
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ (Cmsiddaramaiah) ಆಡಳಿತಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ. ರಾಜ್ಯದ ಪಟ್ಟಣ ಪಂಚಾಯಿತಿಗಳ ಚುನಾವಣೆ ಫಲಿತಾಂಶವು ಅವರ ವೈಫಲ್ಯಕ್ಕೆ ದಿಕ್ಸೂಚಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B.Y. Vijayendra) ಅವರು ವಿಶ್ಲೇಷಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ವೀರ ಬಾಲಕರ ದಿನ ಕಾರ್ಯಕ್ರಮದ ಅಂಗವಾಗಿ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಬಗ್ಗೆ ಯಾರೂ ಸಂತಸದಿಂದಿಲ್ಲ. ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ 48 ಗಂಟೆಗಳಲ್ಲಿ ತಮ್ಮ ಮುಖವಾಡ ಕಳಚಿತ್ತು. ಪ್ರಧಾನಿ ಮೋದಿಜೀ ಅವರು ಕಿಸಾನ್ ಸಮ್ಮಾನ್ ಯೋಜನೆಯಡಿ 6 ಸಾವಿರ, ಯಡಿಯೂರಪ್ಪ ಅವರು 4 ಸಾವಿರ ನೀಡುತ್ತಿದ್ದರು. ಅದಕ್ಕೆ ಕಲ್ಲು ಹಾಕಿದರು ಎಂದು ಟೀಕಿಸಿದರು.
ಬಸವರಾಜ ಬೊಮ್ಮಾಯಿ ಅವರು ರೈತರ ಮಕ್ಕಳಿಗಾಗಿ ಆರಂಭಿಸಿದ ವಿದ್ಯಾನಿಧಿ ಯೋಜನೆಗೂ ಕಲ್ಲು ಹಾಕಿದ್ದಾರೆ ಎಂದು ಆಕ್ಷೇಪಿಸಿದರು. ಉತ್ತರ ಕರ್ನಾಟಕದ ಭೀಕರ ಅತಿವೃಷ್ಟಿ ಇದ್ದರೂ ಸಚಿವರು ಕನಿಷ್ಠ ಸೌಜನ್ಯಕ್ಕಾದರೂ ಸ್ಥಳಕ್ಕೆ ಭೇಟಿ ನೀಡಿ ರೈತರ ಸಂಕಷ್ಟ ಅರಿಯುವ ಪ್ರಯತ್ನ ಮಾಡಿಲ್ಲ ಎಂದು ಆಕ್ಷೇಪಿಸಿದರು.
ಮೊನ್ನೆ ನಡೆದ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ನಮ್ಮ ನಿರೀಕ್ಷೆಗೂ ಮೀರಿ ಬಿಜೆಪಿ ಯಶಸ್ಸು ಪಡೆದಿದೆ. ದಕ್ಷಿಣ ಕನ್ನಡದ ಬಜೆಪೆ, ಕಿನ್ನಿಗೋಳಿ ಪಟ್ಟಣ ಪಂಚಾಯಿತಿ, ಉತ್ತರ ಕನ್ನಡದ ಮಂಕಿ ಪಟ್ಟಣ ಪಂಚಾಯಿತಿ, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಗಳಲ್ಲಿ ಬಹುಮತ ಪಡೆದಿದೆ ಎಂದು ತಿಳಿಸಿದರು.

ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಜಯಶೀಲರಾದ ಅಭ್ಯರ್ಥಿಗಳನ್ನು ಅಭಿನಂದಿಸಿ, ಸನ್ಮಾನಿಸಿದರು.
ಬಿಜೆಪಿ ಮುಂದುವರಿದ ಜನಾಂಗಕ್ಕೆ ಸೇರಿದ ಪಕ್ಷ ಎಂದು ಕಾಂಗ್ರೆಸ್ಸಿನವರು ಟೀಕಿಸುತ್ತಾರೆ. ಎಲ್ಲ ಎಸ್‍ಸಿ, ಎಸ್‍ಟಿ, ಹಿಂದುಳಿದ ಸಮಾಜದ ನ್ಯಾಯ ಕೊಡುವ ಕೆಲಸವನ್ನು ಬಿಜೆಪಿ ಮಾಡಿದೆ. ನರೇಂದ್ರ ಮೋದಿಜೀ, ಯಡಿಯೂರಪ್ಪನವರು, ನಮ್ಮ ಸರಕಾರದ ಅವಧಿಯಲ್ಲಿ ಆಗಿದೆ ಎಂಬುದು ಋಜುವಾತಾಗಿದೆ ಎಂದು ಹೇಳಿದರು. ಪಟ್ಟಣ ಪಂಚಾಯಿತಿ ಚುನಾವಣಾ ವಿಜೇತರನ್ನು ಅಭಿನಂದಿಸಿದ ಅವರು, ಪರಾಭವಗೊಂಡವರು ಆತಂಕ ಪಡಬೇಕಿಲ್ಲ ಎಂದು ಕಿವಿಮಾತು ಹೇಳಿದರು.
ಮೋದಿಜೀ ಅವರು ಯಾವುದೇ ರಾಜಕೀಯ ಕುಟುಂಬದ ಹಿನ್ನೆಲೆ ಇದ್ದವರಲ್ಲ. ಬೂತ್ ಅಧ್ಯಕ್ಷರಾಗಿದ್ದು, ಕಾರ್ಯಕರ್ತರ ಸಂಘಟನೆ ಮಾಡಿ, ಗುಜರಾತ್ ರಾಜ್ಯದ ಮುಖ್ಯಮಂತ್ರಿಗಳಾಗಿ 14 ವರ್ಷ ಸೇವೆ ಸಲ್ಲಿಸಿದ್ದಾರೆ. 11 ವರ್ಷ ಸತತ ಕೇಂದ್ರದಲ್ಲಿ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸುತ್ತಿದ್ದಾರೆ. ಜನಸೇವಕ ಎಂಬ ಭಾವನೆ ಅವರದು. ಅಂಥ ಬಿಜೆಪಿ ಕಾರ್ಯಕರ್ತ ಎಂಬುದು ನಾವು ಹೆಮ್ಮೆ ಪಡಬೇಕಾದ ವಿಚಾರ ಎಂದು ತಿಳಿಸಿದರು.
ವೀರ ಬಾಲಕರ ಬಲಿದಾನದ ಜ್ಞಾಪಕಾರ್ಥವಾಗಿ ಇಂದಿನ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಪುಟ್ಟ ಬಾಲಕರು 8ನೇ ವಯಸ್ಸಿನಲ್ಲಿ ಮತಾಂತರ ಆಗಬೇಕೆಂದು ಏನೇ ಒತ್ತಡ ಬಂದರೂ ಅದಕ್ಕೆ ಒಪ್ಪದೇ ವೀರ ಮರಣ ಹೊಂದಿದ ಘಟನೆ ನಡೆದಿತ್ತು ಎಂದು ವಿವರಿಸಿದರು.
ಪ್ರಧಾನಿ ನರೇಂದ್ರ ಮೋದಿಜೀ ಅವರು ಈ ವೀರಮರಣವನ್ನು ಮತ್ತು ಬಲಿದಾನವನ್ನು ದೇಶಕ್ಕೆ ಪರಿಚಯಿಸುವ ಕೆಲಸ ಮಾಡಿದ್ದಾರೆ ಎಂದರು. ಬಾಶೆಟ್ಟಿಹಳ್ಳಿ ಪಂಚಾಯಿತಿಯಲ್ಲಿ ಗೆಲುವಿನ ಹಿನ್ನೆಲೆಯಲ್ಲಿ ಬಿ.ವೈ.ವಿಜಯೇಂದ್ರ ಅವರನ್ನು ಇದೇ ವೇಳೆ ಅಭಿನಂದಿಸಿ ಗೌರವಿಸಲಾಯಿತು.
ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ, ರಾಜ್ಯ ಕಾರ್ಯದರ್ಶಿಗಳಾದ ಡಾ. ಲಕ್ಷ್ಮೀ ಅಶ್ವಿನ್ ಗೌಡ, ಶರಣು ತಳ್ಳಿಕೇರಿ, ಶಾಸಕ ಧೀರಜ್ ಮುನಿರಾಜು, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ ಮತ್ತು ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.