ನವದೆಹಲಿ: ಬಿಹಾರ ಚುನಾವಣೆ ಸಂದರ್ಭದಲ್ಲಿಯೇ ನಡೆಸಲಾಗುತ್ತಿರುವ ತರಾತುರಿ ವಿಶೇಷ ಮತಪಟ್ಟಿ ಪರಿಷ್ಕರಣೆ (SIR) ಕುರಿತು ಚರ್ಚೆಗೆ ಅವಕಾಶ ನೀಡದ ಮೋದಿ (Modi) ಸರ್ಕಾರ, ಕೊನೆಗೂ ವಿಪಕ್ಷಗಳ ಆಗ್ರಹಕ್ಕೆ ಮಣಿದಿದೆ.
ಸಂಸತ್ ಚಳಿಗಾಲದ ಅಧಿವೇಶನ ದಲ್ಲಿ ರಾಜ್ಯ ಸಭೆ ಲೋಕಸಭೆಯಲ್ಲಿ ಪ್ರತಿಪಕ್ಷಗಳ ಗದ್ದಲ, ಸಭಾತ್ಯಾಗದ ನಡುವೆಯೇ ಒಮ್ಮತ ಮೂಡಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ SIR ಕುರಿತು ಚರ್ಚೆಗೆ ಅವಕಾಶ ನೀಡುತ್ತಿಲ್ಲ ಎಂಬ ಆಕ್ರೋಶ ವ್ಯಾಪಕವಾಗಿದೆ.
ಅಂತಿಮವಾಗಿ ವಿಪಕ್ಷಗಳ ಒಕ್ಕೊರಲ ಆಗ್ರಹಕ್ಕೆ ಮೋದಿ ಸರ್ಕಾರ ಮಣಿದಿದ್ದು, ವಿಶೇಷ ಮತಪಟ್ಟಿ ಪರಿಷ್ಕರಣೆ (ಎಸ್‌ಐಆರ್)ಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲು ಒಪ್ಪಿದೆ. ಅಲ್ಲಿಗೆ ಬಿಕ್ಕಟ್ಟು ಸದ್ಯಕ್ಕೆ ಮುಗಿದಿದೆ.
ಕೇಂದ್ರ ಸರಕಾರ ಸಮಗ್ರ ಚುನಾವಣಾ ಸುಧಾರಣೆ ಬಗ್ಗೆ ಚರ್ಚಿಸಲಿದೆ. ಆ ಸಂದರ್ಭದಲ್ಲಿ ಪ್ರತಿಪಕ್ಷಗಳು ಎಸ್‌ಐಆರ್ ಅನ್ನು ಪ್ರಸ್ತಾಪಿಸಲಿವೆ. ಈ ಚರ್ಚೆ ಡಿ.9, 10ರಂದು ವಿಸ್ತ್ರತವಾಗಿ ಸಾಗಲಿದೆ.
ಇನ್ನು ವಂದೇ ಮಾತರಂ ರಚನೆಯಾಗಿ 150 ವರ್ಷಗಳಾಗಿರುವುದರಿಂದ ಅದರ ವಿಶೇಷ ಚರ್ಚೆಯನ್ನು ಸಂಸತ್ತಿನಲ್ಲಿ ನಡೆಸಲು ಕೇಂದ್ರ ಸರಕಾರ ಮುಂದಾಗಿದೆ. ಇದಕ್ಕೆ ಪ್ರತಿಪಕ್ಷಗಳು ಸಮ್ಮತಿಸಿವೆ.
ಡಿ.8ರಂದು ಈ ಚರ್ಚೆ ನಡೆಯಲಿದ್ದು, ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯೇ ವಿಷಯ ಪ್ರಸ್ತಾಪಿಸಲಿದ್ದಾರೆ.
ಓಂ ಬಿರ್ಲಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎರಡೂ ಗುಂಪುಗಳು ಅಂತಿಮ ತೀರ್ಮಾನಕ್ಕೆ ಬಂದವು.