ದೊಡ್ಡಬಳ್ಳಾಪುರ: ಕನ್ನಡ ಪುಸ್ತಕ ಓದಿ ಬಹುಮಾನ ಗೆಲ್ಲಿ’ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ಕನ್ನಡ ಓದುವ ಹವ್ಯಾಸವನ್ನು ಉತ್ತೇಜಿಸುತ್ತಿರುವ ಅತ್ಯಂತ ಶ್ಲಾಘನೀಯವಾಗಿದೆ ಎಂದು ಸಿ.ವಿ.ರಾಮನ್ (Sir C.V. Raman) ಪುಸ್ತಕ ಪ್ರಕಟಣೆಯ ಪ್ರಾಯೋಜಕರಾದ ಎಸ್.ಶ್ರೀಕಾಂತ್ ತಿಳಿಸಿದರು.
ಅವರು ದೊಡ್ಡಬಳ್ಳಾಪುರ ನಗರದ ಕನ್ನಡ ಜಾಗೃತ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಜಾಗೃತ ಪರಿಷತ್ತು, ವಿಕಾಸ ಪ್ರಕಾಶ ಸಂಸ್ಥೆ ಎಸ್.ರಾಜಲಕ್ಷ್ಮಿ ಸ್ಮರಣಾರ್ಥ ಪ್ರಕಟಿಸಿರುವ ನೋಬಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಸರ್ ಸಿ.ವಿ.ರಾಮನ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಪುಸ್ತಕ ಓದುವ ಸ್ಪರ್ಧೆಯು ಜ್ಞಾನಾರ್ಜನೆಯನ್ನು ಪ್ರೋತ್ಸಾಹಿಸುವುದರ ಜೊತೆಗೆ, ಪುಸ್ತಕಗಳ ಪ್ರೀತಿಯನ್ನು ಬೆಳೆಸುತ್ತದೆ. ಇಂತಹ ಕಾರ್ಯಕ್ರಮಗಳು ಓದುಗರನ್ನು ಪುಸ್ತಕಗಳ ಮೂಲಕ ಜಗತ್ತಿನ ಅರಿವು ಮೂಡಿಸಲು ಪರಿಣಾಮಕಾರಿ ಮಾರ್ಗವಾಗಿದೆ. ಪುಸ್ತಕ ಓದಿ ಬಹುಮಾನ ಗೆಲ್ಲಿ ಕಾರ್ಯಕ್ರಮ ಸ್ಪರ್ಧಾತ್ಮಕ ಮನೋಭಾವವನ್ನು ಹೆಚ್ಚಿಸುತ್ತದೆ ಎಂದರು.
ಕನ್ನಡ ಜಾಗೃತ ಪರಿಷತ್ತು ಟ್ರಸ್ಟಿ ಎಸ್.ಮಹಾಬಲೇಶ್ವರ್ ಮಾತನಾಡಿ, ಮೊಬೈಲ್ ವ್ಯಸನವು ವಿದ್ಯಾರ್ಥಿಗಳಲ್ಲಿ ಓದಿನಿಂದ ಗಮನವನ್ನು ಬೇರೆಡೆಗೆ ಸೆಳೆಯುತ್ತದೆ. ಇದು ಮುಖಾಮುಖಿ ಸಂವಹನವನ್ನು ಕಡಿಮೆ ಮಾಡಿ, ಸಾಮಾಜಿಕ ಪ್ರತ್ಯೇಕತೆಗೆ ಕಾರಣವಾಗುತ್ತದೆ. ಅತಿಯಾದ ಮೊಬೈಲ್ ಬಳಕೆ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತದೆ ಎಂದರು.
ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಎಂ.ಬಿ.ಗುರುದೇವ್ ಮಾತನಾಡಿ, ಸರ್ ಸಿ.ವಿ. ರಾಮನ್ ಅವರು ಅಸಾಧಾರಣ ಸಮಯಪ್ರಜ್ಞೆ ಮತ್ತು ಕಟ್ಟುನಿಟ್ಟಿನ ಶಿಸ್ತಿಗೆ ಹೆಸರಾಗಿದ್ದರು. ಸಿ.ವಿ.ರಾಮನ್ ಜೀವನದ ಕೊನೆಯವರೆಗೂ ಸಂಶೋಧನೆ ಮತ್ತು ಅಧ್ಯಯನದಲ್ಲಿ ನಿರತರಾಗಿ, ಶಿಸ್ತಿನ ಪ್ರತಿರೂಪವಾಗಿ ಬದುಕಿದವರು.
ರಾಮನ್ ಅವರ ಜನಪ್ರಿಯ ಆವಿಷ್ಕಾರ ‘ರಾಮನ್ ಎಫೆಕ್ಟ್’ ಪ್ರಕಟವಾದ ದಿನದ ನೆನಪಿಗಾಗಿ ಫೆಬ್ರವರಿ 28 ಅನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ ಎಂದರು.
ಜನಪ್ರಿಯ ವಿಜ್ಞಾನ ಸಾಹಿತಿ ಡಾ.ಎ.ಓ.ಆವಲಮೂರ್ತಿ ಮಾತನಾಡಿ, ಶ್ರೀ ಕೊಂಗಾಡಿಯಪ್ಪ. ವಿದ್ಯಾಸಂಸ್ಥೆಯ ನಿರ್ದೇಶಕಿಯಾಗಿದ್ದ ಎಸ್.ರಾಜಲಕ್ಷ್ಮಿ ಅವರ ಸ್ಮರಣಾರ್ಥ ಸಿ.ವಿ.ರಾಮನ್ ಪುಸ್ತಕ ಪ್ರಕಟಿಸಲಾಗಿದೆ. ಈ ಪುಸ್ತಕವನ್ನು ಪುಸ್ತಕ ಓದಿ ಬಹುಮಾನ ಗೆಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಆಯ್ಕೆ ಮಾಡಲಾಗಿದೆ.
ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ನಡೆಯುತ್ತಿರುವ ಕನ್ನಡ ಪುಸ್ತಕ ಓದಿ ಬಹುಮಾನ ಗೆಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಫೆ.22 ರಂದು ನಡೆಯಲಿದೆ. ಈ ಸ್ಪರ್ಧಾತ್ಮಕ ಪರೀಕ್ಷೆಗೆ ನೂರು ವಿದ್ಯಾರ್ಥಿಗಳನ್ನು ಪ್ರೇರಣೆ ಮಾಡಿದವರಿಗೆ ಕನ್ನಡ ಪ್ರೇರಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಿ.ವಿ. ರಾಮನ್ ಪುಸ್ತಕ ಸಂಪಾದಕ ಮಂಡಲಿಯ ಸದಸ್ಯರುಗಳಾದ ಪಿ.ಗೋವಿಂದರಾಜು, ಎಚ್.ಎನ್.ಪ್ರಕಾಶ್, ಡಿ.ಪುಷ್ಪವತಿ, ಸಂಚಾಲಕ ಸಿ.ವೆಂಕಟರಾಜು, ನಗರಸಭಾ ಮಾಜಿ ಸದಸ್ಯ ಜಿ.ಸತ್ಯನಾರಾಯಣ್, ನಿವೃತ್ತ ಉಪನ್ಯಾಸಕರುಗಳಾದ ಎಸ್.ಇಕ್ಬಾಲ್ ಅಹಮದ್, ಜಿ.ಸತ್ಯನಾರಾಯಣ, ಕನ್ನಡ ಜಾಗೃತ ಪರಿಷತ್ತು ಕಾರ್ಯದರ್ಶಿ ಡಿ.ಪಿ.ಆಂಜನೇಯ, ಕನ್ನಡಪರ ಸಂಘಟನೆಗಳ ಮುಖಂಡರುಗಳಾದ ಸಂಜೀವ್ ನಾಯಕ್, ಗುರುರಾಜಪ್ಪ, ಡಿ.ವೆಂಕಟೇಶ್, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ವಿವಿಧ ಸಂಘಟನೆಯ ಪದಾಧಿಕಾರಿಗಳಾದ ಜಿ.ಸುರೇಶ್, ಕೋದಂಡರಾಮ್, ಸಿ.ಅಣ್ಣಯ್ಯ, ರಂಗಸ್ವಾಮಯ್ಯ, ಸೂರ್ಯನಾರಾಯಣ್, ಮುಖ್ಯಶಿಕ್ಷಕಿ ಲಕ್ಷ್ಮೀಕಾಂತಮ್ಮ, ಕರಾಟೆ ಶ್ರೀನಿವಾಸ್ ಮುಂತಾದವರು ಭಾಗವಹಿಸಿದ್ದರು.