
ದೊಡ್ಡಬಳ್ಳಾಪುರ: ಹೊಸ ವರ್ಷದ ಸಂಭ್ರಮ ಶುರುವಾಗುತ್ತಿದೆ. ಹೊಸ ವರ್ಷದ ಆಚರಣೆಯ (New Year celebrations) ಹಿನ್ನೆಲೆಯಲ್ಲಿ ಸಾಕಷ್ಟು ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲು ಗೃಹ ಇಲಾಖೆ ಮುಂದಾಗಿದೆ.
ಈ ನಿಟ್ಟಿನಲ್ಲಿ ಈಗಾಗಲೇ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲು ಖಾಕಿ ಸಿದ್ದತೆ ನಡೆಸುತ್ತಿದೆ.
ಇದರ ಬೆನ್ನಲ್ಲೇ ದೊಡ್ಡಬಳ್ಳಾಪುರ ನಗರ ಪೊಲೀಸರು ವಾಹನ ಸವಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಕುಡಿದು ವಾಹನ ಚಾಲನೆ ಮಾಡುವವರಿಗೆ ಬಿಸಿ ಮುಟ್ಟಿಸಲಿದ್ದಾರೆ.
ಇದರ ಅನ್ವಯ ಹಿರಿಯ ಪೊಲೀಸ್ ಅಧಿಕಾರಿಗಳ ಸೂಚನೆ ಮೇರೆಗೆ ದಿನಾಂಕ ಡಿ. 31ರ ವರೆಗೆ ಕುಡಿದು ವಾಹನ ಚಲಾಯಿಸುವವರು, ಓವರ್ ಸ್ಪೀಡ್ ಮತ್ತೆ ವೀಲ್ಹಿಂಗ್ ಮಾಡು ವಾಹನ ಸವಾರರ ವಿರುದ್ಧ ವಿಶೇಷ ಕಾರ್ಯಚರಣೆ ನಡೆಸಲಿದ್ದಾರೆ.
ಅಲ್ಲದೆ ಈ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಲಿದ್ದಾರೆ.
ಹೆಲ್ಮೆಟ್ ಬಗ್ಗೆ ಅರಿವು
ಮತ್ತೊಂದೆಡೆ ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವತಿಯಿಂದ ದೊಡ್ಡಬಳ್ಳಾಪುರ ಉಪವಿಭಾಗದಲ್ಲಿ ಸಂಚಾರ ಸುರಕ್ಷತಾ ಸಪ್ತಾಹ-2025ರ ಅಡಿಯಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಬಗ್ಗೆ ಅರಿವು ಮತ್ತು ಉಚಿತ ಹೆಲ್ಮೆಟ್ ವಿತರಣಾ ಕಾರ್ಯಕ್ರಮವನ್ನು ಬೆಳಗ್ಗೆ ದೊಡ್ಡಬಳ್ಳಾಪುರ ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತ(ಟಿಬಿ ಸರ್ಕಲ್) ಮುಂಭಾಗ ಆಯೋಜಿಸಲಾಗಿತ್ತು.
ನಂತರ ಪೊಲೀಸರು ಹೆಲ್ಮೆಟ್ ಧರಿಸಿ ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಬೈಕ್ ನಲ್ಲಿ ಸಂಚರಿಸಿ ಜನರಿಗೆ ಹೆಲ್ಮೆಟ್ ಬಗ್ಗೆ ಅರಿವು ಮೂಡಿಸಿದರು.
ಕಾರ್ಯಕ್ರಮಕ್ಕೆ ಡಿವೈಎಸ್ ಪಿ ಪಾಂಡುರಂಗ ಚಾಲನೆ ನೀಡಿದರು.