ಬೆಂಗಳೂರು: ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ತಲೆ ಬಾಗಿರುವ ರಾಜ್ಯ ಸರಕಾರ 56,432 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ (Recruitment process) ಆರಂಭಿಸಲು ನಿರ್ಧರಿಸಿದ್ದು, ಒಂದು ತಿಂಗಳ ಒಳಗಾಗಿ ನೇಮಕಕ್ಕೆ ಚಾಲನೆ ನೀಡಲಾಗುತ್ತಿದೆ.
ಗುರುವಾರ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವ ದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಉದ್ಯೋಗ ನೇಮಕಾತಿಗೆ ಚಾಲನೆ ನೀಡಲು ನಿರ್ಧರಿಸಲಾಗಿದೆ.
ಸಭೆಯ ನಂತರ ಮಾಹಿತಿ ನೀಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ್, ಮೀಸಲಾತಿಯನ್ನು ಶೇ.50ರಷ್ಟು ನಿಗದಿ ಗೊಳಿಸಿ ನೇಮಕಾತಿಗೆ ಚಾಲನೆ ನೀಡಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ ಎಂದರು.
ಇನ್ನು ಒಂದು ತಿಂಗಳ ಒಳಗಾಗಿ ನೇಮಕಕ್ಕೆ ಚಾಲನೆ ನೀಡಲಾಗುತ್ತಿದ್ದು, ಶೇ.56 ಮೀಸಲಾತಿ ಬದಲು ಶೇ.50ರ ಮೀಸಲಾತಿ ಅಡಿಯಲ್ಲೇ ನೇಮಕಾತಿ ಮಾಡಲು ನಿರ್ಧಾರ ಮಾಡಲಾಗಿದೆ. ಹುದ್ದೆ ಭರ್ತಿಗಾಗಿ ಆರ್ಥಿಕ ಇಲಾಖೆಯಿಂದ ಅನುಮೋದನೆ ದೊರೆತಿದೆ ಎಂದರು.
ಖಾಲಿ ಇರುವ ಸರಕಾರಿ ಹುದ್ದೆಗಳ ನೇಮಕಾತಿ ಆಗ್ರಹಿಸಿ ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ಬೃಹತ್ ಹೋರಾಟ ನಡೆಸಿದ್ದರು.