50 PM) ಚುನಾವಣೆ ಆಯೋಗದ ಅಧಿಕೃತ ಮಾಹಿತಿ ಅನ್ವಯ 89ಕ್ಕೂ ಹೆಚ್ಚು ಸ್ಥಾನ ಪಡೆದು, ಜೆಡಿಯುಗಿಂತ 5 ಸ್ಥಾನ ಹೆಚ್ಚು ಪಡೆದು ಹಿಂದಕ್ಕೆ ತಳಿದೆ. ಇದು ನಿತೀಶ್ ಕುಮಾರ್ ಅವರ ಸ್ಥಾನಕ್ಕೆ ಕುತ್ತುತರಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ.
ಈ ಕುರಿತಂತೆ ಹಿರಿಯ ಪತ್ರಕರ್ತ ರವೀಶ್ ಕುಮಾರ್ ಮಾರ್ಮಿಕವಾಗಿ ಪ್ರಶ್ನೆ ಮಾಡಿದ್ದು, ಬಿಹಾರ ಚುನಾವಣೆಯಲ್ಲಿ NDA ಮಹತ್ತರವಾದ ಸಾಧನೆ ಮಾಡಿದೆ. ಆದರೆ ಮುಖ್ಯಮಂತ್ರಿ ಸ್ಥಾನ ನಿತೀಶ್ ಕುಮಾರ್ ಅವರಿಗೆ ಎಂದು ಹೇಳಿ ಟ್ಚೀಟ್ ಡಿಲೀಟ್ ಮಾಡಿ ಹಿಂದೆ ಸರಿದೆ. ಆದರೆ ಬಿಜೆಪಿ ತಮ್ಮ ಅಭಿಪ್ರಾಯವನ್ನು NDA ಗೆಲುವು ಎನ್ನುವ ಮೂಲಕ ಸಾಂದರ್ಭಿಕವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿದೆ.
ನಿತೀಶ್ ಕುಮಾರ್ ಸಿಎಂ ಆಗ್ತಾರಾ..?
ಬಿಹಾರ ಚುನಾವಣೆಯಲ್ಲಿ NDA ಪ್ರಚಂಡ ಗೆಲುವಿಗೆ ಕಾರಣ ನಿತೀಶ್ ಕುಮಾರ್ ಎಂಬುದು ತಳ್ಳಿಹಾಕುವಂತಿಲ್ಲ. ಆದರೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಪಡೆಯುವವರು ಯಾರು..? ಎಂಬ ಪ್ರಶ್ನೆ ಎದುರಾಗಿದೆ.
ಜೆಡಿಯು ಬಿಹಾರವನ್ನು ಮಹಾರಾಷ್ಟ್ರದಲ್ಲಿ ಆದಂತೆ ಮಾಡಲು ಸಿದ್ದವಿಲ್ಲ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಆದರೆ ನಿತೀಶ್ ಬಿಜೆಪಿಗೆ ಕೈಕೊಟ್ಟು ಅಖಿಲೇಶ್ ಯಾದವ್ ಜೊತೆಯಂತು ಸರ್ಕಾರ ರಚಿಸಲು ಸಾಧ್ಯವಿಲ್ಲ.
ಈ ಹಿಂದೆ ಮಹಾರಾಷ್ಟ್ರದಲ್ಲಿ ಸಿಎಂ ಆಗಿದ್ದ ಏಕನಾಥ ಶಿಂದೆ ಅವರನ್ನು ಡಿಸಿಎಂ ಮಾಡಿದ್ದಂತೆ ಬಿಹಾರದಲ್ಲಿ ನಿತೀಶ್ ಕುಮಾರ್ ಅವರಿಗೆ ಮಾಡುವ ಸಾಧ್ಯತೆ ಕಂಡುಬರುತ್ತಿಲ್ಲ. ಏಕೆಂದರೆ ಬಿಹಾರದಲ್ಲಿ ಬಿಜೆಪಿ ಹೆಚ್ಚಿನ ಕ್ಷೇತ್ರ ಪಡೆದಿದ್ದರು, ಜೆಡಿಯು 5 ಕ್ಷೇತ್ರಗಳ ಅಂತರದಲ್ಲಿ ಬಿಜೆಪಿಗೆ ಸಮಾನವಾಗಿದೆ.
ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂದೆ ಅವರನ್ನು ಮುಂದು ಮಾಡಿ ಎನ್‌ಡಿಎ ನೇತೃತ್ವದಲ್ಲಿ ಗೆದ್ದ ಬಳಿಕ, ಬಿಜೆಪಿ ಹೆಚ್ಚಿನ ಸ್ಥಾನ ಪಡೆದಿದ್ದ ಏಕ ಮಾತ್ರ ಕಾರಣ ಶಿಂದೆ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ ಬಿಜೆಪಿ, ಅವರನ್ನು ಡಿಸಿಎಂ ಮಾಡಿ, ತಮ್ಮ ಪಕ್ಷದ ದೇವೇಂದ್ರ ಫಡ್ನವಿಸ್ ಅವರನ್ನು ಸಿಎಂ ಮಾಡಿತ್ತು.
ಮಹಾರಾಷ್ಟ್ರದಂತೆ ಬಿಹಾರದಲ್ಲಿ ಮುಖ್ಯಮಂತ್ರಿ ಮಾಡಲು ಬಿಜೆಪಿ ಬಯಸುತ್ತದೆಯೇ..?
ಹಿಂದಿ ಪ್ರದೇಶಗಳಲ್ಲಿ ಬಿಹಾರ ಮಾತ್ರ ಬಿಜೆಪಿ ಮುಖ್ಯಮಂತ್ರಿ ಆಗುವುದು ಬಾಕಿ ಉಳಿದಿದೆ. ಏಕೆಂದರೆ ಈ ಮುಂಚೆ ಈ ರಾಜ್ಯದಲ್ಲಿ ಅದು ಉಪಮುಖ್ಯಮಂತ್ರಿ ಸ್ಥಾನಕ್ಕೆ ತೃಪ್ತಿ ಪಡುವಂತ ಸ್ಥಿತಿ ಎದುರಾಗಿತ್ತು. ಆದರೆ ಈ ಚುನಾವಣೆಯಲ್ಲಿ ಬಿಜೆಪಿ ಜೆಡಿಯುವನ್ನು ಹಿಂದಿಕ್ಕಿ ಭರ್ಜರಿ ಗೆಲುವು ಪಡೆದಿದೆ.
ಇದರಿಂದಾಗಿ ಈ ಬಾರಿ ಬಿಹಾರದಲ್ಲಿ ಬಿಜೆಪಿ ಮುಖ್ಯಮಂತ್ರಿ ಪಡೆಯುವುದೇ ಕಾದ ನೋಡಬೇಕಿದೆ.
ನಿತೀಶ್ ಬಿಜೆಪಿಗೆ ಕೈಕೊಡಲು ಸಾಧ್ಯವೇ
ಚುನಾವಣೆ ವೇಳೆ ನಿತೀಶ್ ಕುಮಾರ್ ಅವರಿಗೆ ವಯಸೋ ಸಹಜ ಅನಾರೋಗ್ಯವಿದೆ ಎನ್ನಲಾಗುತ್ತಿದ್ದರು. ಆದರೆ ಚುನಾವಣೆ ಪ್ರಚಾರದಲ್ಲಿ ನಿತೀಶ್ ಕುಮಾರ್ ಏಕಾಏಕಿ ಸಕ್ರಿಯವಾಗಿ ಕಂಡುಬಂದರು. ಅದೇ ರೀತಿ ಫಲಿತಾಂಶದ ಬಳಿಕವೂ ನಿತೀಶ್ ಕುಮಾರ್ ಸಕ್ರಿಯವಾಗಿ ಕಂಡುಬರುವರೇ..? ಮುಖ್ಯಮಂತ್ರಿ ಸ್ಥಾನಕ್ಕೆ ಹಕ್ಕು ಸ್ಥಾಪಿಸುವರೇ..?
ಏಕೆಂದರೆ ಹಕ್ಕು ಸ್ಥಾಪಿಸಲು ಬೇಕಾದಷ್ಟು ಕ್ಷೇತ್ರಗಳಲ್ಲಿ ಜೆಡಿಯು ಗೆದ್ದಿದೆ. ಆದರೆ ಬಿಜೆಪಿಗೆ ಕೈಕೊಡಲು ಸಾಧ್ಯವಿಲ್ಲ. ಕಾರಣ ಮಹಾಘಟಬಂಧನದ ಬಳಿ ಅಷ್ಟು ಸ್ಥಾನಗಳಿಲ್ಲ. ಬೇಕಾದರೆ ಬಿಜೆಪಿ ಬಯಸಿದರೆ ಜೆಡಿಯುವನ್ನು ಹೊರಗಿಟ್ಟು ಇತರೆ ಪಕ್ಷಗಳೊಂದಿಗೆ ಸೇರಿ ಅಧಿಕಾರಕ್ಕೆ ಬರಬಹುದು, ಅದಕ್ಕೆ ಬೇಕಿರುವುದು ಕಡಿಮೆ ಮತಗಳು ಮಾತ್ರ.
ನಿತೀಶ್ ಮುಖ್ಯಮಂತ್ರಿಯಾಗಲು ಬಿಜೆಪಿ ಒಪ್ಪುವುದೇ..?
ಇಂದಿನ ಫಲಿತಾಂಶ ನೋಡಿದಾಗ ಎನ್‌ಡಿಎಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಬಿಜೆಪಿ ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರಿಯಲು ಬಿಡುವುದೇ.? ಏಕೆಂದರೆ ಬಿಹಾರ ಚುನಾವಣೆ ಫಲಿತಾಂಶದಲ್ಲಿ ಯಾರಾದ್ರೂ ನಿತೀಶ್ಗೆ ಸ್ಪರ್ಧೆ ನೀಡುವರು ಇದ್ದರೆ ಅದು ಬಿಜೆಪಿ ಮಾತ್ರ.
ಬಿಹಾರ ಚುನಾವಣೆಗೂ ಮುನ್ನ ನಿತೀಶ್ ಕುಮಾರ್ ಎನ್‌ಡಿಎ ಕಿಂಗ್ ಮೇಕರ್ ಆಗುತ್ತಾರೆ ಎನ್ನಲಾಗುತ್ತಿತ್ತು. ಆದರೆ ಫಲಿತಾಂಶ ಎಲ್ಲಾ ಚರ್ಚೆಗಳನ್ನು ಹೊಸಕಿಹಾಕುವಂತೆ ಬಿಜೆಪಿ ಸಾಧನೆ ಮಾಡಿದೆ. ಇದರಿಂದ ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿ ಹಕ್ಕು ಮಂಡಿಸುವುದೆ..? ಏಕೆಂದರೆ ಜೆಡಿಯು ಇಂದು ನಿತೀಶ್ ಮುಖ್ಯಮಂತ್ರಿ ಆಗಿರಲಿದ್ದಾರೆ ಎಂದು ಮಾಡಿದ್ದ ಟ್ವೀಟ್ ಡೀಲಿಟ್ ಮಾಡಿಕೊಂಡಿದೆ.
ಒಂದು ವೇಳೆ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಮುಂದುವರೆಯುವುದಾಗಿದ್ದರೆ ಜೆಡಿಯು ಟ್ವೀಟ್ ಡಿಲೀಟ್ ಮಾಡಿದ್ದು ಏಕೆ..? ಎಂಬ ಪ್ರಶ್ನೆ ಅನೇಕರದ್ದು.
ಪೂರ್ತಿ ಚುನಾವಣೆ ಗಮನಿಸಿದಾಗ ಎಡಿಎ ಯಾವುದೇ ವ್ಯಕ್ತಿಯ ನೇತೃತ್ವ ಎಂದು ಘೋಷಿಸಲಿಲ್ಲ. ಸ್ವತಃ ಬಿಜೆಪಿ ಪಕ್ಷದಿಂದಲೂ ಇವರದ್ದೇ ನೇತೃತ್ವ ಎಂದು ಮುಖ ತೋರಿಸಲಿಲ್ಲ.
ಈಗ ಬಿಹಾರದಲ್ಲಿ ದೊರೆತ ಪ್ರಚಂಡ ಬಹುಮತದಿಂದ ಎನ್‌ಡಿಎಗೆ ಎದುರಾಗಿರುವ ಪ್ರಶ್ನೆ, ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬುದು, ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಲು ಬಿಜೆಪಿ ಬಿಡುವುದೆ..? ಅಥವಾ ನಿತೀಶ್ ಕುಮಾರ್ ದೊಡ್ಡ ಮನಸ್ಸು ಮಾಡಿ, ಬಿಜೆಪಿಗೆ ಸಿಎಂ ಸ್ಥಾನ ಬಿಟ್ಟುಕೊಡುವರೇ ಎಂಬುದಾಗಿದೆ..?
ಸಿಎಂ ಆಯ್ಕೆ ಮಾಡುವವರು ಯಾರು..?
ಚುನಾವಣೆ ಮುನ್ನ ಎನ್‌ಡಿಎ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ, ಚುನಾಯಿತ NDA ಶಾಸಕರು ಆಯ್ಕೆ ಮಾಡುತ್ತಾರೆ ಎಂಬುದಾಗಿತ್ತು. ಆದರೆ ಈ ಫಲಿತಾಂಶ ನೋಡಿದರೆ ಚುನಾಯಿತ ಎನ್‌ಡಿಎ ಶಾಸಕರು ಮಾಡುವರೋ..? ಅಥವಾ ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ ಮಾಡುವರೋ..? ಕಾದು ನೋಡಬೇಕಿದೆ.
ಒಟ್ಟಾರೆ ಇಂದಿನ ಬಿಹಾರ ಗೆಲುವು ಕುರಿತು ಜೆಡಿಯು ಸಿಎಂ ನೀತಿಶ್ ಕುಮಾರ್ ಎಂದಿದ್ದ ಟ್ವೀಟ್ ಡಿಲೀಟ್ ಮಾಡಿದ್ದು ಏಕೆ ಎಂಬ ಪ್ರಶ್ನೆ ಕಾರ್ಯಕರ್ತರನ್ನು ಚಿಂತೆಗೀಡಾಗುವಂತೆ.