ದೊಡ್ಡಬಳ್ಳಾಪುರ: ಕಮಲ-ದಳ ಮೈತ್ರಿ ಬಳಿಕ ಕೆಳಹಂತದಲ್ಲಿ ಜಾತ್ಯತೀತ ಜನತಾದಳ (JDS) ಪಕ್ಷಕ್ಕೆ ಉಂಟಾಗಿರುವ ಪೆಟ್ಟನ್ನು ಸರಿ ಪಡಿಸಲು, ಅಸ್ತಿತ್ವವನ್ನು ಸಾರಲು ಪಕ್ಷದ ವರಿಷ್ಠರು ರಾಜ್ಯಾದ್ಯಂತ ಕಾರ್ಯಕರ್ತರ ಸಭೆಯನ್ನು ಆಯೋಜಿಸುತ್ತಿದ್ದಾರೆ.
ಅಂತೆಯೇ ದೊಡ್ಡಬಳ್ಳಾಪುರ ತಾಲ್ಲೂಕಿನ ಪಕ್ಷದ ಸಂಘಟನೆ ಹಾಗೂ ಬಲವರ್ಧನೆಯ ಕಾರ್ಯಕರ್ತರ ಸಭೆಯನ್ನು ಇದೇ ತಿಂಗಳ 10ರಂದು ನಗರದ ಒಕ್ಕಲಿಗರ ಸಮುದಾಯ ಭವದಲ್ಲಿ ಆಯೋಜಿಲಾಗಿದ್ದು, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜೆ.ಕೆ. ಕೃಷ್ಣಾ ರೆಡ್ಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ.
ಬಿ.ಮುನೇಗೌಡರ ಕಡೆಗಣನೆ …?
ಆದರೆ ದೊಡ್ಡಬಳ್ಳಾಪುರದಲ್ಲಿ ಕೆಲ ಮುಖಂಡರ ಕಡೆಗಣಿಸಿ ಕಾರ್ಯಕರ್ತರ ಸಭೆಯ ಆಯೋಜನೆ ಮಾಡಿರುವುದು ತೀವ್ರ ಆಕ್ಷೇಪ ಮತ್ತು ಅಸಮಾಧಾನಕ್ಕೆ ಕಾರಣವಾಗಿದ್ದು, ಜೆಡಿಎಸ್ ಪಕ್ಷವನ್ನು ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಬಿಜೆಪಿ ಜೊತೆ ವಿಲೀನ ಮಾಡಲು ಕೆಲವರು ಷಡ್ಯಂತ್ರ ರೂಪಿಸಿದ್ದಾರೆ ಎಂಬ ಮಾತುಗಳು ವ್ಯಾಪಕವಾಗಿದೆ.
ಈಗಾಗಲೇ ಜೆಡಿಎಸ್ ಪಕ್ಷ ಸಂಘಟನೆ ವಿಚಾರವಾಗಿ ಕಳೆದ 25ಕ್ಕೂ ಹೆಚ್ಚು ವರ್ಷಗಳಿಂದ ಬಿ.ಮುನೇಗೌಡ ಶ್ರಮಿಸುತ್ತಿದ್ದಾರೆ. ಅವರೊಂದಿಗೆ ಹರೀಶ್ ಗೌಡ, ದಿ. ಹೆಚ್.ಅಪ್ಪಯಣ್ಣ, ಎ.ನರಸಿಂಹಯ್ಯ, ಲಕ್ಷ್ಮೀಪತಯ್ಯ, ಹುಸ್ಕೂರು ಆನಂದ್, ಡಾ.ವಿಜಯ ಕುಮಾರ್, ಕುಂಟನಹಳ್ಳಿ ಮಂಜುನಾಥ್ ಸೇರಿ ಅನೇಕರು ಇದ್ದಾರೆ.
ಆದರೆ ಕೇವಲ ಬಾಶೆಟ್ಟಿಹಳ್ಳಿ ಚುನಾವಣೆ ಫಲಿತಾಂಶದ ಹಿನ್ನಡೆಯನ್ನು ಮುಂದು ಮಾಡಿ ಏಕಾಏಕಿ ಬಿ.ಮುನೇಗೌಡ ಅವರನ್ನು ಪಕ್ಷದಿಂದ ಬದಿಗೆ ಸರಿಸಲು ಕೆಲವರು ಷಡ್ಯಂತ್ರ ರೂಪಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ.
ಈ ಹಿನ್ನೆಲೆಯಲ್ಲಿ ಬಿ.ಮುನೇಗೌಡ ಹಾಗೂ ಅವರ ಬೆಂಬಲಿಗರು ಬೇಸರಗೊಂಡಿದ್ದಾರೆ ಎನ್ನಲಾಗುತ್ತಿದ್ದು, ಜ.10ರಂದು ಆಯೋಜಿಸಲಾಗಿರುವ ಕಾರ್ಯಕರ್ತರ ಸಭೆಗೆ ಬಿ.ಮುನೇಗೌಡ ಹಾಗೂ ಬೆಂಬಲಿಗರು ಹಾಜರಾಗುವರೇ..? ಇಲ್ಲವೇ..? ಎಂಬ ಆತಂಕದ ಮಾತುಗಳು ಕಾರ್ಯಕರ್ತರಲ್ಲಿ ಕೇಳಿಬರುತ್ತಿದೆ.
ಒಟ್ಟಾರೆ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ಚುನಾವಣೆ ಫಲಿತಾಂಶ ರಾಜ್ಯಮಟ್ಟದಲ್ಲಿ ಜೆಡಿಎಸ್-ಬಿಜೆಪಿ ನಡುವೆ ಅಸಮಾಧಾನಕ್ಕೆ ಕಾರಣವಾಗಿದ್ದರೆ, ದೊಡ್ಡಬಳ್ಳಾಪುರದಲ್ಲಿ ಬಿ.ಮುನೇಗೌಡ ಅವರಂತಹ ನಾಯಕರುಗಳನ್ನೆ ಬದಿಗೆ ಸರಿಸಲು ಮುಂದಾಗಿರುವ ಬೆಳವಣಿಗೆ ತೀವ್ರ ಆಕ್ರೋಶ ಹಾಗೂ ಚರ್ಚೆಗೆ ಕಾರಣವಾಗಿದ್ದು, ಜ.10ರ ಸಭೆಯ ವೇಳೆಗೆ ಎಲ್ಲಾ ಅಸಮಾಧಾನ ಶಮನವಾಗುವುದೇ ಕಾದು ನೋಡಬೇಕಿದೆ.