
ಬೆಂಗಳೂರು: ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ಮಸೂದೆಯಿಂದಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ ಮರೆಯಾಗಿ, ಪೊಲೀಸರು ಹಿಟ್ಲರ್‌ನಂತೆ ವರ್ತಿಸತೊಡಗುತ್ತಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ (R. Ashoka) ಹೇಳಿದರು.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಮುಂದೆ ಇದ್ದಾಗಲೇ ಮಾಸ್ಟರ್ ಹಿರಣ್ಣಯ್ಯ ಅವರು ಭ್ರಷ್ಟಾಚಾರದ ವಿರುದ್ಧ ಲಂಚಾವತಾರ ನಾಟಕ ಪ್ರದರ್ಶನ ಮಾಡುತ್ತಿದ್ದರು. ಆಗ ಆ ಮಟ್ಟಿಗೆ ಪ್ರಜಾಪ್ರಭುತ್ವ ಇತ್ತು. ಕಾಂಗ್ರೆಸ್ ಸರ್ಕಾರ ತಂದ ಹೊಸ ಮಸೂದೆಯಿಂದ ಪೊಲೀಸರು ಹಿಟ್ಲರ್ ಆಗುತ್ತಾರೆ. ಇದರಿಂದಾಗಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ. ವ್ಯಂಗ್ಯಚಿತ್ರಕಾರರು ಕೂಡ ಚಿತ್ರ ಬಳಸುವಂತಿಲ್ಲ. ಮಾಧ್ಯಮಗಳು ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಸುದ್ದಿ ಮಾಡಿದರೆ ಪತ್ರಕರ್ತರಿಗೆ ಜಾಮೀನು ಸಿಗುವುದಿಲ್ಲ. ಪೊಲೀಸ್ ಇಲಾಖೆ ಸ್ವೇಚ್ಛಾಚಾರದಿಂದ ವರ್ತನೆ ಮಾಡಲು ಇದು ಅವಕಾಶ ಮಾಡಿಕೊಡುತ್ತದೆ. ತುರ್ತು ಪರಿಸ್ಥಿತಿ ತಂದವರಿಂದ ಹೆಚ್ಚೇನು ಅಪೇಕ್ಷಿಸಲು ಸಾಧ್ಯವಿಲ್ಲ ಎಂದರು.
ರಾಜಕೀಯ ದ್ವೇಷ ತೀರಿಸಿಕೊಳ್ಳಲು ಕಾಂಗ್ರೆಸ್ ಈ ಮಸೂದೆ ತರುತ್ತಿದೆ. ಲೋಕಸಭೆಯಲ್ಲಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಕಾಂಗ್ರೆಸ್ ಇಲ್ಲಿ ಸ್ವಾತಂತ್ರ್ಯ ಹತ್ತಿಕ್ಕಲಿದೆ. ಪತ್ರಿಕಾ ಸ್ವಾತಂತ್ರ್ಯ ನಾಶವಾಗಿದೆ. ಇದು ಮತಬ್ಯಾಂಕ್ ರಾಜಕಾರಣಕ್ಕೆ ಬಳಕೆಯಾಗಲಿದೆ. ಯಾರನ್ನು ಬೇಕಾದರೂ ಜೈಲಿಗೆ ಹಾಕಬಹುದು ಅಥವಾ ಡಿಜಿಟಲ್ ಮಾಧ್ಯಮದಲ್ಲಿ ಬರುವ ವಿಷಯಗಳನ್ನು ಕೂಡಲೇ ಬ್ಲಾಕ್ ಮಾಡಬಹುದು. ಕಾನೂನು ಗಾಳಿಗೆ ತೂರಿರುವುದು ಮಸೂದೆಯಲ್ಲಿ ಕಂಡುಬಂದಿದೆ. ದ್ವೇಷಾಪರಾಧ, ಅಸಾಮರಸ್ಯ ಎಂಬಂತಹ ಪದಗಳನ್ನು ಬಳಸಿದ್ದು, ಇಂತಹ ಪದಗಳಿಗೆ ಏನು ಅರ್ಥ ಎಂದು ಗೊತ್ತಿಲ್ಲ. ಒಬ್ಬ ವ್ಯಕ್ತಿ ಕಾಂಗ್ರೆಸ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಕ್ಕೆ ಆರೇಳು ದಿನ ಜೈಲಿನಲ್ಲಿ ಇರಬೇಕಾಯಿತು. ಈಗ ಇರುವ ಕಾನೂನಲ್ಲೇ ಇಂತಹ ಅವಕಾಶವಿದೆ. ಹೊಸ ಕಾನೂನು ಬಂದರೆ ಎಲ್ಲರೂ ಬಂಧನಕ್ಕೊಳಗಾಗುತ್ತಾರೆ. ರಂಗಕರ್ಮಿಗಳು ಸರ್ಕಾರದ ವಿರುದ್ಧ ಮಾತಾಡಿದರೆ ಜೈಲಿಗೆ ಹೋಗಬೇಕಾಗುತ್ತದೆ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಸೂದೆಯನ್ನು ಸದನ ಸಮಿತಿಗೆ ನೀಡಿ ಚರ್ಚೆ ಮಾಡಬೇಕಿದೆ. ತುರ್ತು ಪರಿಸ್ಥಿತಿ ತಂದ ಕಾಂಗ್ರೆಸ್ ಇಂತಹ ಮಸೂದೆ ತಂದಿದೆ. ಆ ಸಂಸ್ಕೃತಿ ಇನ್ನೂ ಅವರಲ್ಲಿದೆ. ಇದರಿಂದ ಪತ್ರಿಕಾ ರಂಗ, ರಾಜಕೀಯ ವಿಶ್ಲೇಷಕರಿಗೆ ಜಾಮೀನು ನೀಡದೆ ಜೈಲಿಗಟ್ಟುತ್ತಾರೆ. ಬಿಜೆಪಿ, ಜೆಡಿಎಸ್ ನಾಯಕರನ್ನು ಬಗ್ಗುಬಡಿಯಲು ಇಂತಹ ಕಾನೂನು ತರುತ್ತಿದ್ದಾರೆ.
ಸದನದಲ್ಲಿ ಇದರ ಬಗ್ಗೆ ಚರ್ಚೆ ಮಾಡಲು ಸ್ಪೀಕರ್ ಯು.ಟಿ.ಖಾದರ್ ಅವಕಾಶ ನೀಡಿಲ್ಲ. ಇದರ ವಿರುದ್ಧ ಹೋರಾಟ ಮಾಡುತ್ತೇವೆ. ಕರಾವಳಿ ಜನರಿಗೆ ಸಚಿವ ಭೈರತಿ ಸುರೇಶ್ ಅಪಮಾನ ಮಾಡಿದ್ದಾರೆ ಎಂದರು. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)