
ಬೆಂಗಳೂರು: ಬೆಳಗಾವಿ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರ ಉತ್ತರ ಕರ್ನಾಟಕಕ್ಕೆ ಏನೂ ಕೊಟ್ಟಿಲ್ಲ. ಕೇವಲ ಸುಳ್ಳುಗಳನ್ನೇ ಹೇಳಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ (R. Ashoka) ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಯಾಗುತ್ತದೆ. ಈ ಬಾರಿ ಬಿಜೆಪಿಯಿಂದ ಈ ಬಗ್ಗೆ ಒತ್ತು ನೀಡಲಾಗಿತ್ತು. ಒಟ್ಟು 21 ಗಂಟೆಗಳ ಕಾಲ ಚರ್ಚೆಯಾದರೂ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗಿದೆ.
ಹದಿನಾರು ಬಾರಿ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎನ್ನುತ್ತಾರೆ ಎಂದರೆ ಅದು ಅವರದ್ದೇ ವಿಫಲತೆ.
ಲೋಕೋಪಯೋಗಿ, ನೀರಾವರಿ ಸಚಿವರು ಇದ್ದರೂ ಉತ್ತರ ಕರ್ನಾಟಕದ ರಸ್ತೆಗಳಲ್ಲಿ ಗುಂಡಿಗಳಿವೆ. ಪ್ರತಿ ವರ್ಷ 10,000 ಕೋಟಿ ರೂ. ನೀಡಲಾಗುವುದು ಎಂದು ಹೇಳಿ, ನಂತರ ಇಡೀ ರಾಜ್ಯಕ್ಕೆ ಎಂದು ಸುಳ್ಳು ಹೇಳುತ್ತಾರೆ ಎಂದರು.
ನೀರಾವರಿ ಯೋಜನೆಗಳ ಬಗ್ಗೆ ಮೊದಲು ಭರವಸೆಗಳನ್ನು ನೀಡಿ, ನಂತರ ಕೋರ್ಟ್‌ನಲ್ಲಿ ತಡೆಯಾಜ್ಞೆ ಇದೆ ಎನ್ನುತ್ತಾರೆ. ಗೋವಿಂದರಾವ್ ಆಯೋಗದ ವರದಿ ಇನ್ನೂ ಪೂರ್ಣಗೊಂಡಿಲ್ಲ. ಸಿಎಂ ಸಿದ್ದರಾಮಯ್ಯ ಅಪ್ಪಟ ಸುಳ್ಳುಗಾರನಾಗಿ ಸುಳ್ಳುಗಳನ್ನು ಹೇಳಿದ್ದಾರೆ.
ಮುಖ್ಯಮಂತ್ರಿ ಹೊಸದೇನೋ ಘೋಷಣೆ ಮಾಡುತ್ತಾರೆ ಎಂದು ಜನರು ಅಂದುಕೊಂಡಿದ್ದರು. ಆದರೆ ಅಲ್ಲಿ ವಿದ್ಯುತ್ ಇಲ್ಲದಂತೆ ಮಾಡಿ ಇಡೀ ಉತ್ತರ ಕರ್ನಾಟಕದ ಬೆಳಕು ಕಸಿದುಕೊಂಡಿದ್ದಾರೆ. ಕೇವಲ ಕೇಂದ್ರ ಸರ್ಕಾರದ ಮೇಲೆ ಆರೋಪಗಳನ್ನು ಮಾತ್ರ ಮಾಡಿದ್ದಾರೆ.
ಕೇಂದ್ರದ ರೈಲ್ವೆ ಯೋಜನೆಗೆ ಭೂಮಿ ನೀಡಿಲ್ಲ, ಕಸ ನಿರ್ವಹಣೆ ಯೋಜನೆಗೆ ತಮ್ಮ ಪಾಲನ್ನೇ ನೀಡಿಲ್ಲ. ಎಲ್ಲಮ್ಮ ದೇವಾಲಯ ಯೋಜನೆಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಅನುದಾನ ನೀಡಿದ್ದರೂ ಆರಂಭ ಮಾಡಿಲ್ಲ. ಬೆಳಗಾವಿಯ ಕೆರೆಗಳಿಗೆ ಸುಮಾರು 50 ಕೋಟಿ ರೂ. ನೀಡಿದ್ದರೂ ಅದನ್ನು ಬಳಸಿಲ್ಲ.
ಜಲಜೀವನ್ ಮಿಷನ್ ಯೋಜನೆಯ ಹಣ ಬಿಡುಗಡೆ ಬಗ್ಗೆ ಕಾಂಗ್ರೆಸ್ ಸಂಸದರು ಲೋಕಸಭೆಯಲ್ಲಿ ಪ್ರಶ್ನೆ ಕೇಳಿದ್ದು, ಬಿಲ್ ಸಲ್ಲಿಸಿ ಎಂಬ ಉತ್ತರ ಬಂದಿದೆ. ಸಿಸಿ ಪಾಟೀಲ್ ಸಮಿತಿಗೆ ಅಧಿಕಾರಿಗಳು ಉತ್ತರ ನೀಡಿದ್ದು, ಬಿಲ್ ಸಲ್ಲಿಸಲು ಆಗಿಲ್ಲ ಎಂದಿದ್ದಾರೆ ಎಂದರು.
ಇಷ್ಟೆಲ್ಲ ಆದಮೇಲೂ ಅಭಿವೃದ್ಧಿ ಮಾಡಿದ್ದೇವೆ ಎಂದು ಕಾಂಗ್ರೆಸ್ ನಾಯಕರು ಹೇಳಿಕೊಳ್ಳುತ್ತಾರೆ. ಗೃಹಲಕ್ಷ್ಮಿ ಹಣದ ಬಗ್ಗೆ ನಮ್ಮ ಶಾಸಕರು ಪ್ರಶ್ನೆ ಕೇಳಿದರೆ ಅದಕ್ಕೆ ಉತ್ತರ ನೀಡಿಲ್ಲ. 5,000 ಕೋಟಿ ರೂ. ಎಲ್ಲಿಗೆ ಹೋಗಿದೆ ಎಂದು ಕೇಳಿದರೆ, ಆ ಬಗ್ಗೆ ಉತ್ತರ ಕೊಟ್ಟಿಲ್ಲ.
ಇದು ಸಾಲಗಾರರ ಸರ್ಕಾರವಾಗಿದ್ದು, ಭ್ರಷ್ಟಾಚಾರ ಮಾಡಿ ಲೂಟಿ ಮಾಡಿಕೊಂಡು ಹೋಗುತ್ತಿದೆ. ಈ ಸರ್ಕಾರದಿಂದ ಉತ್ತರ ಕರ್ನಾಟಕಕ್ಕೆ ಇನ್ನಷ್ಟು ಕೆಟ್ಟದೇ ಆಗಿದೆ. ಶಾಸಕರು ಡಿನ್ನರ್ ಪಾರ್ಟಿ ಮಾಡಿಕೊಂಡು ಕಾಲ ಕಳೆಯುತ್ತಿದ್ದಾರೆ.
ಒಡಕು ಇಲ್ಲವೆಂದರೆ ಮುಖ್ಯಮಂತ್ರಿ ಸದನದಲ್ಲಿ ಭಾಷಣ ಮಾಡುವಾಗ ಎಲ್ಲರೂ ಇರಬೇಕಿತ್ತು. ಆದರೆ ಕೇವಲ 6 ಸಚಿವರಿದ್ದರು. ಶೇ.50 ರಷ್ಟು ಶಾಸಕರು ಇರಲೇ ಇಲ್ಲ. ಇಲ್ಲಿ ಮುಖ್ಯಮಂತ್ರಿಗೆ ಗ್ಯಾರಂಟಿ ಇಲ್ಲ. ಈ ಸರ್ಕಾರ ಉತ್ತರ ಕರ್ನಾಟಕಕ್ಕೆ ಚೊಂಬು ನೀಡಿದೆ ಎಂದು ದೂರಿದರು.