ಬೆಳಗಾವಿ: ಎರಡೂವರೆ ವರ್ಷಗಳಲ್ಲಿ 2500 ರೈತರ ಆತ್ಮಹತ್ಯೆಯೇ ಈ ಕಾಂಗ್ರೆಸ್ ಸರಕಾರದ ಸಾಧನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ (B.Y. Vijayendra) ಅವರು ಟೀಕಿಸಿದ್ದಾರೆ.
ಭ್ರಷ್ಟ ಕಾಂಗ್ರೆಸ್ ಸರ್ಕಾರದ ರೈತವಿರೋಧಿ ನೀತಿಯನ್ನು ಖಂಡಿಸಿ ಬಿಜೆಪಿ ವತಿಯಿಂದ ಇಂದು “ಮಾಲಿನಿ ಸಿಟಿ ಮೈದಾನ”ದಲ್ಲಿ ನಡೆದ ಬೃಹತ್ ಪ್ರತಿಭಟನೆ ಸಂದರ್ಭದಲ್ಲಿ ಅವರು ಮಾತನಾಡಿದರು. ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವ ಮೊದಲು ಈ ಪ್ರತಿಭಟನೆ ನಡೆಯಿತು. ರೈತ ವಿರೋಧಿ ಸರಕಾರಕ್ಕೆ ಉಳಿಗಾಲವಿಲ್ಲ ಎಂದು ಅವರು ಎಚ್ಚರಿಸಿದರು.
ನಾಡಿನ ರೈತರ ಸಂಕಷ್ಟಕ್ಕೆ ನೀವು ಸ್ಪಂದಿಸಿದ್ದೀರಾ ಎಂದು ಜನರು ಕೇಳುತ್ತಿದ್ದಾರೆ. ಭತ್ತ, ಕಬ್ಬು, ಹತ್ತಿ, ಮೆಕ್ಕೆಜೋಳ ಮೊದಲಾದ ಉತ್ಪನ್ನ ಬೆಳೆಯುವ ರೈತರ ಮತ್ತು ಅನ್ನದಾತರ ಸಂಕಷ್ಟಕ್ಕೆ ನೀವು ಸ್ಪಂದಿಸಿಲ್ಲವೇಕೆ ಎಂದು ಟೀಕಿಸಿದರು. ಅತಿವೃಷ್ಟಿ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ನೆಲದ ಮೇಲೆ ಓಡಾಡಲಿಲ್ಲ; ವೈಮಾನಿಕ ಸಮೀಕ್ಷೆ ಮಾಡಿದ್ದರು ಎಂದು ಆಕ್ಷೇಪಿಸಿದರು.
ಕಾಂಗ್ರೆಸ್ ಸರಕಾರದ ರೈತವಿರೋಧಿ ನೀತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಎಫ್‍ಆರ್‍ಪಿಗಿಂತ ಹೆಚ್ಚು ಕನಿಷ್ಠ ಬೆಂಬಲ ಬೆಲೆ ನೀಡಲು ಅವಕಾಶವಿದೆ. ಆದರೆ, ಇದನ್ಯಾಕೆ ಮಾಡಿಲ್ಲ ಸಿದ್ದರಾಮಯ್ಯನವರೇ ಎಂದು ಕೇಳಿದರು. ಇದೊಂದು ಲಜ್ಜೆಗೆಟ್ಟ ಸರಕಾರ ಎಂದು ಆರೋಪಿಸಿದರು.
ಉತ್ತರ ಕರ್ನಾಟಕದ ಸಮಸ್ಯೆಗಳು, ರೈತರ ಸಂಕಷ್ಟದ ಕುರಿತು ಸದನದಲ್ಲಿ ಚರ್ಚೆ ಮಾಡಿ ಎಂದು ಆಗ್ರಹಿಸಿದರು.
ಯಡಿಯೂರಪ್ಪ ಅವರ ರೈತಪರ ನಿರಂತರ ಹೋರಾಟವನ್ನು ನೆನಪಿಸಿದ ಅವರು, ನಾನು ಯಡಿಯೂರಪ್ಪನವರ ಮಗನಾಗಿ, ಬಿಜೆಪಿ ರಾಜ್ಯಾಧ್ಯಕ್ಷನಾಗಿ ರೈತಪರವಾಗಿ ಸದಾ ನಿಲ್ಲುವುದಾಗಿ ಹೇಳಿದರು. ರೈತರ ಹೋರಾಟಕ್ಕೆ ನ್ಯಾಯ ಸಿಗುವವರೆಗೆ ವಿರಮಿಸುವುದಿಲ್ಲ ಎಂದು ಅವರು ತಿಳಿಸಿದರು.