ಬೆಂಗಳೂರು: ದ್ವೇಷಭಾಷಣ ಪ್ರತಿಬಂಧಕ ಮಸೂದೆ ವಾಕ್ ಸ್ವಾತಂತ್ರ್ಯವನ್ನು ಕಸಿಯಲಿದೆ. ಈ ಕುರಿತು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ (R. Ashoka) ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದ್ವೇಷಭಾಷಣ ಪ್ರತಿಬಂಧಕ ಮಸೂದೆಯ ಬಗ್ಗೆ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ನೀಡಬೇಕಿತ್ತು. ಇಂತಹ ಮಸೂದೆ ತರುವಾಗ ಅದು ಜನರ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂದು ನೋಡಬೇಕಾಗುತ್ತದೆ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಮಸೂದೆ ಬಗ್ಗೆ ಚರ್ಚೆ ನಡೆಸಲು ಅವಕಾಶವಿದೆ.
ವಿಧಾನಸಭೆ ಇರುವುದು ಮಸೂದೆ ಮಂಡನೆ ಹಾಗೂ ಚರ್ಚೆಗೇ ಹೊರತು ಗಲಾಟೆ ಮಾಡುವುದಕ್ಕಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಇದರ ಚರ್ಚೆಗೆ ಅವಕಾಶ ನೀಡಲಿಲ್ಲ. ನಾನು ಮಸೂದೆಯ ಬಗ್ಗೆ ಚರ್ಚೆ ಮಾಡಲು ಮುಂದಾದಾಗ ಕಾಂಗ್ರೆಸ್ ಶಾಸಕರು, ಸಚಿವರು ಭಯಗೊಂಡು ತರಾತುರಿಯಲ್ಲಿ ಮಸೂದೆ ಮಂಡನೆ ಮಾಡಿದರು. ಈ ವಿಚಾರದಲ್ಲಿ ಸ್ಪೀಕರ್ ಯು.ಟಿ.ಖಾದರ್ ಅವರ ನಡೆಯೂ ನನಗೆ ಬೇಸರ ತಂದಿದೆ ಎಂದರು.
ಬಿಜೆಪಿಯಲ್ಲಿ 15 ಶಾಸಕರು ಈ ಬಗ್ಗೆ ಮಾತನಾಡುವುದಿತ್ತು. ಬಳಿಕ ಮಸೂದೆಯನ್ನು ಸದನ ಸಮಿತಿಗೆ ಒಪ್ಪಿಸಬೇಕೆಂದು ತೀರ್ಮಾನಿಸಿದ್ದೆವು. ಆದರೆ ಏಕಾಏಕಿ ಮಸೂದೆ ಪಾಸ್ ಮಾಡಲಾಗಿದೆ. ಈಗ ಅದು ರಾಜ್ಯಪಾಲರ ಬಳಿಗೆ ಹೋಗಿದೆ. ಸೋಮವಾರ ನಾನು, ರಾಜ್ಯಾಧ್ಯಕ್ಷರು ಹಾಗೂ ಇತರ ಮುಖಂಡರು ರಾಜ್ಯಪಾಲರ ಬಳಿಗೆ ಹೋಗಿ ಈ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ. ಇದು ಜನರ ಹಾಗೂ ಮಾಧ್ಯಮಗಳ ಸ್ವಾತಂತ್ರ್ಯ ಕಸಿಯುವ ಮಸೂದೆ.
ತುರ್ತು ಪರಿಸ್ಥಿತಿ ತಂದು ವಾಕ್ ಸ್ವಾತಂತ್ರ್ಯ ಕಸಿದುಕೊಂಡಂತೆಯೇ ಇಲ್ಲಿ ಮಸೂದೆ ಮೂಲಕ ಸ್ವಾತಂತ್ರ್ಯ ಕಸಿಯಲಾಗುತ್ತಿದೆ. ನಮ್ಮ ಅಹವಾಲಿಗೆ ಸರ್ಕಾರ ಅವಕಾಶ ನೀಡುವುದಿಲ್ಲ. ಆದ್ದರಿಂದ ರಾಜ್ಯಪಾಲರ ಬಳಿಗೆ ಹೋಗುತ್ತಿದ್ದೇವೆ. ರಾಜ್ಯಪಾಲರು ಮೀಸಲಾತಿಗೆ ಸಂಬಂಧಿಸಿದಂತೆ ಸ್ಪಷ್ಟೀಕರಣ ಕೇಳಿದ್ದಾರೆ. ಯಾವುದೇ ಕಾನೂನು ತರುವಾಗ ಹೀಗೆಯೇ ಚರ್ಚೆ ಮಾಡಬೇಕಾಗುತ್ತದೆ ಎಂದರು.
ಕೇರಳದ ಕನ್ನಡ ಶಾಲೆಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡುತ್ತಿಲ್ಲ. ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯನವರ ಆಪ್ತ ಪಾಲುದಾರರಾದ ಮುಖಂಡರೇ ಇದನ್ನು ಮಾಡಿದ್ದಾರೆ. ಇದರಲ್ಲಿ ಸಿಎಂ, ಡಿಸಿಎಂ ಕೈವಾಡ ಇದ್ದು, ಈ ಎಲ್ಲ ಬೆಳವಣಿಗೆಗಳು ಅವರಿಗೆ ಮೊದಲೇ ಗೊತ್ತಿತ್ತು. ನೀನು ಹೊಡೆದಂತೆ ಮಾಡು ನಾನು ಅತ್ತಂತೆ ಮಾಡುತ್ತೇನೆ ಎಂದು ಮೊದಲೇ ತೀರ್ಮಾನಿಸಿಕೊಂಡಿದ್ದರು.
ಇವರ ಬ್ರದರ್‌ಗಳು ಎಲ್ಲವನ್ನೂ ಮೊದಲೇ ಚರ್ಚೆ ಮಾಡಿಕೊಂಡು ಮ್ಯಾಚ್ ಫಿಕ್ಸಿಂಗ್ ಮಾಡಿದ್ದಾರೆ. ಮುಖ್ಯಮಂತ್ರಿಗಳು ಕೇರಳಕ್ಕೆ ಪತ್ರ ಬರೆದಿರುವುದು ಕೂಡ ಮೊದಲೇ ಹೊಂದಾಣಿಕೆ ಮಾಡಿಕೊಂಡಿರುವುದರ ಭಾಗ. ಕೇರಳ ಸಿಎಂ ಬುಲ್ಡೋಜರ್ ಎಂದಾಗ ಅದಕ್ಕೆ ಸಿಎಂ ಸಿದ್ದರಾಮಯ್ಯ ಏನೂ ಹೇಳಲಿಲ್ಲ. ಇದು ಕನ್ನಡಕ್ಕೆ ದ್ರೋಹ ಬಗೆದ ಸರ್ಕಾರ. ವೇದಿಕೆಯಲ್ಲಿ ಕೇರಳ ಮುಖ್ಯಮಂತ್ರಿಯನ್ನು ಭೇಟಿ ಮಾಡಿದಾಗಲೇ ಈ ಬಗ್ಗೆ ಚರ್ಚೆ ಮಾಡಬೇಕಿತ್ತು.
ಎಲ್ಲದಕ್ಕೂ ಮೋದಿಯಿಂದ ಅನ್ಯಾಯ ಎನ್ನುತ್ತಾರೆ. ಈಗ ಇದನ್ನು ಏಕೆ ಅನ್ಯಾಯ ಎಂದು ಹೇಳುತ್ತಿಲ್ಲ? ಸಿಎಂ ಸಿದ್ದರಾಮಯ್ಯ ಕನ್ನಡಕ್ಕೆ ಮಾರಕವಾದ ನಡೆ ಇಟ್ಟಿದ್ದಾರೆ. ಇದರ ವಿರುದ್ಧ ತೀವ್ರ ಪ್ರತಿಭಟನೆ ಮಾಡಲಿ. ಇಲ್ಲವಾದರೆ ಇದರಲ್ಲಿ ರಾಜ್ಯದ ಕಾಂಗ್ರೆಸ್ ನಾಯಕರು ಶಾಮೀಲಾಗಿದ್ದಾರೆ ಎಂದೇ ಭಾವಿಸುತ್ತೇವೆ ಎಂದರು.