
ಬೆಂ.ಗ್ರಾ.ಜಿಲ್ಲೆ: ಮುಂದಿನ ಪೀಳಿಗೆಗೆ ಗುಣಮಟ್ಟದ ಆಹಾರ ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿ ಆಗಿರುತ್ತದೆ. ಹಾಗಾಗಿ ಗುಣಮಟ್ಟದ ಆಹಾರ ಉತ್ಪನ್ನಗಳನ್ನು ಬೆಳೆಯಲು ರೈತರು ಸಾವಯವ (Organic) ಕೃಷಿ ಪದ್ದತಿಯ ಕಡೆಗೆ ಹೆಚ್ಚಿನ ಆದ್ಯತೆ ನೀಡಿ ಎಂದು ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಹೇಳಿದರು.
ಕೃಷಿ ಇಲಾಖೆ ವತಿಯಿಂದ ಸಾವಯವ ಮತ್ತು ಸಿರಿಧಾನ್ಯಗಳ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ದೇವನಹಳ್ಳಿ ಟೌನ್ ನ ಕ್ರೀಡಾಂಗಣದಲ್ಲಿ 2024-25ನೇ ಸಾಲಿನ ರಾಷ್ಟ್ರೀಯ ಆಹಾರ ಮತ್ತು ಪೌಷ್ಟಿಕ ಭದ್ರತಾ ಯೋಜನೆಯಡಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಾವಯವ ಮತ್ತು ಸಿರಿಧಾನ್ಯಗಳ ಮೇಳ-2025 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ಬೆಳೆಯುವ ಕೃಷಿ ಉತ್ಪನ್ನಗಳಿಗೆ ಕೊಟ್ಟಿಗೆ ಗೊಬ್ಬರ, ಹಸಿರು ಎಲೆ ಗೊಬ್ಬರ, ಎರೆಹುಳು ಗೊಬ್ಬರ ಸೇರಿದಂತೆ ಸಾವಯವ ಗೊಬ್ಬರ ಬಳಸಿ ಆಹಾರ ಉತ್ಪನ್ನಗಳನ್ನು ಬೆಳೆಯಬೇಕು. ರಾಸಾಯನಿಕ ಗೊಬ್ಬರ ಬಳಸಿದರೆ ಆಹಾರ ಉತ್ಪನ್ನಗಳಲ್ಲಿ ಪೌಷ್ಟಿಕತೆ, ಗುಣಮಟ್ಟ ಇರುವುದಿಲ್ಲ. ರಾಸಾಯನಿಕ ಗೊಬ್ಬರದಿಂದ ಬೆಳೆದ ಆಹಾರ ಪದಾರ್ಥಗಳ ಸೇವನೆಯಿಂದ ಪರೋಕ್ಷವಾಗಿ ವಿಷಾಹಾರ ಮನುಷ್ಯನ ದೇಹ ಸೇರುತ್ತಿದೆ.
ಸರ್ಕಾರವು ಕೂಡ ರೈತರಿಗೆ ಉತ್ತೇಜನ ನೀಡಿ ಸಾವಯವ ಗೊಬ್ಬರ ಬಳಸಿಕೊಂಡು ಉತ್ತಮ ಇಳುವರಿಯ ಬೆಳೆ ಹಾಗೂ ಸಿರಿಧಾನ್ಯಗಳನ್ನು ಬೆಳೆಯುವಂತೆ ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ಇದರಿಂದ ನಮಗೆ, ಭವಿಷ್ಯದ ಮಕ್ಕಳಿಗೆ ಒಳ್ಳೆಯ ಪೌಷ್ಟಿಕಾಂಶ ಆಹಾರ ಹಾಗೂ ಗುಣಮಟ್ಟದ ಆಹಾರ ಸಿಕ್ಕಂತಾಗುತ್ತದೆ ಎಂದರು.
1930-40 ರ ದಶಕದ ನಂತರ ಕಾಲಕ್ರಮೇಣ ಜನಸಂಖ್ಯೆಯ ಹೆಚ್ಚಳದಿಂದ ಆಹಾರದ ಬೇಡಿಕೆ ಹೆಚ್ಚಾಯಿತು. ಕೃಷಿಯಲ್ಲಿ ಇಳುವರಿ ಹೆಚ್ಚಿಸಲು ರಾಸಾಯನಿಕ ಗೊಬ್ಬರ ಬಳಕೆಯು ಅನಿವಾರ್ಯವಾಗಿ ಕೃಷಿ ಉತ್ಪನ್ನಗಳನ್ನು ಹೆಚ್ಚು ಹೆಚ್ಚು ಬೆಳೆಯಲು ಪ್ರಾರಂಭಿಸಿದರು. ಇದರ ಬಳಕೆಯಿಂದ ಜನರಲ್ಲಿ ನಿತ್ಯವೂ ಅನಾರೋಗ್ಯ ಸಮಸ್ಯೆಗಳು ಕಾಡುತ್ತಿವೆ. ಸಿರಿಧಾನ್ಯಗಳು ಹೆಚ್ಚು ಹೆಚ್ಚು ಬಳಸುವುದರಿಂದ ಪೌಷ್ಟಿಕಾಂಶವುಳ್ಳ ಆಹಾರ ನಮ್ಮ ದೇಹ ಸೇರಿ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಸಚಿವರು ಹೇಳಿದರು.
ರಾಗಿ ಬೆಂಬಲ ಬೆಲೆ ಹೆಚ್ಚಳಕ್ಕೆ ಕೇಂದ್ರಕ್ಕೆ ಮಾಹಿತಿ
ಕೃಷಿ ಆಧಾರಿತ ಬೆಳೆ ರಾಗಿ. ಹೆಚ್ಚಿನ ರೈತರು ರಾಗಿ ಬೆಳೆಯುತ್ತಾರೆ. ಲಾಭದಾಯಕ ಬೆಳೆ ಅಲ್ಲದಿದ್ದರೂ ಅದಕ್ಕೆ ಬೆಂಬಲ ಬೆಲೆ ಹೆಚ್ಚಿಸಬೇಕು ಎಂಬ ಉದ್ದೇಶವಿತ್ತು. ಹೀಗಾಗಿ ರಾಗಿಗೆ ಬೆಂಬಲ ಬೆಲೆ ಹೆಚ್ಚಳ ಮಾಡುವಂತೆ ಕೇಂದ್ರದ ಮಂತ್ರಿಗಳಾದ ಪಿಯುಶ್ ಗೋಯಲ್ ಅವರನ್ನು ಭೇಟಿಯಾಗಿ ದಾಖಲೆಗಳ ಸಮೇತ ರಾಗಿ ಬೆಳೆ ಬೆಳೆಯಲು ಆಗುವಂತಹ ಕರ್ಚು ವೆಚ್ಚ, ಲಾಭ ನಷ್ಟದ ಬಗ್ಗೆ ತಿಳಿಸಲಾಯಿತು. ಇದಕ್ಕೆ ಕೇಂದ್ರ ಮಂತ್ರಿಗಳು ಸ್ಪಂದಿಸಿ ಪ್ರತಿ ಕ್ವಿಂಟಾಲ್ ರಾಗಿಗೆ 4290 ರೂ.ಗಳ ಬೆಂಬಲ ಬೆಲೆ ನಿಗದಿ ಪಡಿಸಲು ಸಹಕಾರಿಯಾಯಿತು ಎಂದು ಸಚಿವರು ಹೇಳಿದರು.
ರಾಜ್ಯ 5ನೇ ಹಣಕಾಸು ಆಯೋಗದ ಅಧ್ಯಕ್ಷ ನಾರಾಯಣಸ್ವಾಮಿ ಅವರು ಮಾತನಾಡಿ ಸರ್ಕಾರ ಹಾಗೂ ಕೃಷಿ ಇಲಾಖೆ ಸಾವಯವ ಪದ್ದತಿಯಲ್ಲಿ ಬೆಳೆ ಬೆಳೆಯಲು ಸಾಕಷ್ಟು ಜಾಗೃತಿಯನ್ನು ಮೂಡಿಸುತ್ತಿದೆ. ಭೂಮಿಯ ಆರೋಗ್ಯ ಕಾಪಾಡುವುದರಿಂದ ನಮ್ಮ ಆರೋಗ್ಯ ವೃದ್ಧಿಸಿಕೊಳ್ಳಲು ಸಾಧ್ಯ. ಆದರಿಂದ ರಾಸಾಯನಿಕ ರಸಗೊಬ್ಬರ ಬಳಕೆ ನಿಲ್ಲಿಸಿ, ಸಾವಯವ ಗೊಬ್ಬರ ಬಳಸಿಕೊಂಡು ಕೃಷಿಯಲ್ಲಿ ಸಾವಯವ ಬೆಳೆ ಬೆಳೆಯುವುದು ಅಳವಡಿಸಿಕೊಳ್ಳಬೇಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ, ಪಶು ಇಲಾಖೆಯ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಯಿತು.
ಕೃಷಿ, ತೋಟಗಾರಿಕೆ, ರೇಷ್ಮೆ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ರೈತರಿಗೆ ಆತ್ಮಶ್ರೇಷ್ಠ ಕೃಷಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಮೇಳದಲ್ಲಿ ರೈತರಿಗೆ ಅವಶ್ಯವಿರುವ ಬೇಸಾಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕೃಷಿ ಇಲಾಖೆ ವತಿಯಿಂದ ನೀಡಲಾಯಿತು, ವಿವಿಧ ತಳಿಯ ಕೃಷಿ ಉತ್ಪನ್ನಗಳು, ಪರಿಕರಗಳು, ಯಂತ್ರೋಪಕರಣಗಳ ವಸ್ತು ಪ್ರದರ್ಶನ ಏರ್ಪಡಿಲಾಗಿತ್ತು.
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜಣ್ಣ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜಗನ್ನಾಥ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಡಾ. ಕಲಾವತಿ, ಉಪ ನಿರ್ದೇಶಕಿ ಗಾಯಿತ್ರಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಗುಣವಂತ, ದೇವನಹಳ್ಳಿ ತಹಶೀಲ್ದಾರ್ ಬಾಲಕೃಷ್ಣ, ತಾಲೂಕು ಪಂಚಾಯತ್ ಇಒ ಶ್ರೀನಾಥ್ ಗೌಡ, ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ರವಿಕುಮಾರ್, ಜನಪ್ರತಿನಿಧಿಗಳು, ಮುಖಂಡರು ಸೇರಿದಂತೆ ಜಿಲ್ಲೆಯ ರೈತರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
						 
						 
						 
						