ಕೆ.ಎಂ.ಸಂತೋಷ್, ಆರೂಢಿ (ದೊಡ್ಡಬಳ್ಳಾಪುರ): ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಗೆ ಸಾರ್ವತ್ರಿಕ ಚುನಾವಣೆ (Bashettihalli election) ಹಾಗೂ ದೊಡ್ಡಬಳ್ಳಾಪುರ ನಗರಸಭೆಯ ವಾರ್ಡ್ ನಂಬರ್ 21ರ ಹೇಮಾವತಿ ಪೇಟೆಗೆ ಉಪಚುನಾವಣೆ ಸಂಬಂಧ ಡಿಸೆಂಬರ್ 24 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ (Bashettihalli town panchayat election) ರಚನೆಯಾದ ನಂತರ ಇದೇ ಪ್ರಥಮ ಬಾರಿಗೆ ನಡೆದ ಮತದಾನದಲ್ಲಿ, ಸಣ್ಣ ಪುಟ್ಟ ಮಾತಿನ ಚಕಮಕಿಗಳ ಹೊರತುಪಡಿಸಿ ಚುನಾವಣೆ ಶಾಂತಿಯುತವಾಗಿ ಮುಕ್ತಾಯವಾಗಿದ್ದು, ಶೇ.81.34 ರಷ್ಟು ಮತದಾನ ನಡೆದಿದೆ.
ಕೈಗಾರಿಕಾ ಪ್ರದೇಶವನ್ನು ಹೊಂದಿರುವ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ವಾರ್ಡ್ಗಳಲ್ಲೂ ಸ್ಥಳಿಯರಷ್ಟೇ ರಾಜ್ಯದ ವಿವಿಧ ಜಿಲ್ಲೆಗಳ ಹಾಗೂ ಹೊರ ರಾಜ್ಯದವರು ಇಲ್ಲಿಗೆ ಬಂದು ನೆಲೆಸಿರುವ ಮತದಾರರ ಸಂಖ್ಯೆಯೂ ಸರಿಸಮನಾಗಿಯೇ ಇದೆ.
4 ವರ್ಷಗಳ ಬಳಿಕ ಚುನಾವಣೆ
ಗ್ರಾಮ ಪಂಚಾಯಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿದ ನಾಲ್ಕು ವರ್ಷಗಳ ನಂತರ ಚುನಾವಣೆ ನಡೆದಿದ್ದರಿಂದ ಎಲ್ಲಾ ವಯೋಮಾನದ ಮತದಾರರು ಉತ್ಸಾಹದಿಂದಲೇ ಮತಗಟ್ಟೆಗಳ ಕಡೆಗೆ ಬಂದು ಮತಚಲಾಯಿಸಿದ್ದಾರೆ.
ಬೆಳಗ್ಗೆ 11 ರೊಳಗೆ ಫಲಿತಾಂಶ ಸಾಧ್ಯತೆ
ನಾಳೆ (ಡಿ.24) ಬೆಳಗ್ಗೆ 8 ಗಂಟೆಗೆ ಆರಂಭವಾಗಲಿರುವ ಮತ ಎಣಿಕೆ, ಮೊದಲ ಸುತ್ತಿನಲ್ಲಿ ಒಂದು ವಾರ್ಡ್ಗೆ ಮತ ಎಣಿಕೆಗೆ 15 ನಿಮಿಷಗಳ ಕಾಲ ಪಡೆಯಲಿದ್ದು, ಎರಡನೇ ಸುತ್ತಿನ ಬಳಿಕ ತೀವ್ರಗತಿಯಲ್ಲಿ ನಡೆದು ಸುಮಾರು 10
30 ಅಥವಾ 11 ರ ಒಳಾಗಾಗಿ ಫಲಿತಾಂಶ ಪ್ರಕಟವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಮತ ಎಣಿಕೆ ಮುಂಜಾಗ್ರತೆ
ಮತ ಎಣಿಕೆ ಕಾರ್ಯವು ಸುಗಮವಾಗಿ, ಶಾಂತಿಯುತವಾಗಿ ನಡೆಯುವ ಸದುದ್ದೇಶದಿಂದ ಮತ್ತು ಮತದಾನದ ಪಾವಿತ್ರ್ಯತೆ ಕಾಪಾಡುವ ಹಿತದೃಷ್ಟಿಯಿಂದ ಮತ ಎಣಿಕೆ ಕೇಂದ್ರವಾದ ದೊಡ್ಡಬಳ್ಳಾಪುರ ನಗರದ ಇಸ್ಲಾಂಪುರ ಮುಖ್ಯ ರಸ್ತೆಯಲ್ಲಿರುವ ಶ್ರೀ ಕೊಂಗಾಡಿಯಪ್ಪ ಪ್ರೌಢಶಾಲೆ ವ್ಯಾಪ್ತಿಯಲ್ಲಿ ಇಂದು ಸಂಜೆ 05.00 ಗಂಟೆಯಿಂದ ಡಿ.24 ರ ರಾತ್ರಿ 12 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ನಿಷೇಧಾಜ್ಞೆ ಅವಧಿಯಲ್ಲಿ ಮತ ಎಣಿಕೆ ಕೇಂದ್ರವಾದ ದೊಡ್ಡಬಳ್ಳಾಪುರದ ಇಸ್ಲಾಂಪುರ ಮುಖ್ಯ ರಸ್ತೆಯಲ್ಲಿ ಇರುವ ಶ್ರೀ ಕೊಂಗಾಡಿಯಪ್ಪ ಪ್ರೌಢಶಾಲೆ ವ್ಯಾಪ್ತಿಯಲ್ಲಿ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ ಅಥವಾ ಸಭೆ ಸಮಾರಂಭಗಳನ್ನು ಜರುಗಿಸುವುದನ್ನು ನಿಷೇಧಿಸಿದೆ.
ಮತ ಎಣಿಕೆ ಕೇಂದ್ರ ವ್ಯಾಪ್ತಿಯಲ್ಲಿ ಡಿಸೆಂಬರ್ 23 ರಂದು ಸಂತೆ, ಜಾತ್ರೆಗಳನ್ನು ನಿಷೇಧಿಸಿದೆ. ಅಪಾಯವನ್ನು ಉಂಟು ಮಾಡಬಹುದಾದ ಯಾವುದೇ ಮಾರಕಾಸ್ತ್ರಗಳನ್ನು ಹಾಗೂ ಸ್ಫೋಟಕ ವಸ್ತುಗಳನ್ನು ಕೊಂಡೊಯ್ಯುವುದನ್ನು ಪ್ರತಿಬಂಧಿಸಿದೆ.
ಈ ಅವಧಿಯಲ್ಲಿ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ. ಮತ ಎಣಿಕೆ ಕೇಂದ್ರದ ವ್ಯಾಪ್ತಿಯಲ್ಲಿ ಪೂರ್ವ ನಿಯೋಜಿತ ಮದುವೆ, ಧಾರ್ಮಿಕ ಕಾರ್ಯಕ್ರಮ, ಮೆರವಣಿಗೆಗಳನ್ನು ಮತ್ತು ಶವ ಸಂಸ್ಕಾರಗಳನ್ನು ಚುನಾವಣಾ ನೀತಿ ಸಂಹಿತ ಉಲ್ಲಂಘನೆ ಆಗದಂತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರದಂತೆ ನಡೆಸುವುದು.
ಮತ ಎಣಿಕೆ ಕೇಂದ್ರ ವ್ಯಾಪ್ತಿಯಲ್ಲಿ ಎಣಿಕೆ ಕಾರ್ಯ ಆದ ನಂತರ ಪಟಾಕಿ ಹೊಡೆಯುವುದು ನಿಷೇಧಿಸಿದೆ ಮತ್ತು ಚುನಾವಣಾ ಅಭ್ಯರ್ಥಿಗಳ ವಿಜಯೋತ್ಸವವನ್ನು ಆಚರಿಸುವುದು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಬಸವರಾಜು ಆದೇಶಿಸಿದ್ದಾರೆ.