ಢಾಕಾ: ನೆರೆಯ ಬಾಂಗ್ಲಾದೇಶದಲ್ಲಿ (Bangladesh) ಹಿಂದೂಗಳ (Hindus) ಮೇಲಿನ ಪೈಶಾಚಿಕ ದಾಳಿ ಮುಂದುವರಿದಿದ್ದು, ಕಳೆದ 24 ಗಂಟೆಗಳಲ್ಲಿ ಪತ್ರಿಕೆಯೊಂದರ ಸಂಪಾದಕ ಮತ್ತು ದಿನಸಿ ಅಂಗಡಿಯ ಮಾಲೀಕ ಸೇರಿದಂತೆ ಇಬ್ಬರು ಹಿಂದೂಗಳನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.
ಕಳೆದ 18 ದಿನಗಳಲ್ಲಿ ನಡೆದ ಹಿಂದೂ ಸಮುದಾಯದವರ ಆರನೇ ಹತ್ಯೆ ಪ್ರಕರಣ ಇದಾಗಿದೆ. ಇದೇ ವೇಳೆ 40 ವರ್ಷದ ಹಿಂದೂ ವಿಧವೆಯೊಬ್ಬರ ಮೇಲೆ ಇಬ್ಬರು ದುಷ್ಕರ್ಮಿಗಳು ಅತ್ಯಾಚಾರ ಎಸಗಿದ್ದು, ಮಾತ್ರವಲ್ಲದೇ ಆಕೆಯ ಕೂದಲನ್ನು ಕತ್ತರಿಸಿ, ಮರಕ್ಕೆ ಕಟ್ಟಿಹಾಕಿ, ಹಣಕ್ಕೆ ಬೇಡಿಕೆ ಇಟ್ಟ ಘಟನೆಯೂ ವರದಿಯಾಗಿದೆ.
ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ರಾಜಧಾನಿ ಢಾಕಾಗೆ ಸಮೀಪದಲ್ಲಿರುವ ನರಸಿಂಗಿ ಜಿಲ್ಲೆಯ ಪಲಾಶ್ ಉಪಜಿಲ್ಲಾದ ಚೋರ್ಸಿಂ ದೂರ್ ಬಜಾರ್‌ನಲ್ಲಿ ದಿನಸಿ ಅಂಗಡಿ ಮಾಲೀಕ ಶರತ್ ಚಕ್ರವರ್ತಿ ಮೋನಿ ಮೇಲೆ ದುಷ್ಕರ್ಮಿಗಳು ಹರಿತ ವಾದ ಆಯುಧದಿಂದ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮೋನಿಯನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.
ಇದಕ್ಕೂ ಕೆಲವು ಗಂಟೆಗಳ ಮೊದಲು, ಸೋಮವಾರ ಸಂಜೆ 6 ಗಂಟೆ ಸುಮಾರಿಗೆ, ಜರ್ಶೋ ಜಿಲ್ಲೆಯ ಮಣಿರಾಂಪುರ ಉಪಜಿಲ್ಲೆಯ ಕೊಪಾ ಲಿಯಾ ಬಜಾರ್‌ನಲ್ಲಿ 45 ವರ್ಷದ ರಾಣಾ ಪ್ರತಾಪ್ ಬೈರಾಗಿ ಅವರನ್ನು ಬರ್ಬರವಾಗಿ ಗುಂಡಿಕ್ಕಿ ಕೊಲ್ಲಲಾಗಿದೆ.
ರಾಣಾ ಪ್ರತಾಪ್ ನರೈಲ್ ಜಿಲ್ಲೆಯಿಂದ ಪ್ರಕಟವಾಗುವ ಕಾರ್ಯನಿರ್ವಾಹಕ ದಿನಪತ್ರಿಕೆಯ ಸಂಪಾದಕ ರಾಗಿದ್ದು, ಐಸ್ ಕಾರ್ಖಾನೆಯನ್ನು ಹೊಂದಿದ್ದರು.
ಸ್ಥಳೀಯರ ಹೇಳಿಕೆಗಳ ಮಾಹಿತಿಗಳ ಪ್ರಕಾರ, ಕೆಲವು ಪುರುಷರು ಬೈಕ್‌ನಲ್ಲಿ ಬಂದು ಅವರನ್ನು ಕಾರ್ಖಾನೆಯಿಂದ ಹೊರ ಗೆಳೆದು, ಒಂದು ಗಲ್ಲಿಗೆ ಕರೆದೊಯ್ದು ಅವರ ತಲೆಗೆ ಹಲವು ಬಾರಿ ಗುಂಡು ಹಾರಿಸಿದ್ದರು. ಅಷ್ಟೇ ಅಲ್ಲದೆ ಕುತ್ತಿಗೆ ಕೊಯ್ದು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸರು ದೇಹದಿಂದ ಏಳು ಖಾಲಿ ಕಾರ್ಟ್ರಿಡ್ಜ್‌ಗಳನ್ನು ವಶ ಪಡಿಸಿಕೊಂಡಿದ್ದಾರೆ. ಪ್ರತಾಪ್ ಅವರ ತಲೆಗೆ ಮೂರು ಗುಂಡುಗಳು ತಗುಲಿವೆ ಎಂದು ಹಿರಿಯ ಅಧಿಕಾರಿ ಯೊಬ್ಬರು ದೃಢಪಡಿಸಿದ್ದಾರೆ.
ಯೂನಸ್ ನೇತೃತ್ವದ ಮಧ್ಯಂತರ ಸರಕಾರದ ಅವಧಿಯಲ್ಲಿ ಬಾಂಗ್ಲಾದೇಶ ದಲ್ಲಿ ಅಲ್ಪಸಂಖ್ಯಾತರ ಮೇಲೆ 2,900ಕ್ಕೂ ಹೆಚ್ಚು ಹಿಂಸಾಚಾರದ ಘಟನೆಗಳು ನಡೆದಿವೆ. ಇದರ ನಡುವೆ ಭಾರತ ಮೋದಿ ಸರ್ಕಾರ ಹಿಂದೂಗಳ ರಕ್ಷಣೆಗೆ ಯಾವುದೇ ಕ್ರಮಕೈಗೊಳ್ಳದೆ ಉಳಿದಿದೆ ಎಂಬ ಆಕ್ರೋಶದ ಮಾತುಗಳು ಕೇಳಿಬಂದಿದೆ.