ದೊಡ್ಡಬಳ್ಳಾಪುರ: ನಗರದ ಪ್ರತಿಷ್ಠಿತ ನಳಂದ ಪ್ರೌಢಶಾಲೆಯ (Nalanda High School) ಕಬ್ಸ್ ಮತ್ತು ಬುಲ್ ಬುಲ್ಸ್‌ನ 8 ವಿದ್ಯಾರ್ಥಿಗಳು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ರಾಷ್ಟ್ರಪತಿ ಅವಾರ್ಡ್ ಸಮಾರಂಭಕ್ಕೆ (President’s Award ceremony) ಆಯ್ಕೆಯಾಗಿದ್ದು, ಹರಿಯಾಣದ ಗಡಪುರಿ ಸ್ಕೌಟ್ಸ್ ಅಂಡ್ ಗೈಡ್ಸ್ ಸೆಂಟರ್ ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಗೋಲ್ಡನ್ ಆ್ಯರೋ ಅವಾರ್ಡ್ ಸೆರೊಮನಿಯು ಕಬ್ಸ್ ಮತ್ತು ಬುಲ್ ಬುಲ್ಸ್ ನ ಅತ್ಯಂತ ಕ್ಲಿಷ್ಟಕರವಾದ ಹಂತವಾಗಿದ್ದು, ನಳಂದ ಪ್ರೌಢಶಾಲೆಯ ಐದನೇ ತರಗತಿಯ ವಿದ್ಯಾರ್ಥಿಗಳಾದ ಸಾದ್ವಿತ್ ಡಿ ,ಪ್ರಥಮ್ ಶೆಟ್ಟಿ ಜೆಸಿ, ಕಿಶೋರ್ ಉಪ್ಪಾರ್ ಸಿ, ರೋಹನ್ ಸಾಯಿ ಕೆ, ಮನುಶ್ರೀ ಕೆ, ಮುನಿದುತಿ ಕೆ, ಸುಮನಾ ಡಿಎಸ್ ವಿದ್ಯಾರ್ಥಿಗಳು ಶಿಕ್ಷಕರಾದ ಅನಿತಾ ಆರ್ ಮತ್ತು ಕವಿತಾ ಬಿಕೆ ರವರ ನಾಯಕತ್ವದಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂದು ಶಾಲಾ ಕಾರ್ಯದರ್ಶಿ ಅನುರಾಧ ಕೆ ಆರ್ ರವರು ತಿಳಿಸಿದ್ದಾರೆ.

ಕಬ್ಸ್ ಮತ್ತು ಬುಲ್ ಬುಲ್ಸ್ ಗಳ ಪ್ರತಿಜ್ಞೆ, ಧ್ವಜಾರೋಹಣ, ಮಾರ್ಚ್ ಫಾಸ್ಟ್, ಸಾಹಸ ಕ್ರೀಡೆಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳಾದ ಡ್ರಾಯಿಂಗ್ ಅಂಡ್ ಪೇಂಟಿಂಗ್, ನೃತ್ಯ ,ಸಂಗೀತ, ದೇಶ ಭಕ್ತಿ ಗೀತೆಗಳು ಮುಂತಾದವುಗಳಲ್ಲಿ ಸ್ಪರ್ಧಿಸಿ ಹರಿಯಾಣದಲ್ಲಿ ಕನ್ನಡದ ಬಾವುಟವನ್ನು ಹಾರಿಸಿದ್ದಾರೆ.

ಈ ವಿದ್ಯಾರ್ಥಿಗಳು ತಮ್ಮ ಸತತ ಕಠಿಣ ಪರಿಶ್ರಮದ ಮೂಲಕ ಪ್ರವೇಶ್ , ಕೋಮಲ್ ಪಂಕ್ ,ಈರಕ್ ಪಂಕ್ ಹಂತಗಳನ್ನು ದಾಟಿ ಗೋಲ್ಡನ್ ಅರೋ ಅವಾರ್ಡ್ ನ್ನು ಪಡೆಯುತ್ತಿರುವುದು ಇಡೀ ಕರ್ನಾಟಕ ರಾಜ್ಯದ ಹೆಮ್ಮೆಯ ವಿಷಯವಾಗಿದೆ.

ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಅನಿತಾ ಕೆಪಿ ಅವರು ವಿದ್ಯಾರ್ಥಿಗಳ ಈ ಅಭೂತ ಪೂರ್ವ ಸಾಧನೆಗೆ ಅಭಿನಂದನೆಗಳನ್ನು ಹೇಳಿ, ಇಡೀ ದೇಶದಲ್ಲಿಯೇ ಅತಿ ಹೆಚ್ಚು 35 ವಿದ್ಯಾರ್ಥಿಗಳು ನಮ್ಮ ಶಾಲೆಯಿಂದ ಅರ್ಹರಾಗಿದ್ದು ಅದರಲ್ಲಿ ಎಂಟು ವಿದ್ಯಾರ್ಥಿಗಳು ರಾಷ್ಟ್ರಪತಿಯವರ ಅತ್ಯುನ್ನತ ಪದಕ ಸ್ವೀಕಾರ ರ‍್ಯಾಲಿಗೆ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.

ಸ್ಕೌಟ್ಸ್ ನ ಅತ್ಯುನ್ನತ ತರಬೇತಿ ವುಡ್ ಬ್ಯಾಡ್ಜ್ ಪಡೆದಿರುವ ಲೀಡರ್ ಸುನಿತಾ ಪಿ ಅವರು, ನಮ್ಮ ನಳಂದ ಪ್ರೌಢಶಾಲೆ ಮತ್ತು ಲಿಟ್ಲ್ ಏಂಜೆಲ್ಸ್ ಅನಂತ ಶಾಲೆಗಳ ಒಟ್ಟು 2380 ವಿದ್ಯಾರ್ಥಿಗಳು ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳಲ್ಲಿ ಭಾಗವಹಿಸಿದ್ದು, ನರ್ಸರಿ ತರಗತಿಗಳ ಹಂತದಿಂದಲೇ ಬನ್ನಿಸ್ ಗಳಾಗಿ ಪ್ರಾಣಿ ಪಕ್ಷಿ ಗಿಡ ಮರ ಗಳೊಂದಿಗೆ ಸಹಬಾಳ್ವೆಯ ತರಬೇತಿಯನ್ನು ಪಡೆಯುತ್ತಾರೆ.

ನಂತರ ಪ್ರಾಥಮಿಕ ಹಂತದಲ್ಲಿ ಕಬ್ಸ್ ಮತ್ತು ಬುಲ್ ಬುಲ್ಸ್ ನಲ್ಲಿ ಶಿಸ್ತು, ಸಾಹಸ ,ಕ್ರೀಡೆ, ಹಾಡು, ನೃತ್ಯ, ಕಾಡಿನ ಸಾಹಸ ಕಥೆಗಳನ್ನು ದಿನನಿತ್ಯವೂ ಅಭ್ಯಸಿಸಿ ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಜೀವನದಲ್ಲಿ ರೂಡಿಸಿಕೊಳ್ಳುತ್ತಾರೆ.
ಬಳಿಕ ಆರನೇ ತರಗತಿಯಿಂದ ಸ್ಕೌಟ್ಸ್ ಮತ್ತು ಗೈಡ್ಸ್ ಗೆ ಪಾದಾರ್ಪಣೆ ಮಾಡಿ ಶಿಸ್ತಿನ ಸಿಪಾಯಿಗಳ ರೀತಿಯಲ್ಲಿ ಒಟ್ಟು 12 ಪ್ರೊಫಿಶಿಯನ್ಸಿ ಬ್ಯಾಡ್ಜ್ ಗಳನ್ನು ಗಳಿಸಿ ವಿವಿಧ ಹಂತಗಳ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ, ಅಂತಿಮವಾಗಿ ರಾಷ್ಟ್ರಪತಿ ಪದಕದವರೆಗೂ ಸ್ಪರ್ಧಿಸುತ್ತಾರೆ.

ಈ ರೀತಿಯಾಗಿ ಅಂತರಾಷ್ಟ್ರೀಯ ಮನ್ನಣೆ ಗಳಿಸಿರುವ ಸ್ಕೌಟ್ಸ್ ಅಂಡ್ ಗೈಡ್ಸ್ ಅನ್ನು ನರ್ಸರಿ ತರಗತಿಯಿಂದ 10ನೇ ತರಗತಿಯವರೆಗೂ ತಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡು ಶೈಕ್ಷಣಿಕವಾಗಿಯು ಇಡೀ ತಾಲೂಕಿನಲ್ಲಿಯೇ ಅತ್ಯುತ್ತಮ ಫಲಿತಾಂಶವನ್ನು ನಮ್ಮ ಶಾಲೆಯ ವಿದ್ಯಾರ್ಥಿಗಳು ಪಡೆಯುತ್ತಿದ್ದಾರೆ.

ಪ್ರಸ್ತುತ ಹರಿಯಾಣದಲ್ಲಿ ಗೋಲ್ಡನ್ ಆ್ಯರೋ ರ‍್ಯಾಲಿ ಯಲ್ಲಿ ಭಾಗವಹಿಸುತ್ತಿರುವ ಶಾಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಇಡೀ ರಾಜ್ಯಕ್ಕೆ ಕೀರ್ತಿಯನ್ನು ತಂದಿದ್ದಾರೆಂದು ಹರ್ಷವನ್ನು ವ್ಯಕ್ತಪಡಿಸಿದ್ದಾರೆ .
