
ದೊಡ್ಡಬಳ್ಳಾಪುರ: ಬೇಸಿಗೆ ಆರಂಭಕ್ಕೂ ಮುನ್ನವೇ ತಾಲೂಕಿನ ಆರೂಢಿ ಗ್ರಾಮದಲ್ಲಿ ನೀರಿನ ಬವಣೆ (Water problem) ತೀವ್ರವಾಗಿದೆ, ಇದು ಇಂದಿನದ್ದು ಮಾತ್ರ ಎಂದುಕೊಂಡರೆ ತಪ್ಪು, ಹಲವು ತಿಂಗಳಿಂದ ಆರೂಢಿ ಗ್ರಾಮದ ಒಂದು ವಾರ್ಡ್ ಜನತೆ ಇದೇ ಸಮಸ್ಯೆಯಿಂದ ಪರದಾಡುತ್ತಿದ್ದಾರೆ.
ಇನ್ನೂ ಆರೂಢಿಯಲ್ಲಿ ನೀರಿನ ಕೊರತೆ ಇದೆಯಾ ಎಂದರೆ ಅದು ಸುಳ್ಳು, ಏಕೆಂದರೆ ಅಗತ್ಯ ಬೋರ್‌ವೆಲ್ ಗಳಿದ್ದು, ಹೆಚ್ಚುವರಿ ಬೋರ್ವೆಲ್ ಕೂಡ ಇದೆ.
ಮತ್ತೆ ಸಮಸ್ಯೆ ಹೇಗೆ..? ಎಲ್ಲಿ..? ಎಂಬುದು ನೋಡುವುದಾದರೆ, ಆರೂಢಿಯ ಗ್ರಾಮದೇವತೆ ವಡಸಲಮ್ಮ ದೇವಿ ರಸ್ತೆಯಲ್ಲಿನ ಡಾಲರ್ಸ್ ಕಾಲೋನಿ ಜನತೆ ಬಹು ತಿಂಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.
ಈ ವ್ಯಾಪ್ತಿಗೆ ಸುಮಾರು ಮುಕ್ಕಾಲು ಕಿಲೋಮೀಟರ್ ದೂರದಿಂದ ನೀರು ಪೂರೈಸಲಾಗುತ್ತದೆ. ಆದರೆ ಗ್ರಾಮದ ಮೂಲಕ ಹಾದು ಹೋಗಿ, ಈ ವ್ಯಾಪ್ತಿಗೆ ನೀರು ಬರುವುದು ತೀರ ಕಡಿಮೆ ಪ್ರಮಾಣ.
ಇದರಿಂದಾಗಿ ಈ ವ್ಯಾಪ್ತಿಯಲ್ಲಿ ವಾಸವಾಗಿರುವ ಸುಮಾರು 100 ಕ್ಕೂ ಮನೆಗಳ ಜನತೆ ಪರದಾಟ, ನೀರಿಗಾಗಿ ಮಹಿಳೆಯರ ನಡುವೆ ಮಾತಿನ ಚಕಮಕಿ ನಡೆಯುತ್ತಿದೆ.
ಈ ಕುರಿತಂತೆ ಹಲವು ಬಾರಿ ಗ್ರಾಮಪಂಚಾಯಿತಿಗೆ ಮನವಿ ಸಲ್ಲಿಸಲಾಗಿದ್ದು, ಗ್ರಾಪಂ ಅಧ್ಯಕ್ಷೆ ಗಂಗರಾಜಮ್ಮ ರಾಮಕೃಷ್ಣಪ್ಪ, ಸದಸ್ಯ ನವೀನ್ ಕುಮಾರ್, ಪಿಡಿಒ ಮಲ್ಲೇಶ್ ಅವರುಗಳು ಈ ವ್ಯಾಪ್ತಿಯಲ್ಲಿ ಶಾಶ್ವತ ಪರಿಹಾರ ದೊರಕಿಸಲು ಶಾಸಕರ ಅನುದಾನದಲ್ಲಿ ನೂತನ ಬೋರ್ ವೆಲ್ ಕೊರೆಸಿದ್ದು, ಕೆಲವೇ ಅಡಿಯಲ್ಲಿ ಭರ್ಜರಿ ನೀರು ಸಿಕ್ಕಿದ್ದು, ಅಂತೆಯೇ ಕೆಲವೇ ದಿನಗಳಲ್ಲಿ ಮೋಟರ್, ಪಂಪಸೆಟ್ ಅಳವಡಿಕೆ ಕೂಡ ನಡೆದಿದೆ. ಆದರೆ ವಿದ್ಯುತ್..?
ಇದೇ ಈಗ ಯಕ್ಷ ಪ್ರಶ್ನೆಯಾಗಿ ಉಳಿದಿದೆ. ಈ ಬೋರ್ವೆಲ್ಗೆ ವಿದ್ಯುತ್ ಪೂರೈಕೆ ಮಾಡಲು ಟಿಸಿ ಅಗತ್ಯವಾಗಿದೆ. ಆದರೆ ಸಮೀಪದಲ್ಲಿ ಯಾವುದೇ ಟಿಸಿ ಇಲ್ಲದೆ ಇರುವುದು, ಬೋರ್ ವೆಲ್ ಕೊರೆಸಿ ತಿಂಗಳುಗಳು ಕಳೆದರು ಪ್ರಯೋಜನಕ್ಕೆ ಇಲ್ಲವಾದಂತಾಗಿದೆ.
ಇನ್ನೂ ತ್ವರಿತವಾಗಿ ಟಿಸಿ ಅಳವಡಿಸಲು, ತಾತ್ಕಾಲಿಕ ಸಂಪರ್ಕ ಪಡೆದುಕೊಳ್ಳಲು ಬೆಸ್ಕಾಂನಿಂದ ಅನುಮತಿ ದೊಡ್ಡಬಳ್ಳಾಪುರ ತಾಲೂಕು ಪಂಚಾಯತಿ ಇಒ ಅವರಿಗೆ ಗ್ರಾಮಪಂಚಾಯಿತಿ ವತಿಯಿಂದ ಪತ್ರ ಬರೆಯಲಾಗಿದೆ. ಆದರೆ ಅದೂ ಕೂಡ ದಿನ ತಳ್ಳುತ್ತಲೆ ಇದೆ.
ಕಡಿಮೆ ಪ್ರಮಾಣ ನೀರಿನ ಪೂರೈಕೆಯಿಂದಾಗಿ ಈ ವಾರ್ಡ್ ಜನತೆ ನೀರಿಗಾಗಿ ವಿಧಿಯಿಲ್ಲದೆ ಟ್ಯಾಂಕರ್ ನೀರಿಗೆ ಆಶ್ರಯಿಸಬೇಕಾದ ಅನಿರ್ವಾರ್ಯತೆ ಎದುರಾಗಿದೆ. ಈ ಕುರಿತಂತೆ ಕೂಡಲೇ ದೊಡ್ಡಬಳ್ಳಾಪುರ ತಾಪಂ ಇಒ ಅವರು ಬೆಸ್ಕಾಂ ಮೂಲಕ ಅನುಮತಿ ದೊರಕಿಸಿದರೆ ಈ ವ್ಯಾಪ್ತಿಯ ಜನರಿಗೆ ಶಾಶ್ವತ ಪರಿಹಾರ ದೊರಕಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.