ಬೆಂಗಳೂರು: ರಾಜ್ಯ ಸರ್ಕಾರದ ಕ್ಯಾಬಿನೆಟ್ ನಲ್ಲಿ 46 ಕಸ ಗುಡಿಸುವ ಯಂತ್ರಗಳನ್ನು 7 ವರ್ಷದವರೆಗೂ ಬಾಡಿಗೆ ಆಧಾರದ ಮೇಲೆ ಪಡೆಯಲು ಒಪ್ಪಿಗೆ ನೀಡಿದೆ.ಬಾಡಿಗೆ ನೆಪದಲ್ಲಿ ಕಮೀಷನ್ ಗೋಲ್ ಮಾಲ್ ಎಂದು ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು ಕಿಡಿಕಾರಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಬಾಡಿಗೆಗೆ ಬದಲು ಖರೀದಿಗೆ ಕಡಿಮೆ ವೆಚ್ಚ. ಇದು ತಪ್ಪು ಲೆಕ್ಕಾಚಾರವಲ್ಲ. ಗಣಿತವನ್ನು ಮಧ್ಯಾಹ್ನದ ಬೆಳಕಲ್ಲೇ ಕೊಂದು, ಹೂತು, ದಹನ ಮಾಡಿದಂತದ್ದು ಎಂದು ನಿಖಿಲ್ ಅವರು ಗಂಭೀರವಾಗಿ ಆರೋಪಿಸಿದರು.
ಬೆಂಗಳೂರಿನಲ್ಲಿ ಬಿಬಿಎಂಪಿ ಯಾರ್ಡ್‌ಗಳಲ್ಲಿ 26 ಕಸ ಗುಡಿಸುವ ಯಂತ್ರಗಳು ಬಳಕೆಯಾಗದೆ ಬಿದ್ದಿವೆ. ಆದರೆ ಡಿಸಿಎಂ ನೇತೃತ್ವದ ಕಾಂಗ್ರೆಸ್ ಸರ್ಕಾರವು ಈಗ ₹613 ಕೋಟಿ ಖರ್ಚು ಮಾಡಿ, ಪ್ರತಿ ಯಂತ್ರಕ್ಕೆ ₹1.9 ಕೋಟಿಯಂತೆ 46 ಹೆಚ್ಚುವರಿ ಬಾಡಿಗೆ ನೀಡಲು ಬಯಸಿದೆ. ಅದೇ ಯಂತ್ರಗಳನ್ನು ಖರೀದಿಸಲು ಕೇವಲ ₹1.3-3 ಕೋಟಿ ವೆಚ್ಚವಾಗುತ್ತದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಈ ಯಂತ್ರಗಳನ್ನು ಖರೀದಿಸಲು ತಜ್ಞರ ಸಮಿತಿಯು ಶಿಫಾರಸು ಮಾಡಿತು. ಆದರೆ ಬಿಸಿಜಿ ಕಾರ್ಯಕ್ಷಮತೆಗಾಗಿ ಪಾವತಿ ಮಾದರಿಯನ್ನು ಪ್ರತಿಪಾದಿಸಿತು. ಆದರೂ ಡಿಸಿಎಂ ಮತ್ತು ಅವರ ತಂಡ ಅತ್ಯಂತ ದುಬಾರಿ ಆಯ್ಕೆಯನ್ನು ಆರಿಸಿ, ಅದನ್ನು ಆಡಳಿತ ಎಂದು ಲೇಬಲ್ ಮಾಡಿ ಹೊಸ ಆರ್ಥಿಕ ಸಿದ್ಧಾಂತವನ್ನು ರಚಿಸಿದೆ ಎಂದು ನಿಖಿಲ್ ಅವರು ದೂರಿದ್ದಾರೆ.
ಬಹುಶಃ ವೆಚ್ಚ, ಕಾರ್ಯಕ್ಷಮತೆ ಮತ್ತು ಹೊಣೆಗಾರಿಕೆಯ ನಿಜವಾದ ಅರ್ಥವನ್ನು ತಿಳಿದಿರುವ ಕಿರಣ್ ಮಜುಂದಾರ್ ಶಾ ಹಾಗೂ ಟಿ.ವಿ. ಮೋಹನದಾಸ್ ಪೈ ಅವರಂತಹ ಕಾರ್ಪೊರೇಟ್ ನಾಯಕರು ಈ ಸರ್ಕಾರಕ್ಕೆ ಒಂದು ಕ್ರ್ಯಾಶ್ ಕೋರ್ಸ್ ಮೂಲಭೂತ ಗಣಿತದಲ್ಲೇ ಉತ್ತರ ಕೊಡಬೇಕಾದ ಸಮಯ ಬಂದಿದೆ. ಇಲ್ಲದಿದ್ದರೆ ಇನ್ನೊಂದು ₹600 ಕೋಟಿ ಇದೇ ರೀತಿ ಕಾಣೆಯಾಗಬಹುದು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.