ದೊಡ್ಡಬಳ್ಳಾಪುರ (Doddaballapura): ಮಾ.31 ರಂದು ಆಚರಿಸಲಿರುವ ಪವಿತ್ರ ಹಬ್ಬ ರಂಜಾನ್‌ಗೆ (ramzan) ತಾಲೂಕಿನಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಹಬ್ಬದ ಪ್ರಮುಖ ಭಾಗವಾದ ಉಪವಾಸ ವ್ರತ ಸೇರಿದಂತೆ ಧಾರ್ಮಿಕ ಆಚರಣೆಗಳನ್ನು ಅಬಾಲವೃದ್ಧಿಯಾಗಿ ಆಚರಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ನಿತ್ಯವೂ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಆಚರಣೆ, ರಂಜಾನ್ ಉಪವಾಸ ತಿಂಗಳನ್ನು ಸಂಭ್ರಮದಿಂದ ಬರ ಮಾಡಿಕೊಂಡಿರುವ ನಗರದ ಮುಸ್ಲಿಮರು ನಗರದ ಕೋಟೆ ರಸ್ತೆಯ ಖಿಲಾ ಜಾಮಿಯಾ ಮಸೀದಿ, ದರ್ಗಾದ ಜಾಮೀಯ ಮಸೀದಿ, ಕುಂಬಾರಪೇಟೆಯ ಜಾಮೀಯ ಮಸೀದಿ, ರೀಜಿಪುರದ ರೆಹಾನಿಯಾ ಮಸೀದಿ, ಗಂಗಾಧರಪುರದ ಮಿನಾ ಮಸೀದಿ, ಪ್ಲಾಂಟೇಷನ್ ಬಿಲಾಲ್ ಮಸೀದಿ, ಚಿಕ್ಕಪೇಟೆಯಲ್ಲಿನ ನೂರುಲ್ ಉದಾ ಮಸೀದಿ, ಮುತ್ತೂರಿನ ಮುನಾ ವರ ಮಸೀದಿ ಸೇರಿದಂತೆ ತಾಲೂಕಾದ್ಯಂತ ರಂಜಾನ್ ವಿಶೇಷ ಪ್ರಾರ್ಥನೆಗಳು ನಡೆಯುತ್ತಿವೆ.
ಮುಸ್ಲಿಮರು ಉಪವಾಸದ ನಂತರ ಇಪ್ತಿಯಾರ್ ಕೂಟಗಳನ್ನು ಆಯೋಜಿಸುತ್ತಿರುವುದು ಸಾಮಾನ್ಯವಾಗಿದೆ.
ಮುಸ್ಲಿಂ ಕುಟುಂಬಗಳಲ್ಲಿ ರಂಜಾನ್ ತಿಂಗಳಲ್ಲಿ ಮಹಿಳೆಯರು ಸೇರಿದಂತೆ ಎಲ್ಲರೂ ಉಪವಾಸ ಮಾಡುತ್ತಾರೆ. ಅನಾರೋಗ್ಯ, ಹೊರಗೆ ಕಷ್ಟಪಟ್ಟು ದುಡಿಯುವವರಿಗೆ ಉಪವಾಸದಿಂದ ರಿಯಾಯ್ತಿ ಇದೆ ಎನ್ನುತ್ತಾರೆ ಕನ್ನಡಪರ ಹೋರಾಟಗಾರ ಶ್ರೀನಗರ ಬಶೀರ್.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
					 
					 
						 
						 
						 
						