
ಕೊಪ್ಪಳ: ರಾಮಾಯಣ ಕಾಲದ ಐತಿಹಾಸಿಕ ಹಿನ್ನಲೆಯನ್ನು ಹೊಂದಿರುವ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ (Anjanadri Hill) ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಿದ್ದು, ಬೆಟ್ಟದ ಮೇಲಿಂದ ದೇವಸ್ಥಾನದ ವರೆವಿಗೂ ನೂಕುನುಗ್ಗಲಿನ ವಾತಾವರಣ ಶನಿವಾರ ನಿರ್ಮಾಣವಾಗಿತ್ತು.
ಕ್ರಿಸ್ಟಸ್ ಸೇರಿದಂತೆ ಸಾಲು ಸಾಲು ಸರಕಾರಿ ರಜೆಗಳು ಆಗಮಿಸಿದ ಹಿನ್ನೆಲೆಯಲ್ಲಿ ಅಂಜನಾದ್ರಿ ಬೆಟ್ಟಕ್ಕೆ ಹಾಗೂ ಪಂಪಾಸರೋವರಕ್ಕೆ ಭೇಟಿಯನ್ನು ನೀಡುವ ಭಕ್ತರ, ಪ್ರವಾಸಿಗರ ಸಂಖ್ಯೆಯು ಹೆಚ್ಚಳವಾಗಿದೆ.
ಬೆಳಗಿನ ಮಹಾಮಂಗಳಾರತಿ ಸಮಯದಲ್ಲಿ ಸಾಮಾನ್ಯವಾಗಿದ್ದ ಭಕ್ತರ ಸಂಖ್ಯೆಯು ಸಮಯ ವಾಗುತ್ತಿದ್ದಂತೆ ಸಾವಿರಾರು ಸಂಖ್ಯೆಗೆ ಏರಿಕೆಯಾಗಿದೆ.
ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ ಭಕ್ತರು, ಪ್ರವಾಸಿಗರಿಂದ ಅಂಜನಾದ್ರಿ ಬೆಟ್ಟದ ಸಮೀಪದ ರಸ್ತೆಯಲ್ಲಿ ಗಂಟೆಗಳ ಕಾಲ ಸಂಚಾರ ದಟ್ಟನೆ ನಿರ್ಮಾಣವಾಗಿತ್ತು. ನಂತರ ಪೊಲೀಸ್ ಇಲಾಖೆಯ ಅಧಿಕಾರಿಗಳು ಆಗಮಿಸಿ, ಸಂಚಾರ ದಟ್ಟನೆಯನ್ನು ತಿಳಿಗೊಳಿಸಿದ್ದಾರೆ.
ರಸ್ತೆಯಲ್ಲಿ ಅಷ್ಟೇ ಅಲ್ಲದೆ ಬೆಟ್ಟ ಏರುವ ಮೆಟ್ಟಿಲುಗಳಲ್ಲಿ ಕೂಡ ನೂಕುನುಗ್ಗಲಿನ ವಾತಾವರಣ ನಿರ್ಮಾಣವಾಗಿದ್ದು, ಹನುಮನ ದರ್ಶನ ಪಡೆದುಕೊಳ್ಳಲು ಭಕ್ತರು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಂಜೆಯಾದರು ಸಹ ಭಕ್ತರ ಸಂಖ್ಯೆ ಕಡಿಮೆಯಾಗದೆ ಇರುವುದು ವಿಶೇಷವಾಗಿತ್ತು ಎಂದು ವರದಿಯಾಗಿದೆ.