ಬೆಂಗಳೂರು: ಓಂ ಶಕ್ತಿ ಸಂಘದ ಮೇಲೆ ನಡೆದ ದಾಳಿಯನ್ನು ಪೊಲೀಸರು ಗಂಭೀರವಾಗಿ ಪರಿಗಣಿಸದೇ ಇದ್ದಲ್ಲಿ, ಇಂತಹ ದಾಳಿಗಳು ಮರುಕಳಿಸಲಿವೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ (R. Ashoka) ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಬರಿಮಲೆ ಮಾದರಿಯಲ್ಲೇ ಓಂ ಶಕ್ತಿ ಮಾಲಾಧಾರಿಗಳು ದೇವಿಯ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡುತ್ತಾರೆ. ಚಾಮರಾಜಪೇಟೆಯಲ್ಲೂ ಇದೇ ರೀತಿ ಆಚರಣೆ ನಡೆಯುತ್ತದೆ.
ಜೆಜೆ ನಗರದಲ್ಲಿ ಮೂವರು ಮುಸ್ಲಿಂ ಹುಡುಗರಿಗೆ ತರಬೇತಿ ಕೊಟ್ಟು ಕಲ್ಲು ಹೊಡೆಯಲು ಕಳುಹಿಸಿದ್ದಾರೆ. ಭಕ್ತರು ದೇವಸ್ಥಾನಕ್ಕೆ ಹೋಗಿ ಸುಮ್ಮನೆ ಬರುವಾಗ ದಾಳಿ ಮಾಡಿದ್ದಾರೆ. ದಾಳಿಗೆ ಒಳಗಾದ ಕಾಲೇಜಿನ ಯುವತಿ ಮಾನಸಿಕ ಆಘಾತಕ್ಕೆ ಒಳಗಾಗಿದ್ದಾರೆ.
ಮಾಧ್ಯಮಗಳ ಮುಂದೆ ಬಂದರೆ ನಂತರ ಮುಖ ತೋರಿಸಲು ಸಾಧ್ಯವಿಲ್ಲ ಎಂದು ಆಕೆ ಭಯ ಪಡುತ್ತಿದ್ದಾಳೆ. ಅವರಿಗೆ ಎಲ್ಲ ಬಗೆಯ ಚಿಕಿತ್ಸೆ ನೀಡಲು ಸಹಕಾರ ನೀಡಲಾಗುವುದು ಎಂದು ತಿಳಿಸಿದ್ದೇವೆ ಎಂದರು.
ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಇವರನ್ನು ಯಾರೂ ಕೇಳುವವರಿಲ್ಲ. ಚಾಮರಾಜಪೇಟೆಯಲ್ಲೇ ಈ ಹಿಂದೆ ಹಸುವಿನ ಕೆಚ್ಚಲು ಕೊಯ್ದ ಘಟನೆ ನಡೆದಿತ್ತು. ಇಂತಹ ಕೃತ್ಯ ಎಸಗಲು ಪಾಕಿಸ್ತಾನ, ಬಾಂಗ್ಲಾದೇಶದಿಂದ ಹಣ ಬರುತ್ತದೆ. ಕಲ್ಲು ಹೊಡೆದ ಬಳಿಕ ಜಾಮೀನು ಪಡೆದು ಹೊರಗೆ ಬರುತ್ತಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಪೊಲೀಸರು ಅಮಾಯಕರನ್ನು ರಕ್ಷಣೆ ಮಾಡುತ್ತಿಲ್ಲ. ಅಮಾಯಕರಿಗೆ ಭಯ ಮೂಡಿಸುವ ಕೆಲಸ ನಡೆಯುತ್ತಿದೆ. ಇಂತಹ ದುಷ್ಕರ್ಮಿಗಳನ್ನು ಜೈಲಿಂದ ಬಿಡಿಸಲು ಲಾಯರ್‌ಗಳೂ ಬರುತ್ತಾರೆ. ಇದು ಮುಸ್ಲಿಮರನ್ನು ಓಲೈಕೆ ಮಾಡುವ ಸರ್ಕಾರ. ಈ ದುರುಳರು ತೊಲಗುವವರೆಗೂ ಹಿಂದೂಗಳಿಗೆ ನೆಮ್ಮದಿಯಿಲ್ಲ.
ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸದೇ ಇದ್ದರೆ ಓಂ ಶಕ್ತಿ ಸಂಘಗಳ ಮೇಲೆ ದಾಳಿಗಳು ನಡೆಯುತ್ತವೆ. ಈ ಸಂಘಗಳು ಕೂಡ ಬೀದಿಗಿಳಿದು ಹೋರಾಟ ಮಾಡಬೇಕಿದೆ ಎಂದರು.
ಬೀದರ್ ಕೆಡಿಪಿ ಸಭೆಯಲ್ಲಿ ಬಿಜೆಪಿ ಶಾಸಕರ ಮೇಲೆ ಹಲ್ಲೆ ಯತ್ನ ನಡೆದಿದೆ. ಆದರೆ ಸಚಿವರು ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದರು. ಮತ್ತೊಂದು ಕಡೆ ಕಾಂಗ್ರೆಸ್‌ನವರು ಕೇಂದ್ರ ಸಚಿವ ವಿ.ಸೋಮಣ್ಣನವರ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿ ಚೇರ್ ಎಸೆದಿರುವುದು ಕಂಡುಬಂದಿದೆ. ಶಾಸಕರಿಗೆ, ಕೇಂದ್ರದ ಸಚಿವರಿಗೆ ರಕ್ಷಣೆ ನೀಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ.
ರಾಜ್ಯದಲ್ಲಿ ಗೃಹ ಇಲಾಖೆಯನ್ನು ಸಿಎಂ ನಡೆಸುತ್ತಾರೆಯೇ, ಅಥವಾ ಜಿಲ್ಲೆಗೆ ಒಬ್ಬ ಗೃಹಸಚಿವರು ಇದ್ದಾರೆಯೇ ಎಂದು ಅನ್ನಿಸುತ್ತಿದೆ. ಸಿಎಂ ಡಿಸಿಎಂ ನಡುವಿನ ಕಲಹದಲ್ಲಿ ಪೊಲೀಸ್ ಇಲಾಖೆಯಲ್ಲಿ ಹೊಸ ನೇಮಕ ನಡೆಯುತ್ತಿಲ್ಲ. ವರ್ಗಾವಣೆ ದಂಧೆ ಮಾತ್ರ ನಡೆಯುತ್ತಿದೆ ಎಂದರು.