
ಕೆ.ಎಂ.ಸಂತೋಷ್, ಆರೂಢಿ (ದೊಡ್ಡಬಳ್ಳಾಪುರ); ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ (Bashettihalli town panchayat election) ಹಾಗೂ ದೊಡ್ಡಬಳ್ಳಾಪುರ ನಗರಸಭೆಯ 21ನೇ ವಾರ್ಡ್ ನ ಹೇಮಾವತಿಪೇಟೆ ಉಪ ಚುನಾವಣೆ ಡಿ.21ರಂದು ನಡೆಯಲಿದ್ದು, ಚುನಾವಣಾ ಆಯೋಗ, ತಾಲೂಕು ಆಡಳಿತ, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಹಾಗೂ ನಗರಸಭೆ ವತಿಯಿಂದ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ.
ದೊಡ್ಡಬಳ್ಳಾಪುರ ನಗರದ ಕೊಂಗಾಡಿಯಪ್ಪ ಪ್ರೌಢಶಾಲೆಯ ಮಸ್ಟರಿಂಗ್, ಡಿ.ಮಸ್ಟರಿಂಗ್ ಮತ್ತು ಎಣಿಕಾ ಕೇಂದ್ರದಲ್ಲಿ ವಿದ್ಯುನ್ಮಾನ ಮತಯಂತ್ರಗಳು, ಸೇರಿದಂತೆ ಅಗತ್ಯ ಸಲಕರಣೆಗಳನ್ನು ಪಡೆದು ಚುನಾವಣಾ ಸಿಬ್ಬಂದಿ ಹಾಗೂ ರಕ್ಷಣಾ ಸಿಬ್ಬಂದಿ ಮತಗಟ್ಟೆಗಳಿಗೆ ತೆರಳಿದ್ದಾರೆ.
ಮಸ್ಟರಿಂಗ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎ.ಬಿ.ಬಸವರಾಜು ಭೇಟಿ ನೀಡಿ ಸಿದ್ದತೆಗಳನ್ನು ಪರಿಶೀಲನೆ ನಡೆಸಿದರು.
ಮತಗಟ್ಟೆಗೆ ತೆರಳುವ ಚುನಾವಣಾ ಸಿಬ್ಬಂದಿಗೆ ಚುನಾವಣೆಯ ಸಿದ್ದತೆಗಳ ಕುರಿತು ಪರಿಶೀಲಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು.
ಎಲ್ಲಾ ಕೇಂದ್ರಗಳಿಗೆ ಚುನಾವಣಾ ಅಧಿಕಾರಿಗಳು ತೆರಳಿ ಮತದಾನಕ್ಕೆ ಸಕಲ ಸಿದ್ದತೆಗಳನ್ನು ಮಾಡಿಕೊಂಡು, ಡಿಸೆಂಬರ್ 21 ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಲಿದ್ದು, ಸಂಜೆ 5 ಗಂಟೆಗೆ ಮುಕ್ತಾಯವಾಗಲಿದೆ. ಮರು ಮತದಾನ ಇದ್ದಲ್ಲಿ ಡಿಸೆಂಬರ್ 23 ಮಂಗಳವಾರ ರಂದು ನಡೆಯಲಿದೆ. ಮತ ಎಣಿಕೆಯು ಡಿಸೆಂಬರ್ 24ರಂದು ಬೆಳಿಗ್ಗೆ 8 ಗಂಟೆಯಿಂದ ನಗರದ ಕೊಂಗಾಡಿಯಪ್ಪ ಪ್ರೌಢಶಾಲೆಯಲ್ಲಿ ನಡೆಯಲಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದರು.
ಮತದಾರರು
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯ 19 ಮತಗಟ್ಟೆಗಳಲ್ಲಿ 6,651 ಪುರುಷರು, 6,346 ಮಹಿಳೆಯರು ಸೇರಿ ಒಟ್ಟು 12,997 ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.
21ನೇ ವಾರ್ಡ್ ನ ಹೇಮಾವತಿಪೇಟೆ ಉಪ ಚುನಾವಣೆಯ 2 ಮತಗಟ್ಟೆಗಳಲ್ಲಿ 1,152 ಪುರುಷರು, 1,153 ಮಹಿಳೆಯರು ಸೇರಿ ಒಟ್ಟು 2,305 ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.
ಮತಗಟ್ಟೆ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ಚುನಾವಣೆ ಶಾಂತಿಯುತವಾಗಿ ನಡೆಯಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಚುನಾವಣೆ ವೇಳೆ ಯಾವುದೇ ಗುಂಪು ಗಲಭೆಗಳಾಗದಂತೆ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆಗೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಕ್ಷೇತ್ರದಲ್ಲಿ ಒಟ್ಟು 7 ಮಿನಿಬಸ್ ಮಾರ್ಗಗಳನ್ನು ಗುರುತಿಸಲಾಗಿದೆ. ಜೀಪ್ಗಳನ್ನು ಸಹ ಬಳಸಿಕೊಳ್ಳಲಾಗುತ್ತಿದೆ.
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಮತಗಟ್ಟೆ ಅಧ್ಯಕ್ಷಾಧಿಕಾರಿ, ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿ, ಬೂತ್ಗೆ ಇಬ್ಬರು ಮತಗಟ್ಟೆ ಅಧಿಕಾರಿಗಳು ಸೇರಿದಂತೆ ತಲಾ 22 ಮಂದಿ ಕಾರ್ಯ ನಿರ್ವಹಿಸಲಿದ್ದಾರೆ.
ಅಂತೆಯೇ ನಗರಸಭೆಯ 21 ನೇ ವಾರ್ಡ್ ನ ಹೇಮಾವತಿಪೇಟೆ ಉಪ ಚುನಾವಣೆಯಲ್ಲಿ ತಲಾ ಇಬ್ಬರು ಕಾರ್ಯ ನಿರ್ವಹಿಸಲಿದ್ದಾರೆ.
ಪೊಲೀಸ್ ಬಂದೋಬಸ್ತ್
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಗೆ 19 ಮತಗಟ್ಟೆಗಳಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಡಿವೈಎಸ್ಪಿ ಪಾಂಡುರಂಗ ಅವರ ನೇತೃತ್ವದಲ್ಲಿ ಒಬ್ಬರು ಇನ್ಸ್ಪೆಕ್ಟರ್, ಮೂವರು ಸಬ್ಇನ್ಸ್ಪೆಕ್ಟರ್ಗಳು, ಮೂರು ಕ್ಲಸ್ಟರ್ ಬೂತ್ಗಳಿಗೆ ತಲಾ ಒಬ್ಬರು ಸಹಾಯಕ ಸಬ್ಇನ್ಸ್ಪೆಕ್ಟರ್ಗಳು, 40 ಮಂದಿ ಪೊಲೀಸ್ ಸಿಬ್ಬಂದಿ, ಎರಡು ಗಸ್ತು ವಾಹನಗಳು, 8 ಪ್ರಮುಖ ಸ್ಥಳಗಳಲ್ಲಿ ಗಸ್ತುಗಳನ್ನು ಮಾಡಲಾಗಿದೆ.