
ತಿರುಮಲ: ಕ್ರಿಸ್ಮಸ್ ರಜೆ, ವಾರಾಂತ್ಯದ ರಜೆಗಳ ಹಿನ್ನೆಲೆಯಲ್ಲಿ ನೆರೆಯ ಆಂಧ್ರಪ್ರದೇಶದ ಪ್ರಸಿದ್ಧ ತಿರುಮಲ ತಿರುಪತಿಗೆ (Tirupati) ಭಕ್ತರ ದಂಡು ಲಗ್ಗೆ ಇಟ್ಟಿದ್ದು, ತಿಮ್ಮಪ್ಪನ ದರುಶನ ಪಡೆಯಲು ಹಲವು ಗಂಟೆಗಳ ಕಾಲ ಕಾಯಬೇಕಾದ ಅನಿರ್ವಾರ್ಯತೆ ಎದುರಾಗಿದೆ.
ಹೌದು ಸರಣಿ ರಜೆ ಹಿನ್ನೆಲೆಯಲ್ಲಿ ತಿರುಪತಿಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಭಕ್ತರ ದಟ್ಟಣೆಯಿಂದ ಕಂಪಾರ್ಟ್ ಮೆಂಟ್‌ಗಳು ತುಂಬಿ ಹೋಗಿದ್ದು, ಟಿಕೆಟ್ ಪಡೆಯಲು ಕೂಡ ಭಕ್ತರು ಸಾಲುಗಟ್ಟಿ ನಿಂತು ಪರದಾಡುತ್ತಿದ್ದಾರೆಂದು ವರದಿಯಾಗಿದೆ.
ದೊಡ್ಡಬಳ್ಳಾಪುರದ ಗುಂಡಸಂದ್ರದಿಂದ ರಮೇಶ್ ಎನ್ನುವವರ 5 ಜನರ ಕುಂಟುಂಬ ತಿಮ್ಮಪ್ಪ ದರುಶನಕ್ಕೆ ತೆರಳಿದ್ದು, ಸತತ 6 ಗಂಟೆಗಳಿಂದ ಸರದಿ ಸಾಲಿನಲ್ಲಿ ನಿಂತಿದ್ದು, ಇನ್ನೂ 20 ಗಂಟೆಗಳ ಕಾಯಬೇಕಾದ ಸ್ಥಿತಿಯಲ್ಲಿ ಇದ್ದಾರೆ.
ಮೂಲಗಳ ಮಾಹಿತಿ ಅನ್ವಯ ನಿನ್ನೆ ಒಂದೇ ದಿನ 73,355 ಮಂದಿ ತಿಮ್ಮಪ್ಪನ ದರುಶನ ಪಡೆದಿದ್ದು, ಸುಮಾರು ಎರಡು ಲಕ್ಷ ಮಂದಿ ದರುಶನಕ್ಕಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ, ಭಕ್ತರಿಗೆ ತ್ವರಿತವಾಗಿ ದರ್ಶನ ವ್ಯವಸ್ಥೆ ಕಲ್ಪಿಸಲು ಟಿಟಿಡಿ ಹಾಗೂ ಪೊಲೀಸರು ಶ್ರಮಿಸುತ್ತಿದ್ದಾರೆ.