
ದೊಡ್ಡಬಳ್ಳಾಪುರ: ಕಳೆದ ಮೂರು ದಿನಗಳಿಂದ ಸರಣಿ ಅಪಘಾತದಿಂದಾಗಿ (Serial accident) ರಾಜ್ಯ ಹೆದ್ದಾರಿ ಪಾಲನಜೋಗಿಹಳ್ಳಿ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು, ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.

ಗುರುವಾರ ಕೆಎಸ್‌ಆರ್‌ಟಿಸಿ ಬಸ್ ಮೇಲರಿದು ಬೈಕ್ ಸವಾರ ಸಾವನಪ್ಪಿದ್ದ ಬೆನ್ನಲ್ಲೇ, ಶುಕ್ರವಾರ ನಿಂತಿದ್ದ ಆಟೋಗೆ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರ ಗಾಯಗೊಂಡಿದ್ದಲ್ಲದೆ, ಬೈಕ್ ರಸ್ತೆಯಲ್ಲಿಯೇ ಜಾರುತ್ತಾ ಮುಂದೆ ಸಾಗಿ ನಿಂತಿದ್ದ ಮಹಿಳೆಗೆ ಗುದ್ದಿದ ಪರಿಣಾಮ ಮಹಿಳೆ ಗಾಯಗೊಂಡಿದ್ದರು.

ಇನ್ನು ಇಂದು ಮಧ್ಯಾಹ್ನ (ಶನಿವಾರ) ಕಾರು ಡಿಕ್ಕಿ ಹೊಡೆದು ಪರಿಣಾಮ ವೃದ್ಧ ಗಾಯಗೊಂಡಿದ್ದರೆ, ಹಿಂದಿನಿಂದ ಬಂದ ಕಾರು, ಮುಂದಿದ್ದ ಕಾರಿಗೆ ಡಿಕ್ಕಿ ಹೊಡೆದು ಜಖಂಗೊಂಡಿದೆ.
ಪೊಲೀಸರ ಸ್ಥಳ ಪರಿಶೀಲನೆ
ಪ್ರವಾಸಿ ಮಂದಿರದ ವೃತ್ತದಿಂದ ಪಾಲನಜೋಗಿಹಳ್ಳಿ ರಸ್ತೆಯಲ್ಲಿ ಉಂಟಾಗುತ್ತಿರುವ ಸರಣಿ ಅಪಘಾತದ ಹಿನ್ನೆಲೆಯಲ್ಲಿ ಇಂದು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಸಾಧಿಕ್ ಪಾಷಾ ಅವರು ಟೋಲ್ ಸಿಬ್ಬಂದಿ ರವಿ ಬಾಬು ಅವರೊಂದಿಗೆ ಸ್ಥಳಪರಿಶೀಲನೆ ನಡೆಸಿದರು.
ಈ ವೇಳೆ ರಸ್ತೆಯಲ್ಲಿ ವೇಗ ನಿಯಂತ್ರಕ ಅಳವಡಿಸುವುದು, ರಸ್ತೆಯಲ್ಲಿ ರಿಪ್ಲೆಕ್ಟರ್ ಅಳವಡಿಸುವುದು, ಪೊಲೀಸರ ಗಸ್ತು ಹೆಚ್ಚಿಸುವುದು ಸೇರಿದಂತೆ ಅಂಗಡಿಗಳ ಮುಂದೆ ಅನಾವಶ್ಯಕವಾಗಿ ವಾಹನಗಳ ನಿಲುಗಡೆಗೆ ಅವಕಾಶ ನೀಡದಂತೆ ಅಂಗಡಿ ಮಾಲೀಕರಿಗೆ ಸೂಚನೆ ನೀಡಲಾಯಿತು.
ಟೋಲ್ ಕೇಂದ್ರದ ವಿರುದ್ಧ ಆಕ್ರೋಶ
ಯಲಹಂಕ- ಹಿಂದೂಪುರ ನಡುವಿನ ರಾಜ್ಯ ಹೆದ್ದಾರಿ ಟೋಲ್ ರಸ್ತೆಯಾಗಿದ್ದು, ಟೋಲ್ ಸಂಸ್ಥೆ ಹಣ ಸಂಗ್ರಹಿಸುವುದಕ್ಕೆ ಬಿಟ್ಟು, ವಾಹನ ಸವಾರರ ಸುರಕ್ಷಿತ ಪ್ರಯಾಣಕ್ಕೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂಬ ಆರೋಪ ಸಾರ್ವಜನಿಕರದ್ದಾಗಿದೆ.
ಈ ವ್ಯಾಪ್ತಿಯಲ್ಲಿ ನಾಯಿಗಳ ಹಾವಳಿ, ರಸ್ತೆಯಲ್ಲಿ ವಾಹನ ನಿಲ್ಲಿಸುವುದು, ಪದೇ ಪದೇ ಕೆಟ್ಟು ಹೋಗುವ ಟ್ರಾಫಿಕ್ ಸಿಗ್ನಲ್, ಬೇಕಾಬಿಟ್ಟಿ ಫ್ಲೆಕ್ಸ್ ಅಳವಡಿಕೆ ಸೇರಿದಂತೆ ಅನೇಕ ಸಮಸ್ಯೆಗಳಿಂದಾಗಿ ವಾಹನ ಸವಾರರು, ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದು ಈ ರಸ್ತೆಯಲ್ಲಿ ಓಡಾಡಬೇಕಾದ ಅನಿರ್ವಾರ್ಯತೆ ಇದೆ.
