ಬೆಂಗಳೂರು; “ಕುಮಾರಸ್ವಾಮಿ ( Kumaraswamy) ಅವರು ಯಾವಾಗಲೋ ಬರುತ್ತಾರೆ, ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ ಹೋಗುತ್ತಾರೆ. ಅವರು ಗಂಭೀರ ರಾಜಕಾರಣ ಮಾಡುವವರಲ್ಲ. ಮಾಧ್ಯಮಗಳ ಮುಂದೆ ಮಾತ್ರ ರಾಜಕಾರಣ ಮಾಡುವವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರು ತಿರುಗೇಟು ನೀಡಿದರು.
ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಸೋಮವಾರ ಪ್ರತಿಕ್ರಿಯೆ ನೀಡಿದರು.
ಜನಾರ್ಧನ ರೆಡ್ಡಿ ಅವರು ಅಮೆರಿಕಾದಿಂದ ಬೇಕಾದರೂ ಭದ್ರತೆ ತೆಗೆದುಕೊಳ್ಳಲಿ ಎಂಬ ನಿಮ್ಮ ಹೇಳಿಕೆಗೆ ಗ್ರೇಟ್ ಡಿಸಿಎಂ ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎಂದು ಗಮನ ಸೆಳೆದಾಗ, ನಾವು ಯಾರಿಗೆ ಭದ್ರತೆ ಕೊಡಬೇಕು? ಯಾವ ಕಾರಣಕ್ಕೆ ಭದ್ರತೆ ನೀಡಬೇಕು ಎಂದು ಆಮೇಲೆ ಮಾತನಾಡೋಣ. ಈ ವಿಚಾರವಾಗಿ ಗೃಹ ಸಚಿವರು ಉತ್ತರ ನೀಡುತ್ತಾರೆ. ನಾನು ಯಾರಿಗೂ ಉತ್ತರ ನೀಡುವುದಿಲ್ಲ.
ನಾನು ಕೂಡ ಬಳ್ಳಾರಿಗೆ ಹೋಗುತ್ತಿದ್ದೇನೆ. ನಮ್ಮ ಕಾರ್ಯಕರ್ತ ಸತ್ತಿದ್ದಾನೆ. ನಾನು ಪಕ್ಷದ ಸಮಿತಿಯಿಂದ ಮಾಹಿತಿ ಪಡೆದಿದ್ದೇನೆ. ಅಧಿಕೃತವಾಗಿ ವರದಿ ನೀಡಬೇಕಿದೆ. ನಾನು ಕುಮಾರಸ್ವಾಮಿ ಹಾಗೂ ಇತರರ ಹೇಳಿಕೆಗೆ ಉತ್ತರ ನೀಡುವ ಅವಶ್ಯಕತೆ ಇಲ್ಲ. ಅವರು ತಮ್ಮ ಖುಷಿಗೆ ಏನಾದರೂ ಹೇಳಿಕೊಳ್ಳಲಿ.
ಕುಮಾರಸ್ವಾಮಿ ಅವರು ಬರುತ್ತಾರೆ, ಮಾತನಾಡುತ್ತಾರೆ, ಹೋಗುತ್ತಾರೆ. ಬಳ್ಳಾರಿಯಲ್ಲಿ ಶಾಂತಿ ನೆಲೆಸಬೇಕು. ಬಳ್ಳಾರಿ ಜನ ಈ ಹಿಂದೆ ಅನುಭವಿಸಿರುವುದೇ ಸಾಕು, ಮುಂದೆ ಯಾವುದೇ ತೊಂದರೆ ಆಗಬಾರದು. ನಮಗೆ ಅಷ್ಟೇ ಸಾಕು. ಈ ಹಿಂದೆ ಆಗಬಾರದ್ದೆಲ್ಲಾ ಆಗಿದೆ. ಮೊನ್ನೆ ನಡೆದ ದುರ್ಘಟನೆ ಆಗಬಾರದಿತ್ತು, ಆದರೆ ಆಗಿಹೋಗಿದೆ. ಇದರಿಂದ ನನಗೆ ದುಃಖವಾಗಿದೆ ಎಂದರು.
“ಕುಮಾರಸ್ವಾಮಿ ಅವರಿಗೆ ನನ್ನ ಮೇಲೆ ಬಹಳ ಅಭಿಮಾನ ಇದೆಯಲ್ಲಾ, ಇದು ಬಹಳ ಒಳ್ಳೆಯದು. ಒಳ್ಳೆಯದ್ದಕ್ಕೆ ಹೇಳಿದ್ದಾರೋ, ಕೆಟ್ಟದ್ದಕ್ಕೆ ಹೇಳಿದ್ದಾರೋ, ಒಟ್ಟಿನಲ್ಲಿ ನನ್ನನ್ನು ಗ್ರೇಟ್ ಡಿಸಿಎಂ ಎಂದು ಕರೆದಿರುವುದಕ್ಕೆ ಸಂತೋಷ” ಎಂದರು.
ಜನಾರ್ದನ ರೆಡ್ಡಿ ಅವರ ಮನೆಯಲ್ಲಿ ದೊಣ್ಣೆ ಹಾಗೂ ಬುಲೆಟ್ ಗಳು ಸಿಕ್ಕಿರುವ ಬಗ್ಗೆ ಕೇಳಿದಾಗ, “ನನಗೆ ಅದರ ಬಗ್ಗೆ ಮಾಹಿತಿ ಇಲ್ಲ” ಎಂದರು.
ಬಳ್ಳಾರಿ ಗಲಭೆಯಲ್ಲಿ ಸತ್ತ ಪಕ್ಷದ ಕಾರ್ಯಕರ್ತನ ಮನೆಗೆ ಹೋಗುತ್ತೀರಾ ಎಂದು ಕೇಳಿದಾಗ, “ನಮ್ಮ ನಾಯಕರು ಎಲ್ಲೆಲ್ಲಿ ಹೋಗಬೇಕು ಎಂದು ಹೇಳುತ್ತಾರೋ ಅಲ್ಲಿಗೆ ಹೋಗುವೆ” ಎಂದರು.
ರೆಡ್ಡಿ ತಮ್ಮ ಇತಿಹಾಸದ ಪುಸ್ತಕ ತೆರೆದು ಕ್ರಿಮಿನಲ್ ಯಾರು ಎಂಬುದನ್ನು ನೋಡಿಕೊಳ್ಳಲಿ
ಕ್ರಿಮಿನಲ್ ಶಾಸಕರಿಗೆ ಡಿಕೆ ಶಿವಕುಮಾರ್ ಬೆಂಬಲ ನೀಡುತ್ತಿದ್ದಾರೆ ಎಂಬ ಜನಾರ್ದನ ರೆಡ್ಡಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, ನನ್ನ ಮೇಲೂ ಕ್ರಿಮಿನಲ್ ಕೇಸ್ ದಾಖಲಿಸಿ ನನಗೂ ಕ್ರಿಮಿನಲ್ ಪಟ್ಟ ಕೊಟ್ಟಿದ್ದಾರೆ. ಜನಾರ್ದನ ರೆಡ್ಡಿ ಅವರು ತಮ್ಮ ಇತಿಹಾಸದ ಪುಸ್ತಕವನ್ನು ತೆರೆದು ಯಾರ ಮೇಲೆ ಕ್ರಿಮಿನಲ್ ಕೇಸ್ ಇದೆ ಎಂಬುದನ್ನು ನೋಡಿಕೊಳ್ಳಲಿ.
ಮಾಜಿ ಸಿಎಂ, ಶಾಸಕರು, ಸಂಸದರ ಮೇಲೆ ಕ್ರಿಮಿನಲ್ ಕೇಸ್ ಗಳಿವೆಯಲ್ಲಾ? ಎಫ್ಐಆರ್ ದಾಖಲಿಸಿದ ನಂತರ ನ್ಯಾಯಾಲಯದಲ್ಲಿ ತೀರ್ಪು ಬರುವವರೆಗೂ ಆ ಕ್ರಿಮಿನಲ್ ಅನ್ನು ಆರೋಪಿ ಅಂತಲೇ ಪರಿಗಣಿಸುತ್ತಾರೆ ಅಲ್ಲವೇ? ಎಂದರು.
ದಾಖಲೆ ಬರೆಯುತಿರುವ ಸಿಎಂಗೆ ತುಂಬು ಹೃದಯದ ಶುಭ ಹಾರೈಕೆ
ಸಿಎಂ ಸಿದ್ದರಾಮಯ್ಯ ಅವರು ದೀರ್ಘಾವಧಿ ಆಡಳಿತ ಮಾಡಿದ ದಾಖಲೆ ಬರೆಯುತ್ತಿದ್ದಾರೆ ಎಂದು ಕೇಳಿದಾಗ, “ಇದು ಬಹಳ ಸಂತೋಷದ ವಿಷಯ. ನಮಗೆ, ನಿಮಗೆ ಎಲ್ಲರಿಗೂ ಸಂತೋಷದ ವಿಚಾರ. ನೀವು ಈ ಬಗ್ಗೆ ಉತ್ತಮವಾಗಿ ಪ್ರಚಾರ ಮಾಡಿ. ನಾನು ಅವರಿಗೆ ತುಂಬು ಹೃದಯದಿಂದ ಶುಭ ಹಾರೈಸುತ್ತೇನೆ. ಜೀವನದಲ್ಲಿ ಸಾಧನೆ ಮಾಡಬೇಕು ಎಂಬ ಬಯಕೆ ಎಲ್ಲರಿಗೂ ಇರುತ್ತದೆ. ನಮ್ಮ ಗೌರವಾನ್ವಿತ ಮುಖ್ಯಮಂತ್ರಿಗಳು ಇತಿಹಾಸದ ಪುಟಕ್ಕೆ ಹಿಂದೆಯೂ ಸೇರಿದ್ದಾರೆ, ಮುಂದೆಯೂ ಸೇರುತ್ತಾರೆ” ಎಂದರು.
ಇದರಿಂದ ನಿಮ್ಮ ಹಾದಿ ಸುಗಮವಾಗುತ್ತದೆಯೇ ಎಂದು ಕೇಳಿದಾಗ, “ಹಳ್ಳಿಯಿಂದ ಬಂದ ನಾನು ಇಲ್ಲಿಯವರೆಗೂ ತಲುಪಿದ್ದೇನೆ. ಇದಕ್ಕಿಂತ ಇನ್ನೇನು ಬೇಕು ನನಗೆ. ಯಾವುದನ್ನೂ ಹುಡುಕಿಕೊಂಡು ಹೋಗುವ ಅವಶ್ಯಕತೆ ಇಲ್ಲ. ನನ್ನ ಬಾಯಲ್ಲಿ ಏನೇನೋ ಮಾತನಾಡಿಸಲು ಪ್ರಯತ್ನಿಸಬೇಡಿ” ಎಂದರು.
ಶುಭ ದಿನಗಳು ಬರುತ್ತಿವೆ ಎಂಬ ಡಿ.ಕೆ. ಸುರೇಶ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನಮಗೆ ಎಲ್ಲಾ ದಿನವೂ ಒಳ್ಳೆಯ ದಿನಗಳು, ನಿನ್ನೆ ಭೂತಕಾಲ, ನಾಳೆ ಭವಿಷ್ಯಕಾಲ, ಇಂದು ವರ್ತಮಾನ. ನಿಮ್ಮ ಜೊತೆ ಮಾತನಾಡುತ್ತಿರುವುದು ಒಳ್ಳೆಯ ದಿನ” ಎಂದು ಚಟಾಕಿ ಹಾರಿಸಿದರು.
ಮಲೇಷ್ಯಾ ಡಿಸಿಎಂ ಅವರಿಂದ ನಮ್ಮ ವಿವಿಗಳ ಭೇಟಿ
ಮಲೇಷ್ಯಾದ ಪೆನಾಂಗ್ ರಾಜ್ಯದ ಡಿಸಿಎಂ ಜಗದೀಪ್ ಸಿಂಗ್ ಅವರ ಭೇಟಿ ಬಗ್ಗೆ ಕೇಳಿದಾಗ, “ಜಗದೀಪ್ ಸಿಂಗ್ ಅವರು ಭಾರತೀಯ ಮೂಲದವರು. ಅವರು ಮಲೇಷ್ಯಾ ಪೆನಾಂಗ್ ರಾಜ್ಯದ ಉಪಮುಖ್ಯಮಂತ್ರಿಗಳಾಗಿದ್ದು, ಶಿಕ್ಷಣ ಸಚಿವರೂ ಆಗಿದ್ದಾರೆ. ಅವರು ನಮ್ಮ ವಿವಿಗಳನ್ನು ಭೇಟಿ ಮಾಡಿದ್ದಾರೆ. ಬೆಂಗಳೂರು ವಿವಿಯ ಸಹಯೋಗ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದು, ನಮಗೂ ಆಹ್ವಾನ ನೀಡಿದ್ದಾರೆ” ಎಂದರು.
ಜ.8ರ ಸಂಜೆ ಮನರೇಗಾ ಉಳಿಸಿ ಹೋರಾಟ ಸಭೆ
ಮನರೇಗಾ ಹೋರಾಟದ ಬಗ್ಗೆ ಕೇಳಿದಾಗ, “ಜ.8 ರಂದು ಸಂಜೆ 5 ಗಂಟೆಗೆ ಎಲ್ಲಾ ಶಾಸಕರು, ಪರಿಷತ್ ಸದಸ್ಯರು, ಸಂಸದರನ್ನು ಮನರೇಗಾ ಉಳಿಸಿ ಹೋರಾಟದ ಪೂರ್ವಭಾವಿ ಸಭೆಗೆ ಆಹ್ವಾನಿಸಿದ್ದೇನೆ. ಎಐಸಿಸಿ ನಾಯಕರು ನಮಗೆ ನಿರ್ದೇಶನ ನೀಡಿದ್ದಾರೆ. ಮಾಧ್ಯಮಗಳ ಮೂಲಕ ನಾನು ನಮ್ಮ ನಾಯಕರನ್ನು ಆಹ್ವಾನಿಸುತ್ತಿದ್ದೇನೆ. ಈ ಪ್ರತಿಭಟನೆ ನಂತರ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಕಾರ್ಯಕ್ರಮ ರೂಪಿಸುತ್ತೇವೆ” ಎಂದರು.