ದೊಡ್ಡಬಳ್ಳಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲೂಕಿನ ರಾಜಘಟ್ಟ (Rajghatta) ಗ್ರಾಮದ ನಂದಿಕುಂಟೆ ಕೆರೆಯ (Nandikunte Lake) ನಾಮಫಲಕ ಅನಾವರಣ ಮತ್ತು ಕೆರೆ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ (Dr. D. Veerendra Heggade) ಅವರು ನಾಮಫಲಕ ಅನಾವರಣ ಮಾಡುವ, ಯೋಜನೆಗೆ ಶುಭ ಹಾರೈಸಿದರು.
ಬಳಿಕ ಮಾತನಾಡಿದ ಅವರು, ಜಲ ಮೂಲಗಳು ಸಾಮಾಜಿಕ ಜನಜೀವನದ ಮೇಲೆ ಪರಿಣಾಮ ಬೀರಲಿದ್ದು, ಕೆರೆ ಕುಂಟೆ ಮೊದಲಾದ ಜಲ ಮೂಲಗಳ ಸಂರಕ್ಷಣೆ ಮಾಡಿಕೊಳ್ಳುವುದು ಸಮುದಾಯದ ಹೊಣೆಗಾರಿಕೆಯಾಗಿದೆ ಎಂದರು.
ಕೆರೆಗಳನ್ನು ಪುನಶ್ವೇತನಗೊಳಿಸುವ ಕಾಮಗಾರಿಗಳಿಗೆ ಸರ್ಕಾರದೊಂದಿಗೆ ಸಮುದಾಯ ಸಹ ಕೈಜೋಡಿಸಬೇಕಿದೆ. 1982ರಲ್ಲಿ ಆರಂಭವಾದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ವತಿಯಿಂದ ರಾಜ್ಯದಲ್ಲಿ 914 ಕೆರೆಗಳ ಪುನಶ್ವೇತನಗೊಳಿಸಿರುವ ಪರಿಣಾಮ ಅಂತರ್ಜಲ ವೃದ್ಧಿಯಾಗುತ್ತಿದೆ. ಕೆರೆಗಳ ಅಭಿವೃದ್ದಿಯಾದಾಗ ಮಾತ್ರ ಅಂತರ್ಜಲ ಹೆಚ್ಚಿ ಕೊಳವೆ ಬಾವಿಗಳಲ್ಲಿ ನೀರು ತುಂಬುತ್ತದೆ. 1000 ಅಡಿಗೆ ಇಳಿದಿದ್ದ ಅಂತರ್ಜಲ ಈಗ 300 ರಿಂದ 400 ಅಡಿಗಳಿಗೆ ಬರುತ್ತಿದೆ. ಕೆರೆಗಳ ಹೂಳು ತೆಗೆದು ಸಜ್ಜುಗೊಳಿಸದರೆ ಮಳೆಗಾಲದಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳಬಹುದಾಗಿದೆ. ಕೆರೆಗಳ ಅಭಿವೃದ್ದಿಯಾದಾಗ ಮಾತ್ರ ಗ್ರಾಮದಲ್ಲಿ ನೀರಾವರಿ ಅಭಿವೃದ್ದಿಯಾಗಲಿದ್ದು, ಕೆರೆಗಳನ್ನು ರಕ್ಷಣೆ ಮಾಡಿಕೊಳ್ಳುವುದು ಎಲ್ಲರ ಹೊಣೆಗಾರಿಕೆ ಎಂದರು.
ಹಾಲು ಮತ್ತು ಹೂ ಉತ್ಪಾದನೆಗೆ ನೆರವು
ರೈತರಿಗೆ ಅನುಕೂಲವಾಗುವ ಹೈನುಗಾರಿಕೆ ಹಾಗೂ ಪುಷ್ಪೋದ್ಯಮಕ್ಕೆ ಗ್ರಾಮೀಣಾಭಿವೃದ್ದಿ ಯೋಜನೆ ವತಿಯಿಂದ ನೆರವು ನೀಡಲಾಗುತ್ತಿದೆ. ರಾಜ್ಯದ ಬೀದರ್ ಜಿಲ್ಲೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ನೆರವು ನೀಡಿದ ಪರಿಣಾಮ 11 ಸಾವಿರ ಲೀ. ಇದ್ದ ಹಾಲಿನ ಉತ್ಪಾದನೆ ಈಗ 1.6 ಲಕ್ಷ ಆಗಿದೆ ಎಂದರು.
ಹಳೆಯ ಹಾಗೂ ಪುರಾತನ ದೇವಾಲಯಗಳನ್ನು ಸಂರಕ್ಷಿಸಿಕೊಳ್ಳುವ ಕಾರ್ಯವಾಗುತ್ತಿದ್ದು, ಭೂಗರ್ಭದಲ್ಲಿ ಹುದುಗಿರುವ ದೇವಾಲಯಗಳನ್ನು ಸಹ ಸಂರಕ್ಷಿಸಲಾಗುತ್ತಿದೆ. ಊರುಗಳಲ್ಲಿ ಭಕ್ತರಿದ್ದರೂ ದೇವರೇ ಅನಾಥರಾಗುತ್ತಿದ್ದಾರೆ. ಈ ದಿಸೆಯಲ್ಲಿ ದೇವಾಲಯದ ಜೀರ್ಣೋದ್ದಾರಕ್ಕೆ ಮುಂದಾಗಿದೆ. ಹಿಂದಿನ ಹಾಗೂ ಈಗಿನ ಸರ್ಕಾರಗಳು ನಮ್ಮ ಯೋಜನೆಗಳಿಗೆ ಹಣ ನೀಡುತ್ತಿದ್ದಾರೆ ಎಂದರು.
ಮಾಜಿ ಸಚಿವೆ ರಾಣಿ ಸತೀಶ್ ಮಾತನಾಡಿ, ರಾಜಘಟ್ಟ ಗ್ರಾಮ ಇತಿಹಾಸ ಪ್ರಸಿದ್ಧವಾದ ಗ್ರಾಮವಾಗಿದೆ. ಈ ಗ್ರಾಮದಲ್ಲಿ ಕೆರೆ ಹೂಳೆತ್ತಿ ಇದರ ಹಸ್ತಾಂತರ ಕಾರ್ಯಕ್ರಮಕ್ಕೆ ವೀರೇಂದ್ರ ಹೆಗ್ಗಡೆಯವರು ಆಗಮಿಸಿರುವುದು ನಮ್ಮ ಗ್ರಾಮಕ್ಕೂ ಹಾಗೂ ತಾಲೂಕಿಗೂ ಹೆಮ್ಮೆಯ ವಿಷಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಧೀರಜ್ ಮುನಿರಾಜು, ವೀರೇಂದ್ರ ಹೆಗ್ಗಡೆ ಅವರ ಪುತ್ರಿ ಶ್ರದ್ಧಾ ಅಮಿತ್, ಕೆರೆ ಸಮಿತಿಯ ಅಧ್ಯಕ್ಷ ಆನಂದ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮುನಿರಾಜು, ಪ್ರಾದೇಶಿಕ ನಿರ್ದೇಶಕ ಶೀನಪ್ಪ ಸೇರಿದಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿಗಳು, ಮೇಲ್ವಿಚಾರಕರು, ಊರಿನ ಗ್ರಾಮಸ್ಥರು, ಸಂಘ-ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.