ದೊಡ್ಡಬಳ್ಳಾಪುರ (Doddaballapura): ಡಿ. 21 ರಂದು ನಡೆಯಲಿರುವ ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಗೆ ಸೋಮವಾರ ಒಂದೇ ದಿನ 27 ನಾಮಪತ್ರಗಳು (Nomination) ಸಲ್ಲಿಕೆಯಾಗಿದ್ದು, ಈವರೆಗೆ ಒಟ್ಟು 35 ನಾಮಪತ್ರಗಳು ಸಲ್ಲಿಕೆಯಾಗಿವೆ.
ಒಟ್ಟು 19 ವಾರ್ಡ್ಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ 12ನೇ ವಾರ್ಡ್ ಬ್ಯಾಂಕ್ ಸರ್ಕಲ್(ಪಶ್ಚಿಮ ಭಾಗ); ಸಾಮಾನ್ಯ ಕ್ಷೇತ್ರದಿಂದ ಈವರೆಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ಉಳಿದಂತೆ ಮಿಕ್ಕ ವಾರ್ಡ್‌ಗಳಿಂದ ಈವರೆಗೆ ಬಿಜೆಪಿಯಿಂದ 18, ಜೆಡಿಎಸ್‌ನಿಂದ 4 ಹಾಗೂ ಪಕ್ಷೇತರರಾಗಿ 13 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಡಿ. 9 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿದ್ದು, ಸೋಮವಾರ ಚುನಾವಣಾಧಿಕಾರಿಗಳ ಕಚೇರಿಯ ಮುಂದೆ ವಿವಿಧ ಪಕ್ಷಗಳ ಕಾರ್ಯಕರ್ತರು ಬೆಂಬಲಿಗರ ದಂಡೇ ನೆರೆದಿತ್ತು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಇಂದು ಎಲ್ಲಾ 19 ಸ್ಥಾನಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳು ಒಟ್ಟಾಗಿ ನಾಮಪತ್ರ ಸಲ್ಲಿಸಲಿದ್ದಾರೆ.
ಡಿ.10 ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಡಿಸೆಂಬರ್ 12 ರಂದು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ.
ದೊಡ್ಡಬಳ್ಳಾಪುರ ನಗರಸಭೆ ಉಪಚುನಾವಣೆ ಮೂವರು ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
ದೊಡ್ಡಬಳ್ಳಾಪುರ ನಗರಸಭೆಯ 21 ನೇ ವಾರ್ಡ್ ನ ಹೇಮಾವತಿಪೇಟೆ ವಾರ್ಡ್ನ ಚುನಾವಣೆಗೆ ಈವರೆಗೆ ಮೂವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಸೋಮವಾರ ಕಾಂಗ್ರೆಸ್ ನಿಂದ ಕೆ.ಜಿ.ದಿನೇಶ ಹಾಗೂ ಪಕ್ಷೇತರರಾಗಿ ಹೇಮಂತ್ ಕುಮಾರ್.ಜಿ.ಆರ್. ನಾಮಪತ್ರ ಸಲ್ಲಿಸಿದರು.
ಮೆರವಣಿಗೆಯೊಂದಿಗೆ ತೆರಳಿ ನಾಮಪತ್ರ
ಕಾಂಗ್ರೆಸ್ ಅಭ್ಯರ್ಥಿ ಕೆ.ಜಿ.ದಿನೇಶ ಅವರು, ನಗರದ ಹೇಮಾವತಿಪೇಟೆಯ ನಾಗರಕಲ್ಲು ದೇವಾಲಯದ ಬಳಿಯಿಂದ ನಗರಸಭೆ ಚುನಾವಣಾ ಕಚೇರಿಯವರೆಗೆ, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಹಿತೈಷಿಗಳೊಂದಿಗೆ ಮೆರವಣಿಗೆ ಮೂಲಕ ತೆರಳಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
ಈ ವೇಳೆ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಕೆ.ಪಿ.ಜಗನ್ನಾಥ್, ಕೆಪಿಸಿಸಿ ಸದಸ್ಯ ಬಿ.ಜಿ.ಹೇಮಂತರಾಜು, ನಗರಸಭಾ ಸದಸ್ಯ ಹೆಚ್.ಎಸ್.ಶಿವಶಂಕರ್, ಮುಖಂಡರಾದ ಆಂಜಿನ ಮೂರ್ತಿ, ಮುನಿರಾಜು ಮೊದಲಾದವರು ಹಾಜರಿದ್ದರು.