
ಕೆ.ಎಂ. ಸಂತೋಷ್, ಆರೂಢಿ (ದೊಡ್ಡಬಳ್ಳಾಪುರ): ಬೆಂಬಲ ಬೆಲೆ ಯೋಜನೆಯಡಿ ರಾಗಿ (Ragi) ಖರೀದಿಗೆ ರೈತರ ನೋಂದಣಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಮುಕ್ತಾಯವಾಗಿದ್ದು, ರೈತರು ತೀವ್ರ ಆಕ್ರೊಶ ವ್ಯಕ್ತಪಡಿಸಿರುವ ಘಟನೆ ನಡೆಯಿತು.
ನೋಂದಣಿಗೆ ಸರ್ವ ಸಮಸ್ಯೆ, ವಿದ್ಯುತ್ ಕೈಕೊಟ್ಟಿದ್ದು ಸೇರಿದಂತೆ ಹಲವಾರು ಕಾರಣಗಳಿಂದ ನೋಂದಣಿ ಪ್ರಕ್ರಿಯೆ ವಿಳಂಬವಾಗಿದೆ. ಈಗ ನೋಡಿದರೆ ಏಕಾಏಕಿ ರಾಗಿ ನೋಂದಣಿ ವೆಬ್ಸೈಟ್ ಮಧ್ಯಾಹ್ನ ಸುಮಾರು 12 ಗಂಟೆಗೆ ಬಂದ್ ಆಗಿದೆ ಎಂದು ಅಸಮಧಾನ ವ್ಯಕ್ತಪಡಿಸಿರುವ ಟಿಎಪಿಎಂಸಿಎಸ್ ನಿರ್ದೇಶಕ ಕೆಂಪೇಗೌಡ, ಈ ಕೂಡಲೆ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶ ಮಾಡಿ ರಾಗಿ ನೋಂದಣಿ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.
ನೋಂದಣಿ ಕೇಂದ್ರದಲ್ಲಿ ರೈತರಿಗೆ ಸೂಕ್ತ ಮಾಹಿತಿಯನ್ನೂ ನೀಡಲು ಯಾರೊಬ್ಬ ಅಧಿಕಾರಿಗಳು ಇಲ್ಲ. ಬೆಳಗಿನಿಂದಲೇ ನೂರಾರು ಜನ ಸಾಲುಗಟ್ಟಿ ನಿಂತಿದ್ದರು ಸಹ ಮಧ್ಯಾಹ್ನ ನೋಂದಣಿ ಸ್ಥಗಿತವಾಗಿದೆ ಎಂದು ರಾಜ್ಯ ತೆಂಗು ನಾರು ಮಂಡಳಿ ಅಧ್ಯಕ್ಷ ವೆಂಕಟೇಶ್ ಬಾಬು ಅಸಮದಾನ ವ್ಯಕ್ತಪಡಿಸಿದ್ದಾರೆ.
17 ರಂದು ಪ್ರತಿಭಟನೆಗೆ ಕರೆ
ಮಳೆ ಕಾರಣದಿಂದಾಗಿ ರಾಗಿ ಕೊಯ್ಲಿನಲ್ಲಿ ರೈತರು ತೊಂಡಗಿಸಿಕೊಂಡಿದ್ದರಿಂದಾಗಿ ನೋಂದಣಿ ಮಾಡಿಸುವ ಪ್ರಕ್ರಿಯೆ ನಿಧಾನವಾಗಿದೆ. ಹಾಗಾಗಿ ರಾಗಿ ಖರೀದಿ ನೋಂದಣಿ ದಿನಾಂಕವನ್ನು ವಿಸ್ತರಿಸುವಂತೆ ಆಗ್ರಹಿಸಿ ಡಿ.17 ರಂದು ಪ್ರತಿಭಟನೆ ನಡೆಸುವುದಾಗಿ ರಾಜ್ಯ ರೈತ ಸಂಘದ ಮುಖಂಡರು ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ 21,892 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿತ್ತು. ಉತ್ತಮ ರಾಗಿ ಬೆಳೆಯಾಗಿದ್ದು ಇಲ್ಲಿಯವರೆಗೂ ಶೇ 75ರಷ್ಟು ಕೊಯ್ಲು ಮುಗಿದಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲ್ಲೂಕಿನಲ್ಲಿ ರಾಗಿ ಖರೀದಿ ನೋಂದಣಿ ಹಾಗೂ ಕ್ವಿಂಟಾಲ್ ಅಂಕಿ ಅಂಶ
ದೇವನಹಳ್ಳಿ; 3,678 ರೈತರ ನೋಂದಣಿ
ಕ್ವಿಂಟಾಲ್; 67,354.5.
ದೊಡ್ಡಬಳ್ಳಾಪುರ; 12,687 ರೈತರ ನೋಂದಣಿ ಕ್ವಿಂಟಾಲ್; 2,40,106.
ಹೊಸಕೋಟೆ;1,240 ರೈತರ ನೋಂದಣಿ
ಕ್ವಿಂಟಾಲ್; 23,693.5.
ನೆಲಮಂಗಲ; 5,619 ರೈತರ ನೋಂದಣಿ
ಕ್ವಿಂಟಾಲ್; 1,10,545.