ಕಲಬುರಗಿ: ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ (Mahantesh Bilagi) ಸೇರಿ ಮೂವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಸಂಬಂಧಿಕರ ವಿವಾಹ ಕಾರ್ಯಕ್ರಮಕ್ಕೆಂದು ವಿಜಯಪುರದಿಂದ ಕಲಬುರಗಿಗೆ ತೆರಳುತ್ತಿದ್ದ ವೇಳೆ ಜೇವರ್ಗಿ ತಾಲೂಕಿನ ಗೌನಳ್ಳಿ ಕ್ರಾಸ್ ಬಳಿ ಏಕಾಏಕಿ ಅಡ್ಡ ಬಂದ ಶ್ವಾನವನ್ನು ಉಳಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ ಇನ್ನೋವಾ ಕಾರು ಪಲ್ಟಿ ಯಾಗಿದೆ.
ಕಾರಿನಲ್ಲಿದ್ದ ಮಹಾಂತೇಶ್ ಸಹೋದ ರರಾದ ಶಂಕರ ಬೀಳಗಿ ಹಾಗೂ ಈರಣ್ಣ ಶಿರಸಂಗಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರು ಕಲಬುರಗಿಯ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆ ಳೆದಿದ್ದಾರೆ.
ಮಹಾಂತೇಶ್ ಬೀಳಗಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಆಸ್ಪತ್ರೆಗೆ ಐಜಿಪಿ ಶಾಂತನು ಸಿನ್ಹಾ ಸೇರಿ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಅಪಾರ ಅಭಿಮಾನಿಗಳ ಬಳಗ
ಮಹಾಂತೇಶ್ ಬೀಳಗಿ ಅವರು ವಿದ್ಯಾರ್ಥಿಗಳಿಗೆ ಸಮಯ ಸಿಕ್ಕಾಗೆಲ್ಲಾ ಪ್ರೋತ್ಸಾಹ ಕೊಡುವುದನ್ನು ತಪ್ಪಿಸುತ್ತಿರಲಿಲ್ಲ. ಜ್ಞಾನ ಬೆಳೆಸಿಕೊಳ್ಳಿ ಅಂತ ಎಲ್ಲರಿಗೂ ಸಲಹೆ ಮಾಡುತ್ತಿದ್ದರು. ಕಷ್ಟದ ಬದುಕಿನಲ್ಲೂ ಶ್ರಮದಿಂದ ಓದಿ ಉನ್ನತ ಹುದ್ದೆಗೆ ಏರಿದ ಅವರು ತಮ್ಮ ಕೆಲಸಗಳಿಂದ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
‘ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ವಾಪಸ್ ಕೊಡಬೇಕು,’ ಅನ್ನೋದು ಅವರು ಅನುಸರಿಸುತ್ತಿದ್ದ ತತ್ವಗಳಲ್ಲಿ ಒಂದಾಗಿತ್ತು.
ಬೆಸ್ಕಾಂ ಬಳಿಕ ಖನಿಜ ನಿಗಮದ ಎಂಡಿ
ಬೆಳಗಾವಿ ಜಿಲ್ಲೆಯ ರಾಮದುರ್ಗದವರಾದ ಬೀಳಗಿಯವರು 2012 ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿಯಾಗಿದ್ದರು. ಹಲವು ಜಿಲ್ಲೆಗಳ ಸಿಇಒ, ಡಿಸಿ ಆಗಿ ಕಾರ್ಯ ನಿರ್ವಹಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ದಾವಣಗೆರೆ ಜಿಲ್ಲಾಧಿಕಾರಿ ಸ್ಥಾನದಿಂದ ವರ್ಗಾವಣೆಗೊಂಡು ಬೆಸ್ಕಾಂ ಎಂಡಿಯಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಇತ್ತೀಚೆಗೆ ಅಲ್ಲಿಂದಲೂ ವರ್ಗಾವಣೆ ಯಾಗಿ ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.
ಇಂದು ಅಂತ್ಯಕ್ರಿಯೆ
ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅಂತ್ಯಕ್ರಿಯೆ ಹುಟ್ಟೂರಾದ ರಾಮದುರ್ಗದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗುತ್ತದೆ.