ಕೆ.ಎಂ.ಸಂತೋಷ್, ಆರೂಢಿ (Doddaballapura): ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಶಾಸಕರು, ಕಾರ್ಯಕರ್ತರ ನಡುವೆ ಬಡಿದಾಟದ ಹಂತಕ್ಕೆ ತಲುಪಿ, ಓರ್ವ ಕಾಂಗ್ರೆಸ್ ಕಾರ್ಯಕರ್ತನ ಹತ್ಯೆಗೆ ಕಾರಣವಾಗಿದೆ.
ಇದರ ನಡುವೆ ಇಂದು ನೇಕಾರರ ಭವನ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಏಕಾಏಕಿ ನಿರ್ಣಯಿಸಿ, ಜಿಲ್ಲಾ ಉಸ್ತುವಾರಿ ಸಚಿವರು, ಯೋಜನಾ ಪ್ರಾಧಿಕಾರದ ಅಧ್ಯಕ್ಷರು, ಗ್ಯಾರಂಟಿ ಯೋಜನೆ ಅನುಷ್ಠಾನದ ಅಧ್ಯಕ್ಷರು, ನಗರಸಭೆ ಸದಸ್ಯರನ್ನು ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ದೊಡ್ಡಬಳ್ಳಾಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕಪ್ಪುಪಟ್ಟಿ ಧರಿಸಿಕೊಂಡು ಪ್ರವಾಸಿ ಮಂದಿರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ನೇಕಾರರ ಭವನ ನಿರ್ಮಾಣಕ್ಕೆ ಶಾಸಕ ಧೀರಜ್ ಮುನಿರಾಜು ಅವರು ಶಂಕುಸ್ಥಾಪನೆ ನೆರವೇರಿಸುತ್ತಿದ್ದ ಸ್ಥಳದ ಕಡೆಗೆ ಕಾಂಗ್ರೆಸ್ ಕಾರ್ಯಕರ್ತರು ಕೈ ತೋಳಿಗೆ ಕಪ್ಪು ಬಟ್ಟೆ ಕಂಟ್ಟಿಕೊಂಡು ನುಗ್ಗಲು ಪ್ರಯತ್ನಿಸಿದರು.
ಈ ವೇಳೆ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರನ್ನು ತಡೆಯುತ್ತಿದ್ದಂತೆ ಪ್ರವಾಸಿ ಮಂದಿರ ವೃತ್ತದಲ್ಲೇ ರಸ್ತೆ ತಡೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿ, ಸರ್ವಾಧಿಕಾರಿಗಳಂತೆ ಶಿಷ್ಟಾಚಾರ ಉಲ್ಲಂಘಿಸಿರುವ ಶಾಸಕ ಧೀರಜ್ ಮುನಿರಾಜು ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಶಾಸಕರಿಂದ ಸರ್ವಾಧಿಕಾರಿ ವರ್ತನೆ ಆರೋಪ
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಟಿ.ವೆಂಕಟರಮಣಯ್ಯ, ನಾನು ಶಾಸಕನಾಗಿದ್ದ ಅವಧಿಯಲ್ಲಿ ನೇಕಾರರ ಅನುಕೂಲಕ್ಕಾಗಿ ವಾಣಿಜ್ಯ ಮಳಿಗೆ ನಿರ್ಮಿಸಲು ಆಯಕಟ್ಟಿನ ಸ್ಥಳದಲ್ಲಿ 10 ಗುಂಟೆ ಜಮೀನನ್ನು ಅಂದಿನ ಜಿಲ್ಲಾಧಿಕಾರಿ ಕರೀಗೌಡ ಅವರು ಮೀಸಲಿರಿಸಿದ್ದರು. ಅಭಿವೃದ್ಧಿ ಕೆಲಸಗಳಿಗೆ ಸದಾ ನಮ್ಮ ಬೆಂಬಲ ಇದೆ. ಆದರೆ ಶಾಸಕರು ಶಿಷ್ಟಾಚಾರವನ್ನು ಉಲ್ಲಂಘಿಸಿ ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಿ.ಚುಂಚೇಗೌಡ, ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ, ಗ್ಯಾರಂಟಿ ಯೋಜನೆ ಅನುಷ್ಠಾನದ ಅಧ್ಯಕ್ಷ ವಿಶ್ವನಾಥ ರೆಡ್ಡಿ, ದೊಡ್ಡಬಳ್ಳಾಪುರ ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಎಂ.ಬೈರೇಗೌಡ, ನಗರ ಬ್ಲಾಕ್ ಅಧ್ಯಕ್ಷ ಕೆ.ಪಿ.ಜಗನ್ನಾಥ್, ಕಾರ್ಯದರ್ಶಿ ಜವಾಜಿರಾಜೇಶ್, ಕಸಬಾ ಬ್ಲಾಕ್ ಅಧ್ಯಕ್ಷ ಅಪ್ಪಿವೆಂಕಟೇಶ್, ಕಾರ್ಯದರ್ಶಿ ಅಶೋಕ್, ಕಾಂಗ್ರೆಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ಶರತ್ ಪಾಟೇಲ್, ತಳಗವಾರ ಪುನಿತ್, ಕಸಬಾ ಹೋಬಳಿ ಅಧ್ಯಕ್ಷ ಜಯಸಿಂಹ ಹಾಗೂ ಮಹಿಳಾ ಘಟಕದ ಮುಖಂಡರು, ನಗರ ಸಭಾ ಸದಸ್ಯರು ಇದ್ದರು.
ಶಂಕುಸ್ಥಾಪನೆ ನಿರ್ವಿಘ್ನ
ಮತ್ತೊಂದೆಡೆ ಕಾಂಗ್ರೆಸ್ ಆಕ್ರೋಶದ ನಡುವೆಯೂ ದೊಡ್ಡಬಳ್ಳಾಪುರ ನಗರದ ಹಿಂದೂಪುರ ಬೆಂಗಳೂರು ರಾಜ್ಯ ಹೆದ್ದಾರಿಯ ಡಿ.ಕ್ರಾಸ್ ಸಮೀಪ ದೊಡ್ಡಬಳ್ಳಾಪುರ ನೇಕಾರರು ನೇಯುವ ಸೀರೆಗಳ ಮಾರಾಟಕ್ಕಾಗಿ ವಾಣಿಜ್ಯ ಮಳಿಗೆಗಳ ನೇಕಾರ ಭವನ ನಿರ್ಮಾಣಕ್ಕೆ ಶಾಸಕ ಧೀರಜ್ ಮುನಿರಾಜ್ ಶಂಕುಸ್ಥಾಪನೆ ನೆರವೇರಿಸಿದರು.
ನೇಕಾರ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಶಾಸಕ ಧೀರಜ್ ಮುನಿರಾಜ್, ಧರ್ಮಾವರಂ, ಕಂಚಿ ಸೇರಿದಂತೆ ಇತರೆಡೆಗಳಲ್ಲಿ ಸ್ಥಳೀಯವಾಗಿ ನೇಯುವ ಸೀರೆಗಳ ಮಾರಾಟಕ್ಕಾಗಿಯೇ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ. ಅದೇ ಮಾದರಿಯಲ್ಲಿಯೇ ರಾಜ್ಯ ಹೆದ್ದಾರಿ ಅಂಚಿನ 10 ಗುಂಟೆ ಪ್ರದೇಶದಲ್ಲಿ ಎರಡು ಹಂತಸ್ತಿನಲ್ಲಿ 30 ಮಳಿಗೆಗಳನ್ನು ನಿರ್ಮಿಸಲಾಗುವುದು.
ಮೊದಲ ಹಂತದಲ್ಲಿ ₹1.25 ಕೋಟಿ ವೆಚ್ಚದಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ. ಸರ್ಕರದ ಜವಳಿ ಇಲಾಖೆಯಿಂದ ಹಂತ ಹಂತವಾಗಿ ಹಣ ತರುವ ಮೂಲಕ ಭವನದ ಕಾಮಗಾರಿಯನ್ನು ತ್ವರಿತವಾಗಿ ಮುಕ್ತಾಯಗೊಳಿಸಲಾಗುವುದು.
ಸ್ಥಳೀಯವಾಗಿ ನೇಯುವ ಸೀರೆಗಳ ಮಾರಾಟಕ್ಕೆ ಹಾಗೂ ಸ್ಥಳೀಯ ನೇಕಾರರಿಗೆ ಮಾತ್ರ ಇಲ್ಲಿನ ಮಳಿಗೆಗಳನ್ನು ನೀಡಲಾಗುವುದು ಎಂದರು.
ಫೆಬ್ರುವರಿ 21ರಂದು ನಡೆಯಲಿರುವ ಕೊಂಗಾಡಿಯಪ್ಪ ಜನ್ಮದಿನಾಚರಣೆ ಅಂಗವಾಗಿ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಸ್ಥಳೀಯ ನೇಕಾರರು ನೇಯ್ದಿರುವ ಸೀರೆಗಳ ಬೃಹತ್ ಮಾರಾಟ ಮೇಳವನ್ನು ಆಯೋಜಿಸಲು ಸಿದ್ದತೆಗಳು ನಡೆಯುತ್ತಿವೆ.
ಈ ಮೇಳದಿಂದ ಬಿಕ್ಕಟ್ಟಿಗೆ ಸಿಲುಕಿರುವ ನೇಕಾರಿಕೆ ಉಳಿವಿಗೆ ಹಾಗೂ ಸೀರೆಗಳ ಮಾರಾಟಕ್ಕೆ ವೇದಿಕೆ ದೊರೆಯಲಿದೆ. ದೊಡ್ಡಬಳ್ಳಾಪುರ ಸೀರೆಗೆ ರಾಜ್ಯಮಟ್ಟದಲ್ಲಿ ಬ್ರ್ಯಾಂಡ್ ದೊರೆಯಲು ಸಹಕಾರಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಮಿತ್ರಾಆನಂದ್, ದೇವಾಂಗ ಮಂಡಳಿ ಅಧ್ಯಕ್ಷ ಎಂ.ಜಿ.ಶ್ರೀನಿವಾಸ್, ನಗರಸಭಾ ಸದಸ್ಯರು ಇದ್ದರು.
ಮತ್ತೆ ಶಂಕುಸ್ಥಾಪನೆ
ಈ ವೇಳೆ ಎಲ್ಲಾ ಬೆಳವಣಿಗೆ ನಡುವೆ ಬೆಂಗಳೂರು ಗ್ರಾಮಾಂತರ ಜಿಲ್ಕಾ ಉಸ್ತುವಾರಿ ಸಚಿವ ಕೆ.ಹೆಚ್. ಮುನಿಯಪ್ಪ ಅವರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರ ಕಡೆಗಣಿಸಿ, ಬಿಜೆಪಿ ಶಾಸಕ ಹೇಳಿದ್ದನ್ನೇ ನಂಬುತ್ತಿರುವ ಕುರಿತಂತೆ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ.
ಈ ಕುರಿತಂತೆ ಸಚಿವರನ್ನು ಯುವ ಮುಖಂಡರು ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಸುಳ್ಳು ಮಾಹಿತಿ ನೀಡಿದ ಕಾರಣ ಕಾರ್ಯಕ್ರಮ ಮಾಡಲಿ ಎಂದುಕೊಂಡಿದ್ದೆ. ಆದರೆ ಇಷ್ಟು ದೊಡ್ಡ ಹಿನ್ನಲೆ ಹೊಂದಿದೆ ಎಂದು ತಿಳಿದಿರಲಿಲ್ಲ.
ಈ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಅಧಿಕೃತವಾಗಿ ಶುಕ್ರವಾರ ನಡೆಸಲು ಸಿದ್ಧತೆ ಮಾಡಿಕೊಳ್ಳಲು ಸೂಚನೆ ನೀಡುವುದಾಗಿ ಕೆ.ಹೆಚ್.ಮುನಿಯಪ್ಪ ಹೇಳಿದ್ದಾರೆಂದು ತಿಳಿದುಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ಕರೀಗೌಡರ ಕುರಿತು ಚರ್ಚೆ
ಬೆಳಗ್ಗೆಯಿಂದ ನಡೆದ ಈ ಹೈಡ್ರಾಮಾಗಳ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಮಾಜಿ ಜಿಲ್ಲಾಧಿಕಾರಿ ಕರೀಗೌಡರ ಚರ್ಚೆ ವ್ಯಾಪಕವಾಗಿದ್ದು, ನೇಕಾರರ ಭವನ ಶಂಕುಸ್ಥಾಪನೆಗೆ ಜಮೀನು ಮೀಸಲಿಟ್ಟು, ಈ ಯೋಜನೆಗೆ ಮೂಲವಾಗಿ ಚಾಲನೆ ನೀಡಿದವರು ಕರೀಗೌಡ ಅವರು ಎಂಬ ಮಾತುಗಳು ವ್ಯಾಪಕವಾಗಿದೆ.