ಕೆ.ಎಂ.ಸಂತೋಷ್, ಆರೂಢಿ: ನಿನ್ನೆಯಷ್ಟೇ ನೇಕಾರರ (Weavers) ಭವನ ಶಂಕುಸ್ಥಾಪನೆ ವಿಚಾರ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹೈಡ್ರಾಮವನ್ನೆ ಸೃಷ್ಟಿಸಿ ತಣ್ಣಗಾಗಿದೆ.
ಇದರ ಬೆನ್ನಲ್ಲೇ ನಾಳೆ (ಡಿ.09) ಮತ್ತೆ ಅಧಿಕೃತವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್. ಮುನಿಯಪ್ಪ ಅವರು ನೇಕಾರರ ಭವನ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಡಿ.09 ರಂದು ಬೆಳಗ್ಗೆ 9 ಗಂಟೆಗೆ ದೊಡ್ಡಬಳ್ಳಾಪುರದ ಪ್ರವಾಸಿ ಮಂದಿರಕ್ಕೆ ಬರುವ ಸಚಿವರು, ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಸೇರಿದಂತೆ ಸ್ಥಳೀಯ ಮುಖಂಡರ ಸಭೆ ನಡೆಸಲಿದ್ದಾರೆ.
ಬಳಿಕ 10 ಗಂಟೆಗೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ಮುಂಭಾಗದಲ್ಲಿ ಆಗಿನ ಜಿಲ್ಲಾಧಿಕಾರಿ ನಿಗದಿ ಪಡಿಸಿದ್ದ 10 ಗುಂಟೆ ಜಮೀನಿನಲ್ಲಿ ನೇಕಾರರ ಭವನ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಇನ್ನೂ ಈ ಕಾರ್ಯಕ್ರಮಕ್ಕೆ ಶಾಸಕ ಧೀರಜ್ ಮುನಿರಾಜು ಹಾಗೂ ಬೆಂಬಲಿಗರು ಸಚಿವರಿಗೆ ಅಭಿನಂದನೆ ಸಲ್ಲಿಸಲು ಭಾಗವಹಿಸಲಿದ್ದು, ಈ ಕುರಿತಂತೆ ಬಿಜೆಪಿ ಕಾರ್ಯಕರ್ತರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕರೆ ನೀಡಲಾಗಿದೆ.
ಈಗಾಗಲೇ ನಿನ್ನೆಯ ಶಂಕುಸ್ಥಾಪನೆಗೆ ಪ್ರೋಟೋಕಾಲ್ ಉಲ್ಲಂಘನೆ ಮಾಡಲಾಗಿದೆ ಎಂದು ಕಾಂಗ್ರೆಸಿಗರು ಕೆರಳಿ ಪ್ರತಿಭಟನೆ ನಡೆಸಿದ್ದಾರೆ. ಇದರ ನಡುವೆ ನಾಳೆ ಎರಡು ಪಕ್ಷದವರು ಎದುರಾಗುತ್ತಿರುವುದು ಪೊಲೀಸರ ತಲೆ ಬಿಸಿ ಹೆಚ್ಚಿಸಿದೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)