
ದೊಡ್ಡಬಳ್ಳಾಪುರ; ಇತಿಹಾಸ ಪ್ರಸಿದ್ಧ ದೊಡ್ಡಬಳ್ಳಾಪುರದ ಶ್ರೀ ಘಾಟಿ ಸುಬ್ರಮಣ್ಯ (Ghati Subramanya) ಕ್ಷೇತ್ರದಲ್ಲಿ ಇಂದು ಬ್ರಹ್ಮರಥೋತ್ಸವ (Brahmarathotsava) ನಡೆಯಲಿದೆ.
ಪ್ರತಃ ಕಾಲ 02:00 ಗಂಟೆಗೆ ದೇವಾಲಯ ತೆರೆಯಲಾಗಿದ್ದು, 02:30 ಗಂಟೆಗೆ ಅಭಿಷೇಕ ಪ್ರಾರಂಭವಾಗಿ ಬೆಳಗೆ, 04:30 ಗಂಟೆಗೆ ಮಹಾ ಮಂಗಳಾರತಿ ನೆರಿಸಲಾಗಿದೆ.
ಬೆಳಗೆ, 05:00 ರಿಂದ 06:00 ಗಂಟೆಗಳ ವರೆಗೆ ಸ್ಥಳೀಯರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, 06:00 ಗಂಟೆಯಿಂದ ಭಕ್ತಾಧಿಗಳಿಗಾಗಿ ಧರ್ಮ ದರ್ಶನ ಮತ್ತು ರೂ. 50 ರ ವಿಶೇಷ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಇಂದು ಮಧ್ಯಾಹ್ನ 12.00 ರಿಂದ 12.15 ಗಂಟೆಯ ಶುಭ ಮೂಹರ್ತದಲ್ಲಿ ಬ್ರಹ್ಮರಥೋತ್ಸವ ನಡೆಯಲಿದೆ. ಕಳೆದ ವರ್ಷ 1.50 ಲಕ್ಷದವರೆಗೂ ಭಕ್ತಾದಿಗಳು ಭಾಗಿಯಾಗಿದ್ದರು.
ಈ ಬಾರಿ ಬ್ರಹ್ಮರಥೋತ್ಸವವು ರಜೆ ದಿನ ಬಂದಿರುವುದರಿಂದ ಸುಮಾರು ಎರಡು ಲಕ್ಷ ಭಕ್ತಾದಿಗಳು ಬರುವ ಸಾಧ್ಯತೆ ಇದೆ. ಟ್ರಾಫಿಕ್ ಸಮಸ್ಯೆ, ಜನಸಂದಣಿ ನಿಯಂತ್ರಿಸಲು ಹಲವು ಕ್ರಮ ಕೈಗೊಳ್ಳಲಾಗಿದೆ.
ಘಾಟಿ ಕ್ಷೇತ್ರಕ್ಕೆ ಆಗಮಿಸಲು ಪ್ರಮುಖವಾಗಿ ಎರಡು ರಸ್ತೆ ಸಂಪರ್ಕಗಳಿದ್ದು ಮಾಕಳಿ ಹಾಗೂ ಕಂಟನಕುಂಟೆ ರಸ್ತೆಗಳಲ್ಲಿ ಸ್ವಚ್ಚತೆ ಕಾರ್ಯ, ಫುಟ್ ಪಾತ್ ಒತ್ತುವರಿ ತೆರವು ಮಾಡಲಾಗಿದೆ. ಇಲ್ಲಿ ಮೂಲಸೌಕರ್ಯ ವ್ಯವಸ್ಥೆ ಮಾಡಲಾಗಿದೆ.
ದೇವಾಲಯ ಸುತ್ತಮುತ್ತಲಿನ ಫುಟ್ ಪಾತ್ ಮೇಲಿನ ಅಂಗಡಿಗಳನ್ನು ತೆರವುಮಾಡಲಾಗಿದ್ದು ಭಕ್ತರ ಸಂಚಾರಕ್ಕೆ ಯಾವುದೇ ಸಮಸ್ಯೆ ಆಗದಂತೆ ಕ್ರಮವಹಿಸಲಾಗಿದೆ.
ಭಕ್ತರಿಗೆ ಉಚಿತ ಬಸ್ ವ್ಯವಸ್ಥೆ
ರಥೋತ್ಸವಕ್ಕೆ ಬರುವ ಭಕ್ತಾದಿಗಳ ವಾಹನಗಳಿಗೆ ಕಂಟನಕುಂಟೆ ಮಾರ್ಗ ಹಾಗು ಮಾಕಳಿ ಮಾರ್ಗ ಬಳಿ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಯೇ ಭಕ್ತಾದಿಗಳು ತಮ್ಮ ವಾಹನಗಳನ್ನು ನಿಲ್ಲಿಸಬೇಕು.
ಪಾರ್ಕಿಂಗ್ ಸ್ಥಳದಿಂದ ದೇವಾಲಯದ ಬಳಿಗೆ ತೆರಳಲು ಜಿಲ್ಲಾಡಳಿತದಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದ್ದು ಭಕ್ತಾದಿಗಳು ಆ ಬಸ್ ಗಳ ಮೂಲಕವೇ ಬಂದು ದರ್ಶನ ಪಡೆದು ಮತ್ತೇ ಅದೇ ಬಸ್ ಗಳ ಮೂಲಕ ಮರಳಬಹುದು.
ದೇವಾಲಯದ ಬಳಿ ವಾಹನ ಸಂಚಾರ ದಟ್ಟಣೆ, ಸಂಚಾರಕ್ಕೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ.
2026ರ ಜನವರಿ 31 ರವರೆಗೆ ಶ್ರೀ ಕ್ಷೇತ್ರಕ್ಕೆ ಬರುವ ವಾಹನಗಳಿಗೆ ಸುಂಕ ವಿನಾಯಿತಿ ನೀಡಲಾಗಿದೆ. ಭಕ್ತರಿಗೆ ಸುಗಮ ದರ್ಶನ ವ್ಯವಸ್ಥೆಗಾಗಿ ಧರ್ಮ ದರ್ಶನ ಮತ್ತು 50 ರೂಪಾಯಿಯ ವಿಶೇಷ ದರ್ಶನ ವ್ಯವಸ್ಥೆ ಇರಲಿದೆ.
ಡಿಸೆಂಬರ್ 28 ರವರೆಗೆ ಕ್ಷೇತ್ರದಲ್ಲಿ ವಿಶೇಷ ದೀಪಾಲಂಕಾರ ಮಾಡಲಾಗಿದ್ದು, ಬ್ರಹ್ಮರಥೋತ್ಸವಕ್ಕೆ ಬರುವ ಭಕ್ತರಿಗೆ ಉತ್ತಮ ಅನುಭವ ನೀಡುವ ನಿಟ್ಟಿನಲ್ಲಿ ಅಗತ್ಯಸಿದ್ದತೆ ಮಾಡಿಕೊಳ್ಳಲಾಗಿದೆ.
ಪ್ರತಿ ವರ್ಷದಂತೆ ಬ್ರಹ್ಮರಥೋತ್ಸವದಲ್ಲಿ ಎರಡು ಲಕ್ಷದವರೆಗೂ ಸಾರ್ವಜನಿಕರು ಸೇರುವ ನಿರೀಕ್ಷೆ ಇದೆ. ಭಕ್ತರಿಗೆ ಪಾರ್ಕಿಂಗ್ ಸಮಸ್ಯೆ ಬಗೆ ಹರಿಸಲು ಕ್ರಮ ವಹಿಸಲಾಗಿದೆ.
ಕಾರು ಸೇರಿದಂತೆ ಇತರೆ ವಾಹನಗಳಿಗೆ 14 ಪಾರ್ಕಿಂಗ್ ಸ್ಥಳ, ದ್ವಿಚಕ್ರ ವಾಹನಗಳಿಗೆ 4 ಪಾರ್ಕಿಂಗ್ ಸ್ಥಳಗಳನ್ನು ಗುರುತಿಸಲಾಗಿದೆ. ಭದ್ರತೆಗಾಗಿ ಈ ವರ್ಷ 1000 ಮಂದಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ, ಅಗ್ನಿಶಾಮಕ ವಾಹನ ವ್ಯವಸ್ಥೆ ಮಾಡಲಾಗಿದೆ.
ಜತೆಗೆ 100 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು ಅದರ ವೀಕ್ಷಣೆಗೆ ಕಂಟ್ರೋಲ್ ರೂಂ ಕೂಡ ಸ್ಥಾಪಿಸಲಾಗಿದೆ.