
ಕೆ.ಎಂ.ಸಂತೋಷ್, ಆರೂಢಿ (ದೊಡ್ಡಬಳ್ಳಾಪುರ); ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯಿಂದ, ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ಬಳಿಕ ನಡೆದ ಮೊದಲ ಚುನಾವಣೆಯಲ್ಲೇ (Bashettihalli election) ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ.
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ 19 ವಾರ್ಡ್ಗಳಲ್ಲಿ ಬಿಜೆಪಿ 14 ರಲ್ಲಿ ಜಯಗಳಿಸಿ ಅಧಿಕಾರ ಪಡೆದಿದೆ. ಕಾಂಗ್ರೆಸ್ ಮೂರು ಸ್ಥಾನ, ಜೆಡಿಎಸ್ ಹಾಗೂ ಸ್ವತಂತ್ರ ಅಭ್ಯರ್ಥಿ ಒಂದು ಕ್ಷೇತ್ರದಲ್ಲಿ ಜಯ ಸಾಧಿಸಿದ್ದಾರೆ.
ನಗರಸಭೆಯ 21ನೇ ವಾರ್ಡ್ಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನವೀನ್ ಕುಮಾರ್ ಜಯಗಳಿಸಿದ್ದಾರೆ.
ಡಿ.21 ರಂದು ನಡೆದಿದ್ದ ಪಟ್ಟಣ ಪಂಚಾಯಿತಿ ಚುನಾವಣೆಯ ಮತಗಳ ಎಣಿಕೆ ಬುಧವಾರ ಬೆಳಿಗ್ಗೆ 8 ಗಂಟೆಯಿಂದ ನಗರದ ಕೊಂಗಾಡಿಯಪ್ಪ ಪ್ರೌಢ ಶಾಲೆಯಲ್ಲಿ ನಡೆಯಿತು.
ಮತಗಳ ಎಣಿಕೆ ಕೇಂದ್ರದ ಬಳಿ ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸುವ ಮೂಲಕ ಪ್ರತಿ ವಾರ್ಡ್ನ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಪಕ್ಷದ ಬಾವುಟ ಬೀಸುವ ಮೂಲಕ ಜೈಕಾರ ಹಾಕಿ ಸಂಭ್ರಮಿಸಿದರು.
ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಇದುವರೆಗೂ ಜೆಡಿಎಸ್ ಭದ್ರಕೋಟೆಯಾಗಿತ್ತು. 15 ವರ್ಷಗಳ ಕಾಲ ಜೆಡಿಎಸ್ ಅಭ್ಯರ್ಥಿಗಳೆ ಅಧ್ಯಕ್ಷರಾಗಿ ಆಡಳಿತ ನಡೆಸಿದ್ದರು. ಆದರೆ ಕ್ಷೇತ್ರದಲ್ಲಿ ಬದಲಾದ ರಾಜಕೀಯ, ತಾಲ್ಲೂಕು ಮುಖಂಡರಲ್ಲಿ ಇಲ್ಲದ ಒಗ್ಗಟ್ಟು ಹಾಗೂ ಸಂಘಟನೆ ಕೋರತೆಯಿಂದಾಗಿ ಅತ್ಯಂತ ಹೀನಾಯ ಸ್ಥಿತಿಯಲ್ಲಿ ಕೇಲವ ಒಬ್ಬ ಅಭ್ಯರ್ಥಿ ಮಾತ್ರ ಜಯಗಳಿಸಲು ಸಾಧ್ಯವಾಗಿದೆ.
ಜಿದ್ದಾಜಿದ್ದಿನ ಹಾಗೂ ‘ಸಕಲ’ವ್ಯವಸ್ಥೆಗಳ ರಾಜಕೀಯ ಹೋರಾಟದ ನಡುವೆಯೂ ಒಬ್ಬ ಅಭ್ಯರ್ಥಿ ಸ್ವತಂತ್ರವಾಗಿ ಆಯ್ಕೆಯಾಗಿರುವುದು ಅಭ್ಯರ್ಥಿಯ ಸ್ವಂತ ವರ್ಚಸ್ಸು ಕಾರಣವಾಗಿದೆ.
ಕಾರ್ಯಕರ್ತರ ಸಂಭ್ರಮ
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯುವ ಮೂಲಕ ಅಧಿಕಾರದ ಗದ್ದುಗೆ ಪಡೆಯುವುದು ಖಚಿತವಾಗುತ್ತಿದ್ದಂತೆ ಶಾಸಕ ಹಾಗೂ ಬಿಜೆಪಿ ಯುವ ಮೋರ್ಚಾರ ರಾಜ್ಯ ಘಟಕದ ಅಧ್ಯಕ್ಷ ಧೀರಜ್ ಮುನಿರಾಜು ಮತ ಎಣೀಕೆ ಕೇಂದ್ರದ ಬಳಿ ಬಂದರು.
ಕಾರ್ಯಕರ್ತರು ಶಾಸಕರು ಹಾಗೂ ಅಭ್ಯರ್ಥಿಗಳನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸುವ ಮೂಲಕ ಮೆರವಣಿಗೆ ನಡೆಸಿದರು.
ಕೈ ಹಿಡಿಯಲಿಲ್ಲ ಗ್ಯಾರಂಟಿ ಯೋಜನೆಗಳು
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣ ಪ್ರಚಾರ ಸಭೆಗಳಲ್ಲಿ ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಅವರು ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳು ಅದರಲ್ಲೂ ಗೃಹಲಕ್ಷ್ಮೀ, ಉಚಿತ ವಿದ್ಯುತ್ ನೀಡುತ್ತಿರುವ ಬಗ್ಗೆಯೇ ಹೇಳುತ್ತಿದ್ದರು. ಆದರೆ ಜನತೆ ಗ್ಯಾರಂಟಿ ಮರೆತು, ಚುನಾವಣೆ ಹಿಂದಿನ ದಿನವೇ ಮುಖ್ಯ ಎಂಬಂತಿದ್ದ ಕಾರಣ ಮತಗಳಾಗಿ ಪರಿವರ್ತನೆಯಾಗುವಲ್ಲಿ ವಿಫಲವಾಗಿದ್ದು, ಕಾಂಗ್ರೆಸ್ ಮೂರು ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳುವಂತಾಗಿದೆ ಎಂಬ ಮಾತು ವ್ಯಾಪಕವಾಗಿದೆ.
ಯಶಸ್ಸು ಕಾಣದ ಭಿನ್ನಮತ
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ ಬಿಜೆಪಿ ಪಾಲಿಗೆ ಸಂಘಟನೆಗೆ ಹೊಸ ಉತ್ಸಾಹ ಮೂಡಿಸಿರುವುದು ಒಂದು ಕಡೆಯಾದರೆ, ಇಲ್ಲಿಂದ ಮುಂದೆ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ನಡೆಯಲಿರುವ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ನಂತರದ ವಿಧಾನಸಭೆ ಚುನಾವಣೆಗೂ ಭಿನ್ನಮತದ ಮುನ್ನುಡಿ ಬರೆದಿದೆ ಎನ್ನಲಾಗುತ್ತಿದೆ.
ಬಾಶೆಟ್ಟಿಹಳ್ಳಿ ಭಾಗದಲ್ಲಿ ತಮ್ಮ ಪ್ರಭಾವ ಹೊಂದಿರುವ ಬಿಜೆಪಿ ಮುಖಂಡ ಹಾಗೂ ಬಮೂಲ್ ನಿರ್ದೇಶಕ ಬಿ.ಸಿ.ಆನಂದಕುಮಾರ್ ಪಕ್ಷದ ಪರವಾಗಿ ಎಲ್ಲೂ ಶಾಸಕ ಧೀರಜ್ ಅವರೊಂದಿಗೆ ಪ್ರಚಾರದಲ್ಲಿ ಕಾಣಿಸಿಕೊಂಡಿಲ್ಲ.
ಬದಲಿಗೆ ತಮ್ಮ ಹತ್ತಿರದ ಸಂಬಂಧಿ ಎಳ್ಳುಪುರ ವಾರ್ಡ್ನಲ್ಲಿ ಅಂಬರೀಶ್ ಸೇರಿದಂತೆ ಮೂರು ವಾರ್ಡ್ಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ಕೆಲ ಫೇಸ್‌ಬುಕ್ ಮಾಧ್ಯಮಗಳಲ್ಲಿ ಪ್ರಚಾರವನ್ನು ನಡೆಸಿದರು ಎಂದು ವರದಿಯಾಗಿದೆ.
ಇದರಿಂದಾಗಿ ನಿರಾಯಸವಾಗಿ ಜಯಗಳಿಸುವ ಅವಕಾಶ ಇದ್ದ ಬಿಜೆಪಿ ಅಭ್ಯರ್ಥಿಗಳು ಹಾಗೂ ಮುಖಂಡರು ತೀವ್ರ ತರಹನಾದ ಕಸರತ್ತುಗಳನ್ನು ನಡೆಸುವಂತೆ ಹಾಗೂ ಅಭ್ಯರ್ಥಿಗಳಿಗೆ ಚುನಾವಣೆ ದುಬಾರಿಯಾಗುವಂತೆ ಮಾಡಿತ್ತು.
ಅಂತಿಮವಾಗಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗಳಿಸುವ ಮೂಲಕ ಅಧಿಕಾರದ ಚುಕ್ಕಣಿ ಹಿಡಿದಿದೆ. ಆದರೆ ಈ ಭಿನ್ನಮತ ಶಮನವಾಗುತ್ತದ ಕಾದು ನೋಡಬೇಕಿದೆ.
ಉಪ ಚುನಾವಣೆ ಶೀಘ್ರ
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನ ಎಸ್.ಟಿ ಅಭ್ಯರ್ಥಿಗೆ, ಉಪಾಧ್ಯಕ್ಷ ಸ್ಥಾನ ಬಿಸಿಎಂ ‘ಎ’ ಅಭ್ಯರ್ಥಿಗೆ ಮೀಸಲಾಗಿದೆ. ಹೀಗಾಗಿ ಎಸ್.ಟಿ ಅಭ್ಯರ್ಥಿ ಗೆದ್ದರೆ ಅಧ್ಯಕ್ಷ ಸ್ಥಾನ ಖಚಿತ ಎನ್ನುವ ಕಾರಣದಿಂದಾಗಿ ಎಸ್.ಟಿ.ಸಮುದಾಯದ ಮುಖಂಡ ಪ್ರೇಮ್ ಕುಮಾರ್ ವಾರ್ಡ್ ಸಂಖ್ಯೆ 2 ಹಾಗೂ 14 ಎರಡೂ ಕಡೆಯಲ್ಲೂ ಬಿಜೆಪಿ ವತಿಯಿಂದ ಸ್ಪರ್ಧಿಸಿದ್ದರು. ಈ ಎರಡೂ ವಾರ್ಡ್ಗಳಲ್ಲಿ ಜಯಗಳಿಸಿದ್ದಾರೆ.
ಒಟ್ಟಾರೆ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಫಲಿತಾಂಶ ಒಂದು ಉಪಚುನಾವಣೆ ಸೇರಿದಂತೆ ಮುಂಬರುವ ದಿನಗಳಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಹಲವು ರಾಜಕೀಯ ಬದಲಾವಣೆ ಕಾರಣವಾಗಲಿದೆ ಎಂಬ ಮಾತು ವ್ಯಾಪಕವಾಗಿದೆ.