ಕೆ.ಎಂ.ಸಂತೋಷ್, ಆರೂಢಿ, (ದೊಡ್ಡಬಳ್ಳಾಪುರ): ಒಳಚರಂಡಿ ನೀರನ್ನು ಶುದ್ದೀಕರಿಸಿ ಬಿಡುವ ಸಲುವಾಗಿ ಎಸ್‌ಟಿಪಿ ಘಟಕ ಸ್ಥಾಪಿಸಬೇಕೆಂದು ಒತ್ತಾಯಿಸಿ ಅರ್ಕಾವತಿ ನದಿ ಪಾತ್ರದ ಕೆರೆ ಸಂರಕ್ಷಣಾ ವೇದಿಕೆ ಹಾಗೂ ‘ದೊಡ್ಡತುಮಕೂರು ಮತ್ತು ಮಜರಾ ಹೊಸಹಳ್ಳಿ ಗ್ರಾಮ ಪಂಚಾಯ್ತಿ ಕೆರೆ ಹೋರಾಟ ಸಮಿತಿ ನೇತೃತ್ವದಲ್ಲಿ ತಾಲೂಕು ಕಚೇರಿ ಮುಂಭಾಗ ಆರಂಭಿಸಿರುವ ಆಮರಣಾಂತ ಉಪವಾಸ ಸತ್ಯಾಗ್ರಹ (Fast unto death) ಎರಡನೇ ದಿನಕ್ಕೆ ಕಾಲಿಟ್ಟಿದ್ದು, ನಾಲ್ವರು ಹೋರಾಟಗಾರರು ನಿತ್ರಾಣರಾಗಿದ್ದಾರೆ.
ಶುಕ್ರವಾರ ಸಂಜೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೃಷ್ಣಾ ರೆಡ್ಡಿ, ವೈದ್ಯಾಧಿಕಾರಿ ಡಾ. ಪರಮೇಶ್ವರ ನೇತೃತ್ವದಲ್ಲಿ ಆರೋಗ್ಯ ತಪಾಸಣೆ ನಡೆಸಲಾಯಿತು.
ಭರವಸೆ ಬೇಡ
ನಮಗೆ ಇಲ್ಲಿನ ಯಾವುದೇ ಅಧಿಕಾರಿಗಳ ಭರವಸೆ ಬೇಡ. ಎಸ್‌ಟಿಪಿ ಘಟಕಕ್ಕೆ 57 ಕೋಟಿ ರೂ ಮಂಜೂರು ಮಾಡುವ ಸರ್ಕಾರದ ಕಾರ್ಯದರ್ಶಿಗಳು ಇಲ್ಲಿಗೆ ಬಂದು ಉತ್ತರ ನೀಡುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಉಪವಾಸ ಕೈಬಿಡಿ ಎಂದು ಭರವಸೆ ನೀಡಲು ಬಂದ ಅಧಿಕಾರಿಗಳಿಗೆ ಪ್ರತಿಭಟನಾಕಾರರು ಪ್ರತ್ಯುತ್ತರ ನೀಡಿದರು.
ರಾಜ್ಯ ಸರ್ಕಾರ ದೊಡ್ಡಬಳ್ಳಾಪುರದ ಕೊಳಚೆ ನೀರಿಗೆ ಎಸ್‌ಟಿಪಿ ಘಟಕ ಮಾಡಲು ಹಣ ಇಲ್ಲ ಎಂದು ಲಿಖಿತ ರೂಪದಲ್ಲಿ ಕೊಟ್ಟಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ನಾಯಿಗಳಿಗೆ ಕೋಳಿ ಮಾಂಸ ಹಾಕಲು ಕೋಟಿ ಕೋಟಿ ಹಣವಿರುತ್ತದೆ, ಮುಖ್ಯಮಂತ್ರಿಗಳ ಕಚೇರಿಯಲ್ಲಿ ಕಾಪಿ ಕುಡಿಯಲು ಬಿಸ್ನತ್ ತಿನ್ನಲು 200 ಕೋಟಿಗೂ ಹೆಚ್ಚು ಹಣವಿರುತ್ತದೆ. ಆದರೆ ಸಾವಿರಾರು ಜನರು ಶುದ್ಧ ನೀರು ಕುಡಿಯಲು, ಕೊಳದ ನೀರನ್ನು ಶುದ್ಧ ಮಾಡಲು 50 ಕೋಟಿ ಹಣವಿರುವುದಿಲ್ಲ ಎಂದು ದೂರಿದರು.
ಸ್ಥಳಕ್ಕೆ ಆಗಮಿಸಿದ ನಗರಾಭಿವೃದ್ದಿ ಇಲಾಖೆಯ ಜಿಲ್ಲಾ ಯೋಜನಾ ನಿರ್ದೇಶಕ ರಮೇಶ್ ಮಾತನಾಡಿ, ನಾಗರಕೆರೆಯಿಂದ ಹರಿಯುತ್ತಿರುವ ಒಳ ಚರಂಡಿ ನೀರಿನ ಪೈಪ್‌ಗಳನ್ನು ಸ್ಥಳಾಂತರಿಸುವ ಕಾಮಗಾರಿ ನಡೆಯುತ್ತಿದೆ. ನಗರಸಭೆ ತ್ಯಾಜ್ಯ ನೀರಿನ ಮೂರನೇ ಹಂತದ ಶುದ್ದೀಕರಣ ಮಾಡಲು 57 ಕೋಟಿ ರೂಗೆ ಇನ್ನೂ ಅನುಮೋದನೆ ದೊರೆತಿಲ್ಲ. ಈ ಬಗ್ಗೆ ಆರ್ಥಿಕ ಇಲಾಖೆಗೆ ಮನವಿ ಮಾಡಲಾಗಿದೆ.
ಕಾಮಗಾರಿಗಳಿಗೆ ಜಿಲ್ಲಾಧಿಕಾರಿಗಳ ಸಹ ಈ ಬಗ್ಗೆ ಗಮನ ಹರಿಸುತ್ತಿದ್ದು, ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ. ಉಪವಾಸ ಸತ್ಯಾಗ್ರಹವನ್ನು ಕೈಬಿಡಿ ಎಂದು ಮನವಿ ಮಾಡಿದರು.
ತಹಶೀಲ್ದಾರ್ ಡಾ.ಮಲ್ಲಪ್ಪ ಕೆ.ಯರಗೋಳ ಮಾತನಾಡಿ, ಮಾಲಿನ್ಯ ನಿಯಂತ್ರಣ ಮಂಡಲಿ ಕಚೇರಿ ಇಲ್ಲಿಯೇ ಕಾರ್ಯಾರಂಭ ಮಾಡಲಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಸಹ ಸೂಚನೆ ನೀಡಿದ್ದಾರೆ. ಕೊಳಚೆ ನೀರಿನ ಶುದ್ದೀಕರಣಕ್ಕಾಗಿ ಖಾಸ್‌ಭಾಗ್ ಸಮೀಪ ಎರಡು ಎಕರೆ ಜಮೀನು ಗುರುತಿಸಲಾಗಿದೆ.
ದೊಡ್ಡಬಳ್ಳಾಪುರ ತಾಲ್ಲೂಕು ಆಡಳಿತ ಈಗಾಗಲೇ ಇದನ್ನು ನಗರಸಭೆಗೆ ಹಸ್ತಾಂತರಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಲಾಗಿದೆ.
ಜಿಲ್ಲಾಧಿಕಾರಿ ಅವರೊಂದಿಗೆ ವೈಯಕ್ತಿಕ ಚರ್ಚೆ ಸಹ ನಡೆಸಲಾಗಿದ್ದು, ಮುಖ್ಯಮಂತ್ರಿಗಳ ಬಳಿಗೆ ನಿಯೋಗ ತೆರಳುವುದಾಗಿ ತಿಳಿಸಿದ್ದಾರೆ. ಸರ್ಕಾರದ ಕಾರ್ಯದರ್ಶಿಗಳೂ ಸಹ ಆದ್ಯತೆ ಮೇರೆಗೆ ಕಾಮಗಾರಿಗೆ ಅನುದಾನ ಪಡೆಯುವ ಭರವಸೆ ನೀಡಿದ್ದಾರೆ ಎಂದರು.
ನಗರಸಭೆ ವ್ಯಾಪ್ತಿಯಿಂದ ಬರುತ್ತಿರುವ ಒಳಚರಂಡಿ ನೀರನ್ನು ಶುದ್ದೀಕರಿಸಿ ಬಿಡುವಂತೆ ಏಳು ವರ್ಷಗಳಿಂದಲೂ ಹೋರಾಟ ಮಾಡಲಾಗುತ್ತಿದೆ. ನಮಗೆ ಯಾವುದೇ ಭರವಸೆ ಬೇಡ. ಕ್ಯಾನ್ಸರ್, ಕಿಡ್ನಿ ಮೊದಲಾದ ಸಮಸ್ಯೆಗಳಿವೆ. ನಮ್ಮ ಆರೋಗ್ಯಕ್ಕಿಂತ ನಮ್ಮ ಊರಿನ ಜನರ ಆರೋಗ್ಯ ಮುಖ್ಯ. ಸರ್ಕಾರ ಕಣ್ಣು ತೆರೆಯಲ್ಲ.
ಹಿಂದೆ ದಯಾಮರಣ ಸಹ ನೀಡಿ ಎಂದಿದ್ದೆವು. ಈಗ ಕಾಮಗಾರಿ ಹಣವನ್ನು ಕಾರ್ಖಾನೆಗಳ ಬಳಿಯೇ ವಸೂಲಿ ಮಾಡಿ. ಸಧ್ಯಕ್ಕೆ ನಮ್ಮ ಹೋರಾಟ ನಿಲ್ಲುವುದಿಲ್ಲ. ಗಣರಾಜ್ಯೋತ್ಸವ ದಿನದಂದು ಕಪ್ಪು ಬಾವುಟ ಹಾರಿಸುವುದು ನಿಶ್ವಿತ ಎಂದು ಹೋರಾಟಗಾರರು ತಮ್ಮ ಹೋರಾಟ ಮುಂದುವರೆಸಿದರು.
ಧರಣಿ ಮುಂದುವರಿಕೆ
ಧರಣಿ ಮಾಡಿ ಆದರೆ ಉಪವಾಸ ಮಾಡಬೇಡಿ ಎಂದು ಅಧಿಕಾರಿಗಳಾದಿಯಾಗಿ ಮಹಿಳಾ ಠಾಣೆ ಇನ್ಸ್ಪೆಕ್ಟರ್ ನವೀನ್ ಕುಮಾರ್ ಮನವಿ ಮಾಡಿದರೂ ಸತ್ಯಾಗ್ರಹ ನಿರತರು, ರಾತ್ರಿ 9 ಗಂಟೆಯಾದರೂ ಸಹ ಹೋರಾಟ ಮುಂದುವರೆಸಿದ್ದರು.