
ಬೆಂಗಳೂರು: ಮೊಟ್ಟೆಯಲ್ಲಿ (Egg) ಕ್ಯಾನ್ಸರ್ ಕಾರಕ ಅಂಶಗಳಿವೆ ಎಂಬ ಆಧಾರರಹಿತ ವದಂತಿಗಳು ರಾಜ್ಯಾದ್ಯಂತ ಹರಡಿರುವ ಹಿನ್ನೆಲೆಯಲ್ಲಿ, ಜನರ ಆತಂಕವನ್ನು ನಿವಾರಿಸಲು ರಾಜ್ಯದಲ್ಲಿ ಲಭ್ಯವಿರುವ ಎಲ್ಲಾ ಬ್ಯಾಂಡ್‌ಗಳ ಮೊಟ್ಟೆಗಳನ್ನು ಪರೀಕ್ಷಿಸಲು ಆರೋಗ್ಯ ಇಲಾಖೆ ಮುಂದಾಗಿದೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಜನರು ಆತಂಕಪಡುವ ಅಗತ್ಯವಿಲ್ಲ. ಮೊಟ್ಟೆಗಳ ಸುರಕ್ಷತೆ ಬಗ್ಗೆ ಹರಡಿರುವ ವದಂತಿಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ರಾಜ್ಯದ ಎಲ್ಲ ಬ್ರಾಂಡ್‌ಗಳ ಮೊಟ್ಟೆಗಳ ಸಮಗ್ರ ಪರೀಕ್ಷೆ ನಡೆಸುವಂತೆ ಸೂಚಿಸಿದ್ದೇನೆ. ವರದಿ ಬಂದ ನಂತರ ಸೂಕ್ತ ಮಾಹಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಮೊಟ್ಟೆ ಸೇವನೆಯಿಂದ ಕ್ಯಾನ್ಸರ್ ಉಂಟಾಗುತ್ತದೆ ಎಂಬ ಸುದ್ದಿ ಹರಿದಾಡುತ್ತಿದ್ದು, ಮೊಟ್ಟೆ ಪ್ರಿಯರು ಹಾಗೂ ಸಾರ್ವಜನಿಕರಲ್ಲಿ ಗೊಂದಲ ಮತ್ತು ಭಯದ ವಾತಾವರಣ ಸೃಷ್ಟಿಯಾಗಿತ್ತು.
ಈ ಹಿನ್ನೆಲೆಯಲ್ಲಿ ಜನರ ಆತಂಕವನ್ನು ದೂರ ಮಾಡಿ, ಆಹಾರ ಸುರಕ್ಷತೆಯ ಬಗ್ಗೆ ಸ್ಪಷ್ಟತೆ ನೀಡಲು ಆರೋಗ್ಯ ಇಲಾಖೆ ಈ ಕ್ರಮ ಕೈಗೊಂಡಿದೆ ಎಂದು ವರದಿಯಾಗಿದೆ.