ದೊಡ್ಡಬಳ್ಳಾಪುರ: ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರರ ತಾಣಗಳ ಮೇಲೆ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ (Operation Sindoora) ಯಶಸ್ವಿಯಾಗಿದೆ.
ಈ ಯಶಸ್ಸಿನ ಬೆನ್ನಲ್ಲೇ ಮುಜರಾಯಿ ಇಲಾಖೆ ವ್ಯಾಪ್ತಿಯ ಎಲ್ಲಾ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಯೋಧರ ಹೆಸರಲ್ಲಿ ಸಂಕಲ್ಪ ಮಾಡಿಕೊಳ್ಳಲು ಆದೇಶ ಮಾಡಿದೆ.
ಈ ಬಗ್ಗೆ ಮುಜುರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಸೂಚನೆಯ ಮೇರೆಗೆ ಬುಧವಾರ ಮಧ್ಯಾಹ್ನ ಮುಜರಾಯಿ ಇಲಾಖೆ ಆಯುಕ್ತ ಡಾ.ವೆಂಕಟೇಶ್ ಎಂಎ ಈ ಕುರಿತು ಆದೇಶ ಹೊರಡಿಸಿದ್ದಾರೆ.
ಆದೇಶ ಪ್ರತಿಯಲ್ಲಿ ಪಹಲ್ಗಾಮ್ ದಾಳಿಗೆ ಉತ್ತರವಾಗಿ ಮಧ್ಯರಾತ್ರಿ ಭಾರತ ಸೇನೆಯು ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರರ ತಾಣಗಳ ಮೇಲೆ ಆಪರೇಷನ್ ಸಿಂದೂರ ಹೆಸರಿನಲ್ಲಿ ಕ್ಷಿಪಣಿ ದಾಳಿ ನಡೆಸಿ ಯಶಸ್ವಿಯಾಗಿದೆ.
ಈ ಬಗ್ಗೆ ಸಚಿವ ರಾಮಲಿಂಗಾರೆಡ್ಡಿಯವರು ಭಾರತೀಯ ಸೇನೆಗೆ ಶುಭಾಶಯ ತಿಳಿಸಿದ್ದಾರೆ.
ಮುಂದುವರೆದು, ಭಾರತೀಯ ಸೇನೆಯ ಹೆಸರಿನಲ್ಲಿ, ಭಾರತೀಯ ಯೋಧರಿಗೆ ಒಳಿತಾಗಲಿ ಎಂದು ಆರೈಸುತ್ತಾ, ಭಾರತೀಯ ಸೇನೆಗೆ ಮತ್ತಷ್ಟು ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿ ವಿಶೇಷ ಸಂಕಲ್ಪದೊಂದಿಗೆ ಪೂಜೆ ನೆರವೇರಿಸುವಂತೆ ಸೂಚನೆ ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಭಾರತೀಯ ಸೈನಿಕರಿಗಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು.