ದೊಡ್ಡಬಳ್ಳಾಪುರ (Doddaballapura): ಬಳ್ಳಾರಿ, ಬೀದರ್ ಬಳಿಕ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಬೀದಿ ಕಾಳಗ ದೊಡ್ಡಬಳ್ಳಾಪುರಕ್ಕೂ ಕಾಲಿಡುವ ಲಕ್ಷಣ ಕಂಡುಬಂದಿದೆ.
ಹೌದು ಇಂದು ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ಎದುರು ನೇಕಾರ ಭವನ ಶಂಕುಸ್ಥಾಪನಾ ಕಾರ್ಯಕ್ರಮವನ್ನು ನಿಗದಿಯಂತೆ ಶಾಸಕ ಧೀರಜ್ ಮುನಿರಾಜು ನೆರವೇರಿಸಿದರು.
ಆದರೆ ಈ ಕಾರ್ಯಕ್ರಮದಲ್ಲಿ ಚುನಾಯಿತ ಜನಪ್ರತಿನಿದಿಗಳಿಗೆ ಅಹ್ವಾನ ನೀಡದೆ, ಪ್ರೋಟೋಕಾಲ್ ಗಾಳಿಗೆ ತೂರಿ ಬಿಜೆಪಿ ಪಕ್ಷದ ಕಾರ್ಯಕ್ರಮವಾಗಿ ಶಂಕುಸ್ಥಾಪನೆ ನಡೆಸುತ್ತಿದ್ದಾರೆಂದು ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಪಟ್ಟಿ ಧರಿಸಿ, ಟಿಬಿ ವೃತ್ತದಿಂದ ಕಾರ್ಯಕ್ರಮ ಸ್ಥಳದಲ್ಲಿ ಪ್ರತಿಭಟನೆ ನಡೆಸಲು ಮುಂದಾದರು.
ಮಾಜಿ ಶಾಸಕ ಟಿ.ವೆಂಕಟರಮಣಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಶಾಸಕ ಧೀರಜ್ ಮುನಿರಾಜು ಅವರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಹರಸಾಹಸ ಪಡುವಂತಾಯಿತು. ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶದಿಂದ ಟಿಬಿ ವೃತ್ತದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಏಕಾಏಕಿ ಕಾರ್ಯಕ್ರಮ ನಿಗದಿ..?
ನೇಕಾರ ಭವನ ಶಂಕುಸ್ಥಾಪನೆ ಕಾರ್ಯಕ್ರಮ ನಿನ್ನೆ ಏಕಾಏಕಿ ನಿಗದಿಯಾಗಿದ್ದು, ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂಬುದು ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಯಿತು.
ಈ ಹಿನ್ನೆಲೆಯಲ್ಲಿ ಇಂದು ಪ್ರತಿಭಟನೆ ನಡೆಸಲಾಗಿದ್ದು, ಶುಕ್ರವಾರ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್. ಮುನಿಯಪ್ಪ ಅವರಿಂದ ಮತ್ತೆ ಶಂಕುಸ್ಥಾಪನೆ ನೆರವೇರಿಸಲು ತೀರ್ಮಾನಕ್ಕೆ ಬರಲಾಗಿದೆ.