ದೊಡ್ಡಬಳ್ಳಾಪುರ: ಹೈಡ್ರಾಮವನ್ನೆ ಸೃಷ್ಟಿಸಿದ್ದ ನೇಕಾರರ ಭವನ (Weavers Bhavana) ಶಂಕುಸ್ಥಾಪನೆ ವಿಚಾರ ಇಂದು ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಒಟ್ಟಾಗಿ ಶಂಕುಸ್ಥಾಪನೆ ನಡೆಸುವ ಮೂಲಕ ಅಂತ್ಯಗೊಂಡಿದೆ.
ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್. ಮುನಿಯಪ್ಪ, ಸಮನ್ವಯದ ಕೊರತೆಯಿಂದ ಎರಡನೇ ಬಾರಿಗೆ ಶಂಕುಸ್ಥಾಪನೆ ನೆರವೇರಿಸಲು ಕಾರಣವಾಗಿದೆ.
ಶಾಸಕರದ್ದಾಗಲಿ, ಸಚಿವರದ್ದಾಗಲಿ ಎಲ್ಲವೂ ಸರ್ಕಾರದ ಅನುದಾನವೇ ಆಗಿರುತ್ತದೆ, ಇದರಲ್ಲಿ ಪ್ರತಿಷ್ಠೆ ತೋರುವ ಅಗತ್ಯವಿಲ್ಲ.
ನೇಕಾರರ ಭವನ ಸ್ಥಾಪನೆ ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಪಾತ್ರ ಅಪಾರವಾಗಿದ್ದು, ಅವರು 10 ಗುಂಟೆ ಜಮೀನು ಮೀಸಲಿಟ್ಟರು, ಅದೇ ಜಾಗದಲ್ಲಿ ಹಾಲಿ ಶಾಸಕ ಧೀರಜ್ ಮುನಿರಾಜು ಭವನ ನಿರ್ಮಿಸಲು ಮುಂದಾಗಿದ್ದಾರೆ. ಎಲ್ಲರೂ ಮಾಡುವುದು ಅಭಿವೃದ್ಧಿಯ ದೃಷ್ಟಿಯಿಂದ ಮಾತ್ರ ಎಂದರು.
ಈ ವೇಳೆ ಶಾಸಕ ಧೀರಜ್ ಮುನಿರಾಜು, ದೊಡ್ಡಬಳ್ಳಾಪುರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚುಂಚೇಗೌಡ, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವಿಶ್ವನಾಥ ರೆಡ್ಡಿ, ನಗರಸಭೆ ಅಧ್ಯಕ್ಷೆ, ಸದಸ್ಯರು ಸೇರಿದಂತೆ ಅನೇಕರು ಇದ್ದರು.
ಶಂಕುಸ್ಥಾಪನೆ ಬಳಿಕ ಕಾಂಗ್ರೆಸ್ ಮುಖಂಡರು, ನೇಕಾರರ ಸಂಘಟನೆಗಳ ಕಾರ್ಮಿಕರು ಗಡಾರಿ ಹಿಡಿದು ಪೋಟೋಗಳಿಗೆ ಫೋಸ್ ನೀಡಿದ ದೃಶ್ಯ ಕಂಡುಬಂತು.
ಇದಕ್ಕೂ ಮುನ್ನ ಬೆಳಗ್ಗೆ ದೊಡ್ಡಬಳ್ಳಾಪುರದ ಪ್ರವಾಸಿ ಮಂದಿರಕ್ಕೆ ಬಂದ ಸಚಿವ ಕೆ.ಹೆಚ್. ಮುನಿಯಪ್ಪ ಅವರಿಗೆ ಮಾಜಿ ಶಾಸಕ ಟಿ.ವೆಂಕಟರಮಣಯ್ಯ ನೇತೃತ್ವದಲ್ಲಿ ಸ್ವಾಗತ ಕೋರಿದ ಕಾಂಗ್ರೆಸ್ ಮುಖಂಡರು, ಶಾಸಕ ಧೀರಜ್ ಮುನಿರಾಜು ಅವರಿಗೆ ನಿಮಗೆ ಕೊಡ್ತಾ ಇರೋದು ಎಲ್ಲಾ ಅನುದಾನ ಕಾಂಗ್ರೆಸ್ ಸರ್ಕಾರದ್ದು, ನಿಮ್ಮ ಬಿಜೆಪಿಯ ಕೇಂದ್ರ ಸರಕಾರದಿಂದ ಅನುದಾನ ತಂದು ಏನಾದ್ರೂ ಅಭಿವೃದ್ಧಿ ಮಾಡಿ ತೋರಿಸುವಂತೆ ಹೇಳಿ ಎಂದರು.