ಕೆ.ಎಂ.ಸಂತೋಷ್, ಆರೂಢಿ, (ದೊಡ್ಡಬಳ್ಳಾಪುರ): ಜೆಡಿಎಸ್ (JDS) ಮುಖಂಡರ ಒಳಜಗಳ ರಾಜಘಟ್ಟ ಆಂಜನೇಯಸ್ವಾಮಿ ದೇವಸ್ಥಾನದ ಸಮೀಪದಲ್ಲಿನ ಅರಳಿಕಟ್ಟೆಯಲ್ಲಿ ಬೀದಿಗೆ ಬಂದಿದೆ.
ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಯಾವುದೇ ರಾಜಕೀಯ ಪಕ್ಷಗಳು ಚುನಾವಣ ಪ್ರಚಾರ, ನಾಮಪತ್ರ ಸಲ್ಲಿಕೆಗು ಮುನ್ನ ರಾಜಘಟ್ಟದ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆಸಲ್ಲಿಸುವ ಮೂಲಕ ಪ್ರಾರಂಭಿಸಲಾಗುತ್ತದೆ. ಅದೇ ರೀತಿ ಶುಕ್ರವಾರ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಮುನೇಗೌಡ ಅವರು ಇಂದು ದೇವಾಯದಲ್ಲಿ ಪೂಜೆ ಸಲ್ಲಿಸಿ ಬೂತ್ ಮಟ್ಟದ ಸದಸ್ಯರ ನೋಂದಣಿ ಪ್ರಾರಂಭಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಹುಸ್ಕೂರು ಆನಂದ್, ಹರೀಶ್ ಗೌಡ, ವಡ್ಡರಹಳ್ಳಿ ರವಿಕುಮಾರ್, ತ.ನ. ಪ್ರಭುದೇವ ಅವರ ನಡುವಿನ ವಾಗ್ವಾದ ತಾರಕಕ್ಕೆ ಹೋಗಿತ್ತು.
ಅರಳಿಕಟ್ಟೆಯಲ್ಲಿ ಮುಖಂಡರು ವಾಕ್ಸಸಮರ ನಡೆಸುತ್ತಿದ್ದರೆ, ಅರಳಿಕಟ್ಟೆಯ ಮುಂದೆ ನಿಂತಿದ್ದ ಕಾರ್ಯಕರ್ತರು ‘ಪಕ್ಷದಲ್ಲಿನ ಮುಖಂಡರ ಕಿತ್ತಾಟವು ನಾಚಿಕೆಗೇಡಿನ ಸಂಗತಿ. ಇದೇ ರೀತಿ ಮುಂದುವರೆದರೆ ಯಾರೊಬ್ಬರು ಪಕ್ಷದಲ್ಲಿ ಉಳಿಯುವುದಿಲ್ಲ. ನಿಮ್ಮ ಸ್ವಪ್ರತಿಷ್ಠೆಗಳನ್ನು ಬದಿಗಟ್ಟು ಬನ್ನಿ, ಇಲ್ಲವೆ ಮನೆಯಲ್ಲಿ ಇದ್ದುಬಿಡಿ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ವಾಕ್ಸ್ಸಮರ ಕೈ ಮೀರುತ್ತಿರುವದನ್ನು ಅರಿತ ಮುನೇಗೌಡ ಅವರು ಎಲ್ಲರನ್ನೂ ಸಮಾಧಾನಪಡಿಸುವ ಮೂಲಕ ಪಕ್ಷದ ಹಿತದೃಷ್ಠಿಯಿಂದ ಬೀದಿ ಜಗಳ ಬಿಟ್ಟು ಎಲ್ಲರು ಒಂದಾಗಿ ಮುನ್ನಡೆಯಬೇಕಿದೆ ಎಂದರು.
ಬೂತ್ ಮಟ್ಟದಿಂದ ಸದಸ್ಯತ್ವ ನೋಂದಣಿ, ಬೂತ್ ಕಮಿಟಿಯನ್ನು ರಚಿಸುವ ಮೂಲಕ ಪಕ್ಷ ಸಂಘಟನೆಗೆ ಸಜ್ಜಾಗುವಂತೆ ಜೆಡಿಎಸ್ ವರಿಷ್ಠರು ಹಾಗೂ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ಸೂಚನೆಯಂತೆ ಸ್ಥಳೀಯ ಸಂಸ್ಥೆಗಳ ಚುಣಾವಣೆಗಳು ಸಮೀಪಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷ ಸಂಘಟೆನೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡ ಹೇಳಿದರು.
ಪಕ್ಷದಲ್ಲಿ ನಿಷ್ಟಾವಂತ ಕಾರ್ಯಕರ್ತರು ಇದ್ದಾರೆ. ಇವರನ್ನು ಒಗ್ಗೂಡಿಸುವ ಕೆಲಸ ಮಾಡಬೇಕು. ಜ.10 ರಂದು ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯಲಿರುವ ಸಭೆಯಲ್ಲಿ ಎಲ್ಲರೂ ಒಟ್ಟಾಗಿ ಭಾಗವಹಿಸಬೇಕು ಎಂದರು.
ಸಾಮೂಹಿಕ ನಾಯಕತ್ವ: ಹರೀಶ್ ಗೌಡ
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹರೀಶ್ ಗೌಡ, ರಾಷ್ಟ್ರೀಯ ಪಕ್ಷಗಳ ಮಾದರಿಯಲ್ಲಿ ಪಕ್ಷವನ್ನು ಸಂಘಟಿಸಲು ಪಕ್ಷದ ವರಿಷ್ಠರು ನಿರ್ಣಯಿಸಿ, ಇಂದು ಬೂತ್ ಕಮಿಟಿಗೆ, ಸಾಮಾಜಿಕ ಜಾಲತಾಣ ಸಕ್ರಿಯಗೊಳಿಸುವ ನಿಟ್ಟಿನಲ್ಲಿ ಚಾಲನೆ ನೀಡಲಾಗಿದೆ.
ಸಾಮೂಹಿಕ ನಾಯಕತ್ವದಲ್ಲಿ ಮುಂದಿನ ಚುನಾವಣೆಗೆ ಪಕ್ಷವನ್ನು ಸದೃಢಗೊಳಿಸಲು ಎಲ್ಲರು ಪ್ರಾಮಾಣಿಕವಾಗಿ ಸಾಗುತ್ತೇವೆ. ನಾಳೆ ದೊಡ್ಡಬಳ್ಳಾಪುರ ತಾಲೂಕಿಗೆ ಕೋರ್ ಕಮಿಟಿ ರಾಜ್ಯಾಧ್ಯಕ್ಷ ಕೃಷ್ಣಾ ರೆಡ್ಡಿ ಅವರು ಕಾರ್ಯಕರ್ತರ ಸಭೆಗೆ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ ಎಂದರು.
ಆರ್ಭಟದಿಂದ ಏನು ನಡಿಯಲ್ಲ
ರಾಜ್ಯದಲ್ಲಿ ಜೆಡಿಎಸ್ ಪಕ್ಷ ತನ್ನದೇ ಆದ ಶಕ್ತಿಯನ್ನು ಹೊಂದಿದೆ, ಮುಂಬರುವ ದಿನಗಳಲ್ಲಿ ಜನರ ಸೇವೆ ಮೂಲಕ ಜನ ವಿಶ್ವಾಸಗಳಿಸುತ್ತೇವೆ. ಕೋಲಾರದಲ್ಲಿ ಎನ್‌ಡಿಎ ಮೈತ್ರಿ ಮಾಡಿಕೊಂಡ ಬಳಿಕ ಹಾಲಿ ಸಂಸದ ಬಿಜೆಪಿ ಮುನಿಸ್ವಾಮಿ ಇದ್ರು ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ಟಿಕೆಟ್ ನೀಡಲಾಯ್ತು, ಹಾಗೆಯೇ ದೊಡ್ಡಬಳ್ಳಾಪುರ ವಿಧಾನಸಭಾ ಚುನಾವಣೆಯಲ್ಲು ಆಗುತ್ತೆ, ತಾಳ್ಮೆಯಿಂದ ಹೋಗೋಣ ಎಂದರು.
ಪಕ್ಷಕ್ಕೆ ದ್ರೋಹ ಬಗೆದಿರುವ ಗುಂಪನ್ನು ಸರಿದಾರಿಗೆ ತರುತ್ತಿದ್ದಾರೆ: ಹುಸ್ಕೂರು ಆನಂದ್
ಮತ್ತೋರ್ವ ಮುಖಂಡ ಹುಸ್ಕೂರು ಆನಂದ್ ಮಾತನಾಡಿ, ಪಕ್ಷದಲ್ಲಿನ ಮುಖಂಡರ ನಡುವೆ ಇದ್ದ ಮೈತ್ರಿಗೊಂದಲದಿಂದ ಬೇಸತ್ತಿದವರ ಮನವೊಲಿಸಲಾಗಿದ್ದು, ಎಲ್ಲರೂ ಒಂದಾಗಿ ಪಕ್ಷವನ್ನು ಸದೃಢಗೊಳಿಸಲು ಕೈಜೋಡಿಸುತ್ತಿದ್ದಾರೆ. ನಾಳೆ ಜ.10 ರಂದು ನಡೆಯುವ ಕಾರ್ಯಕರ್ತರ ಸಭೆಯಲ್ಲಿ ಎಲ್ಲರೂ ಸೇರಿ ವರಿಷ್ಠರ ಸಲಹೆಯನ್ನು ಸ್ವೀಕರಿಸಲಿದ್ದೇವೆ.
ಹಣ, ಅಧಿಕಾರದ ಆಸೆಗೆ ಪಕ್ಷಕ್ಕೆ ದ್ರೋಹ ಬಗೆದು, ಬೇರೆ ಪಕ್ಷಕ್ಕೆ ಸಹಕಾರ ಮಾಡಿದ ಗುಂಪನ್ನು ಕೃಷ್ಣ ರೆಡ್ಡಿ ಅವರು ಸರಿ ಮಾಡಿ ಜೊತೆ ಗೂಡಿಸುವುದಾಗಿ ಹೇಳಿದಾಗ, ನಾವು ಜೊತೆ ಗೂಡಲೇ ಬೇಕಲ್ಲವೇ. ತಪ್ಪು ಮಾಡೋದು ಸಹಜ, ಅದನ್ನು ತಿದ್ದಿ ನಡೆಯುವುದೆ ಧರ್ಮ. ಆ ರೀತಿ ಅವರು ತಪ್ಪನ್ನು ತಿದ್ದಿಕೊಂಡು ಬರುವುದಾದರೆ ಸ್ವಾಗತ ಮಾಡಿ, ಒಂದಾಗಿ ಸಾಗುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಅಧ್ಯಕ್ಷ ಲಕ್ಷ್ಮೀಪತಯ್ಯ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ದೇವರಾಜಮ್ಮ, ವಕ್ತಾರ ಕುಂಟನಹಳ್ಳಿ ಮಂಜುನಾಥ್, ರಾಜಘಟ್ಟ ಹರೀಶ್, ಹಾಡೋನಹಳ್ಳಿ ನಾಗರಾಜ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಶಿವಣ್ಣ, ಹೋಬಳಿ ಅಧ್ಯಕ್ಷರಾದ ಸತೀಶ್, ರಂಗಸ್ವಾಮಿ, ಸಿದ್ದಪ್ಪ, ಜಗನ್ನಾಥ ಚಾರ್, ಟಿಎಪಿಎಂಸಿ ನಿರ್ದೇಶಕರಾದ ಆನಂದ್, ಪುರುಷೋತ್ತಮ್, ವಕೀಲರಾದ ಚನ್ನೇಗೌಡ, ಮುಖಂಡರಾದ ಮುದ್ದಣ್ಣ, ವೆಂಕಟರಮಣಪ್ಪ, ಅಂಚರಹಳ್ಳಿ ಆನಂದ್, ಕೆಂಪೇಗೌಡ, ಪ್ರಭಾಕರ್, ಧರ್ಮೇಂದ್ರ, ಶಶಿಕಲಾ, ಜ್ಯೋತಿ, ಭಾಗ್ಯಮ್ಮ, ಯುವ ಮುಖಂಡರಾದ ವಿನಯ್, ಅಭಿಜಿತ್ ಗೌಡಹಳ್ಳಿ, ಮನೂ ಗೌಡಹಳ್ಳಿ, ಆರೂಢಿ ಎಸಿ ಹರೀಶ್, ಹೇಮಂತ್ ಮತ್ತಿತರರಿದ್ದರು.