ದೊಡ್ಡಬಳ್ಳಾಪುರ: ತಾಲ್ಲೂಕಿನ ಅರೆಹಳ್ಳಿಗುಡ್ಡದಹಳ್ಳಿ ಗ್ರಾಮದ ಸರ್ವೇ ನಂ. 57ರಲ್ಲಿ 10 ಎಕರೆ ಸರ್ಕಾರಿ ಗೋಮಾಳಕ್ಕೆ ನಕಲಿ ದಾಖಲೆ ಸೃಷ್ಠಿಸಿ (creating fake documents) 6 ಎಕರೆ ಜಮೀನನ್ನು ಭೂಗಳ್ಳರು ಅಧಿಕಾರಿಗಳ ಸಹಾಯದಿಂದ ಮ್ಯುಟೇಷನ್ ಪುಸ್ತಕದಲ್ಲಿ ಇಲ್ಲದ ಪುಟಗಳನ್ನು ಸೇರಿಸಿ ನಕಲಿ ಸಹಿ ಹಾಕುವುದರ ಮೂಲಕ ದಾಖಲೆಯನ್ನು ತಿರುಚಿರುವ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಬಣದ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು (A.B. Basavaraju) ಅವರಿಗೆ ಮನವಿ ಸಲ್ಲಿಸಿದರು.
ಈ ಬಗ್ಗೆ ಮಾಹಿತಿ ನೀಡಿರುವ ರಾಜ್ಯ ಅಧ್ಯಕ್ಷ ಬಿ.ಎಸ್.ಚಂದ್ರಶೇಖರ್, ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶ ಹಾಗೂ ನಗರದ ಅಂಚಿನಲ್ಲೇ ಇರುವ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಜಮೀನಿಗೆ ತಿರುಚಿರುವ ನಕಲಿ ದಾಖಲೆಗಳನ್ನು ಆಧಾರವನ್ನಾಗಿಸಿಕೊಂಡು ಭೂಗಳ್ಳರು ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಈ ಜಮೀನಿಗೆ ಖಾತೆ ಮಾಡಿಕೊಡುವಂತೆ ದೂರು ದಾಖಲಿಸಿ ಆದೇಶ ಪಡೆದಿದ್ದಾರೆ.
ಜಿಲ್ಲಾಧಿಕಾರಿಗಳು ಉಪವಿಭಾಗಾಧಿಕಾರಿಗಳ ಆದೇಶವನ್ನು ಈಗಾಗಲೇ ರದ್ದುಗೊಳಿಸಿ ಸರ್ಕಾರದ ವಶಕ್ಕೆ ಪಡೆದಿದ್ದಾರೆ. ಇಷ್ಟಾದರು ಸಹ ಭೂ ಸುರಕ್ಷಾ ಯೋಜನೆ ಬಳಸಿಕೊಂಡು ನಕಲಿ ದಾಖಲೆಗಳನ್ನು ಸೃಷ್ಠಿಸಿಕೊಂಡು ಮತ್ತೆ ಭೂಗಳ್ಳರು ಸರ್ಕಾರಿ ಜಾಗವನ್ನು ಕಬಳಿಸಲು ಹುನ್ನಾರ ರೂಪಿಸಿದ್ದಾರೆ.
ಈ ದಾಖಲೆಗಳನ್ನು ಸೃಷ್ಟಿಸಲು ಸಹಕರಿಸಿರುವ ಎಲ್ಲಾ ಸರ್ಕಾರಿ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಭೂ ಸುರಕ್ಷಾ ಯೋಜನೆಯಲ್ಲಿ ಹಳೇಯ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡುತ್ತಿರುವ ಕೇಂದ್ರ ಹಾಗೂ ಹಳೇಯ ದಾಖಲೆ ಕೊಠಡಿಯಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸಬೇಕು.
ಈ ಕೂಡಲೇ ಜಿಲ್ಲಾಧಿಕಾರಿಗಳು ಪೊಲೀಸ್ ಇಲಾಖೆಗೆ ದೂರು ನೀಡಿ ಈ ಪ್ರಕರಣಕ್ಕೆ ಸಂಬಂಧಿಸಿದ ಕಡತಗಳನ್ನು ವಶಕ್ಕೆ ಪಡೆಯಬೇಕು, ಈ ಜಮೀನಿಗೆ ಈಗಾಗಲೇ ಸ್ಕ್ಯಾನ್ ಮಾಡಿರುವ ದಾಖಲೆಗಳನ್ನು ನಕಲಿ ದಾಖಲೆ ಎಂದು ಗುರುತು ಮಾಡಿ ಸಾರ್ವಜನಿಕರಿಗೆ ವಿತರಿಸದಂತೆ ತಡೆಹಿಡಿಯಬೇಕು.
ಸರ್ವೇ ನಂ.57ರ ಸ್ವತ್ತಿನ ಸಂಬಂಧ ನಡೆದಿರುವ ಭೂಗಳ್ಳತನದ ವಿರುದ್ಧ ಕಾನೂನು ಬದ್ಧ ಕ್ರಮ ಕೈಗೊಳ್ಳಬೇಕು ಎಂದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್ ರಮೇಶ್, ರಾಜ್ಯ ಮುಖಂಡ ಪಿ ವಾಸು, ಜಿಲ್ಲಾ ಯುವ ಘಟಕ ಅಧ್ಯಕ್ಷ ರಂಜಿತ್ ಗೌಡ, ತಾಲೂಕು ಅಧ್ಯಕ್ಷ ವಿನಯ ಆರಾಧ್ಯ, ದೊಡ್ಡಬಳ್ಳಾಪುರ ತಾಲೂಕು ಕಾರ್ಯದರ್ಶಿ ಪ್ರದೀಪ್ ಕುಮಾರ್ ಇದ್ದರು.